ಅಡಕೆಗೆ ಎಲೆಚುಕ್ಕಿ ಬಾಧೆ, ಉಚಿತ ಔಷಧಕ್ಕೆ ಬೆಳೆಗಾರರ ಮೊರೆ: ಕಂಟಕವಾಗುತ್ತಿದೆ ರೋಗ, ಬೆಳೆ ಇಳುವರಿಯಲ್ಲಿ ಭಾರಿ ಇಳಿಕೆ ಆತಂಕ

Areca Nut Follow Up
Published on

ಕಾರವಾರ/ಬೆಂಗಳೂರು: ಮಲೆನಾಡು ಸೇರಿ ರಾಜ್ಯದ ಅಡಕೆ ಬೆಳೆಯುವ ಪ್ರದೇಶಗಳಲ್ಲಿ ರೈತರ ನಿದ್ದೆಗೆಡಿಸಿರುವ ಎಲೆಚುಕ್ಕಿ ರೋಗ ನಿವಾರಿಸಿ ಬೆಳೆ ಉಳಿಸಿಕೊಳ್ಳಲು ತಕ್ಷಣವೇ ಉಚಿತ ಔಷಧವನ್ನು ವಿತರಿಸಬೇಕು. ರೋಗ ಉಲ್ಬಣಿಸದಂತೆ ಹಾಗೂ ಹೊಸ ರೂಪಾಂತರ ಪಡೆಯುತ್ತಿರುವ ಶಿಲೀಂಧ್ರಗಳ ಅಧ್ಯಯನಕ್ಕಾಗಿ ತಜ್ಞರನ್ನು ಕಳುಹಿಸಿಕೊಡಬೇಕು ಎಂದು ಬೆಳೆಗಾರರು ಸರ್ಕಾರವನ್ನು ಆಗ್ರಹಿಸಿದ್ದಾರೆ.

‘ವಿಜಯವಾಣಿ’ ಮುಖಪುಟದಲ್ಲಿ ಮಂಗಳವಾರ (ಅ.3) ಪ್ರಕಟಗೊಂಡಿ ರುವ ‘ಅಡಕೆಗೆ ಎಲೆಚುಕ್ಕಿ ಕಂಟಕ’ ಶೀರ್ಷಿಕೆಯ ವಿಶೇಷ ಲೇಖನ ಅಡಕೆ ಬೆಳೆಯುವ ಪ್ರದೇಶಗಳಲ್ಲಿ ಸಂಚಲನ ಸೃಷ್ಟಿಸಿದೆ. ಬೆಳೆಗಾರರನ್ನು ಕಂಗಾಲು ಮಾಡಿರುವ ಈ ರೋಗ ಉಲ್ಬಣಾವಸ್ಥೆ ತಲುಪುವ ಸಾಧ್ಯತೆ ಇರುವುದರಿಂದ ತಕ್ಷಣವೇ ತೊಟಗಾರಿಕೆ ಇಲಾಖೆಯ ಅಧಿಕಾರಿಗಳು ಹಾಗೂ ತಜ್ಞರು ಅಡಕೆ ತೋಟಗಳಿಗೆ ಭೇಟಿ ನೀಡಿ ಖುದ್ದು ಪರಿಶೀಲನೆ ಮಾಡಿ ಪರಿಹಾರ ಸೂಚಿಸಬೇಕೆಂದು ರೈತರು ಒತ್ತಾಯ ಮಾಡಿದ್ದಾರೆ.

‘ಚುಕ್ಕಿ ರೋಗ ಕಾಣಿಸಿಕೊಂಡ ಎರಡನೇ ವರ್ಷದಲ್ಲಿ ಇಳುವರಿ ಅರ್ಧಕ್ಕರ್ಧ ಕಡಿಮೆಯಾಗಿದೆ. ಮೊದಲು ಆರೂವರೆ ಕ್ವಿಂಟಾಲ್ ಅಡಕೆ ಬೆಳೆಯುತ್ತಿದ್ದ ನಮ್ಮ ತೋಟದಲ್ಲಿ ಈಗ 2 ವರ್ಷಗಳಲ್ಲಿ ಮೂರೂವರೆ ಕ್ವಿಂಟಾಲ್​ಗೂ ಕಡಿಮೆ ಬೆಳೆಯಾಗುತ್ತಿದೆ’ ಎಂದು ಸಿದ್ದಾಪುರ ತಾಲೂಕಿನ ಅಡಕೆ ಕೃಷಿಕ ಲಂಬೋದರ ಹೆಗಡೆ ಬಾಳಗೋಡು ಅಳಲು ತೋಡಿಕೊಂಡರು.

‘ಎಲೆಚುಕ್ಕಿ ರೋಗದಿಂದ ಅಡಕೆ ತೋಟ ಬಾಡುತ್ತಿದೆ. ಇಳುವರಿ ಕೈತಪು್ಪವ ಸಾಧ್ಯತೆ ಇದೆ. ನಾವು ಸರ್ಕಾರದ ಬಳಿ ಹಣಕಾಸಿನ ಪರಿಹಾರ ಕೇಳುತ್ತಿಲ್ಲ. ರೋಗಕ್ಕೆ ಔಷಧೀಯ ಪರಿಹಾರ ಕೇಳುತ್ತಿದ್ದೇವೆ’ ಎಂದು ಬಹಳಷ್ಟು ರೈತರು ಸರ್ಕಾರದ ನೆರವಿಗೆ ಮೊರೆ ಇಟ್ಟಿದ್ದಾರೆ.

ಎಲೆಚುಕ್ಕಿ ರೋಗ ಅಡಕೆ ಬೆಳೆಗಾರರನ್ನು ಕಾಡುತ್ತಿದ್ದು, ಈ ಸಂಬಂಧ ‘ವಿಜಯವಾಣಿ’ ತನ್ನ ಮುಖಪುಟದಲ್ಲಿ ಪ್ರಮುಖ ವರದಿಯನ್ನಾಗಿ ಬಿಂಬಿಸಿದ್ದು ಶ್ಲಾಘನೀಯ. ನಮ್ಮ ಸರ್ಕಾರದ ಅವಧಿಯಲ್ಲಿ ಈ ರೋಗ ನಿವಾರಣೆಗೆ ಔಷಧ ಶೋಧ ಹಾಗೂ ಉಚಿತ ಔಷಧ ವಿತರಣೆಗೆ 10 ಕೋಟಿ ರೂ. ಮೀಸಲಿರಿಸಿತ್ತು. ಹಾಲಿ ಸರ್ಕಾರ ಅದನ್ನು ಮುಂದುವರಿಸುವಂತೆ ಒತ್ತಾಯಿಸಲು ಶೀಘ್ರವೇ ಅಡಕೆ ಬೆಳೆಗಾರರ ನಿಯೋಗ ಸಿಎಂರನ್ನು ಭೇಟಿ ಮಾಡಿ ಮನವರಿಕೆ ಮಾಡಿಕೊಡುತ್ತೇವೆ. | ಆರಗ ಜ್ಞಾನೇಂದ್ರ ಮಾಜಿ ಸಚಿವ, ಅಡಕೆ ಕಾರ್ಯಪಡೆ ಮಾಜಿ ಅಧ್ಯಕ್ಷ ಹಳದಿ ರೋಗ ಹಾಗೂ ಎಲೆ ಚುಕ್ಕಿ ರೋಗದಿಂದ ರೈತರಿಗೆ ಸಮಸ್ಯೆಯಾಗುತ್ತಿರುವ ಕುರಿತು ಇತ್ತೀಚಿನ ವಿಧಾನಸಭೆ ಅಧಿವೇಶನದಲ್ಲಿ ಪ್ರಸ್ತಾಪಿಸಿದ್ದೆ. ಅದರ ಆಧಾರದ ಮೇಲೆ ಸೂಕ್ತ ಕ್ರಮ ಜರುಗಿಸುವಂತೆ ಸಿಎಂ ಆಪ್ತ ಕಾರ್ಯದರ್ಶಿ ಅವರು ತೋಟಗಾರಿಕೆ ಮತ್ತು ರೇಷ್ಮೆ ಇಲಾಖೆಯ ಪ್ರಧಾನ ಕಾರ್ಯದರ್ಶಿಗೆ ಪತ್ರ ಬರೆದಿದ್ದಾರೆ. ಇನ್ನೊಮ್ಮೆ ಸಿಎಂ ಜತೆ ಮಾತನಾಡಿ ರೈತರಿಗೆ ಉಚಿತ ಔಷಧ ವಿತರಣೆ ಬಗ್ಗೆ ಮನವಿ ಮಾಡುವೆ. | ಭೀಮಣ್ಣ ನಾಯ್ಕ, ಶಿರಸಿ ಶಾಸಕ

ನಿಯಂತ್ರಣ ಕ್ರಮ ಹೇಗೆ?: ರೈತರು ತಮ್ಮ ತೋಟದ ಮರಗಳಲ್ಲಿ ರೋಗ ಕಾಣಿಸಿ ಕೊಂಡಾಗ ಎಲೆ (ಸೋಗೆ) ತೆಗೆದು ಅದನ್ನು ಸುಟ್ಟು ಹಾಕಬೇಕು. ಇದರಿಂದ ರೋಗ ಹರಡುವ ಪ್ರಮಾಣ ಕಡಿಮೆಯಾಗುತ್ತದೆ. ಬೋರ್ಡೆ ದ್ರಾವಣ ಹೆಚ್ಚು ಸಿಂಪಡಿಸಬೇಕು. ಸೆಪ್ಟೆಂಬರ್, ಅಕ್ಟೋಬರ್ ತಿಂಗಳಲ್ಲಿ ಪ್ರತಿ ಲೀ. ನೀರಿಗೆ 1 ಎಂಎಲ್ ಪ್ರೊಪಿಕೊಂಜೋಲ್ ಶೇ.25 ಇಸಿ ಅಥವಾ ಟೆಬುಕೊಂಜೋಲ್ ಸೇರಿಸಿ ಸಿಂಪಡಿಸಬೇಕು. ರೋಗದ ತೀವ್ರತೆಗೆ ಅನುಗುಣವಾಗಿ 25-30 ದಿನ ಅಂತರದಲ್ಲಿ ಪ್ರೊಪಿನೆಬ್ ಶೇ.70 ಡಬ್ಲುಪಿಯನ್ನು ಪ್ರತಿ ಲೀ. ನೀರಿಗೆ 2 ಗ್ರಾಂ ಸೇರಿಸಿ ಸಿಂಪಡಿಸಬೇಕೆಂದು ಶಿವಮೊಗ್ಗ ಕೃಷಿ ವಿವಿ ಸಸ್ಯರೋಗ ತಜ್ಞ ಡಾ. ಬಿ.ಗಂಗಾಧರ ನಾಯಕ್ ತಿಳಿಸಿದ್ದಾರೆ.

ಶಿಲೀಂಧ್ರದಿಂದ ಹರಡಲಿದೆ: ಫಿಲೋಸ್ಟಿಕ್ಟಾ ಅರೆಕೆ ಮತ್ತು ಕೊಲೆಟೋಟ್ರೆ್ತ್ರಕಂ ಎಂಬ ಶಿಲೀಂಧ್ರ ಅಡಕೆ ಎಲೆಚುಕ್ಕಿ ರೋಗ ಬರಲು ಕಾರಣವಾಗಿವೆ. ಇವು ಗಾಳಿ ಮೂಲಕ ಹರಡುತ್ತವೆ. ತೇವ ಭರಿತ ಬಿಸಿಲಿನ ವಾತಾವರಣ ಈ ರೋಗ ಹರಡಲು ಸೂಕ್ತವಾಗಿದೆ. 18 ಡಿಗ್ರಿ ಸೆ.ನಿಂದ 24 ಡಿಗ್ರಿ ಸೆ. ಉಷ್ಣಾಂಶವಿದ್ದು, ಶೇ.85 ತೇವಾಂಶ ಇದ್ದರೆ ರೋಗ ಬೇಗ ಹರಡುತ್ತದೆ.

ಮ್ಯಾನ್ಮಾರ್ ಅಡಕೆ ಗುಮ್ಮ: ಮ್ಯಾನ್ಮಾರ್​ನಿಂದ ಭಾರತಕ್ಕೆ ಬರುತ್ತಿದ್ದ 442 ಚೀಲ ಅಕ್ರಮ ಅಡಕೆಯನ್ನು ಅಸ್ಸಾಂ ರೈಫಲ್ಸ್ ಗಡಿ ಭದ್ರತಾ ಪಡೆ ಇತ್ತೀಚೆಗೆ ವಶಕ್ಕೆ ಪಡೆದಿದ್ದು, ಆ ದೇಶದಿಂದಲೂ ಅಕ್ರಮ ಅಡಕೆ ಸಾಗಣೆ ಜಾಲ ಇರುವುದು ಬಹಿರಂಗವಾಗಿದೆ. ಗಡಿ ಭದ್ರತಾ ಪಡೆ ಒಟ್ಟು 363 ಕ್ವಿಂಟಾಲ್ ಅಕ್ರಮ ಅಡಕೆಯನ್ನು ವಶಕ್ಕೆ ಪಡೆದು, ಇಬ್ಬರನ್ನು ಬಂಧಿಸಿದೆ. ಈ ಮೊದಲು ಭೂತಾನ್ ದೇಶದಿಂದ ಭಾರತಕ್ಕೆ ಅಕ್ರಮವಾಗಿ ಅಡಕೆ ಬರುತ್ತಿತ್ತು. ಆದರೆ, ಅಲ್ಲೇ ಅಡಕೆ ಇಳುವರಿ ಕಡಿಮೆ ಆಗಿದ್ದರಿಂದ ಭಾರತಕ್ಕೆ ಅಕ್ರಮ ಅಡಕೆ ಸಾಗಣೆ ನಿಂತಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net