

ಹುಬ್ಬಳ್ಳಿ: ಮನೆಯ ಆಸುಪಾಸಿನಲ್ಲಿ ನಾಗರಹಾವು ಕಂಡುಬರುವುದು ಸರ್ವೇಸಾಮಾನ್ಯ. ಆದರೆ ಇಲ್ಲೊಂದು ಮನೆ ಬಳಿ ಒಂದಲ್ಲ ಎರಡಲ್ಲ ನಾಗರಹಾವುಗಳ ರಾಶಿಯೇ ಕಂಡುಬಂದಿದೆ. ಸುಮಾರು 25 ನಾಗರಹಾವುಗಳನ್ನು ಉರಗ ತಜ್ಞರೊಬ್ಬರು ಹಿಡಿದು ಕಾಡಿಗೆ ಬಿಡುವ ಮೂಲಕ ಸ್ಥಳೀಯರ ಆತಂಕ ನಿವಾರಿಸಿದ್ದಾರೆ.
ಧಾರವಾಡ ಜಿಲ್ಲೆಯ ಕುಂದಗೋಳ ತಾಲೂಕಿನ ಹಿರೇಹರಕುಣಿ ಗ್ರಾಮದ ಗ್ರಾಮದ ಬಸವರಾಜ ಕಟ್ಟೀಮನಿ ಎಂಬವರ ಮನೆ ಸಮೀಪ ಇಂಥ ಸನ್ನಿವೇಶ ಕಂಡುಬಂದಿದೆ. ಕಳೆದ ಕೆಲವು ದಿನಗಳಿಂದ ಇವರ ಮನೆ ಬಳಿ ನಾಗರಹಾವು ಓಡಾಡುತ್ತಿದ್ದುದರಿಂದ ಉರಗ ತಜ್ಞರನ್ನು ಕರೆಸಿದ್ದರು.
ಉರಗ ತಜ್ಞ ನಾಗರಹಾವೊಂದನ್ನು ಹಿಡಿದ ಕೆಲವೇ ಕ್ಷಣಗಳಲ್ಲಿ ಅಲ್ಲಿ ಅವಿತಿದ್ದ ನಾಗರಹಾವಿನ ಮರಿಗಳು ಕೂಡ ಪ್ರತ್ಯಕ್ಷವಾಗಿವೆ. ನೆಲದಲ್ಲಿ ಅವಿತಿದ್ದ ಅವುಗಳು ಹೊರಕ್ಕೆ ಬಂದಿದ್ದು, ಗ್ರಾಮಸ್ಥರು ಅವುಗಳನ್ನು ನೋಡಿ ಒಮ್ಮೆ ದಿಗ್ಭ್ರಮೆಗೊಂಡರು. ನಾಗರಹಾವು ಹಾಗೂ ಅದರ ಮರಿಗಳನ್ನು ಉರಗ ತಜ್ಞ ಹಿಡಿದು ಕಾಡಿಗೆ ಬಿಟ್ಟ ಬಳಿಕ ಗ್ರಾಮಸ್ಥರು ನಿಟ್ಟುಸಿರುಬಿಟ್ಟರು.