

ಬೆಂಗಳೂರು: ಅರಣ್ಯ ಸಚಿವ ಈಶ್ವರ್ ಖಂಡ್ರೆಯವರನ್ನು ಟೀಕಿಸುವ ಭರದಲ್ಲಿ, ಬೇರೆಯವರ ಹೆಸರು ತಪ್ಪಾಗಿ ಉಚ್ಚರಿಸಿದ್ದು, ಇದಕ್ಕಾಗಿ ವಿಷಾದಿಸುತ್ತೇನೆ ಎಂದು ಮಾಜಿ ಗೃಹ ಸಚಿವ ಆರಗ ಜ್ಞಾನೇಂದ್ರ ಹೇಳಿಕೆ ನೀಡಿದ್ದಾರೆ.
ರಾಷ್ಟ್ರ ರಾಜಕಾರಣದಲ್ಲಿ ಉಲ್ಲೇಖಾರ್ಹ ಸಾಧನೆ ಮಾಡಿರುವ ಖರ್ಗೆಯವರ ಬಗ್ಗೆ ನನಗೆ ಅಪಾರ ಗೌರವ ಇದೆ. ನನ್ನ ಬಗ್ಗೆ ಅನ್ಯಥಾ ಭಾವಿಸಬಾರದು ಎಂದು ವಿನಂತಿಸುತ್ತೇನೆ ಎಂದಿದ್ದಾರೆ.
ಹೇಳಿಕೆಗಳನ್ನು ತಿರುಚಿ ತಮ್ಮ ರಾಜಕೀಯ ದುರುದ್ದೇಶಕ್ಕೆ ಬಳಸುವುದರಲ್ಲಿ ಕಾಂಗ್ರೆಸ್ಸಿನವರು ನಿಸ್ಸೀಮರು. ನಾನು ಉತ್ತರ ಕರ್ನಾಟಕದ ಬಿಸಿಲಿನ ತಾಪದ ಬಗ್ಗೆ ಉಲ್ಲೇಖ ಮಾಡಿ, ಅದಕ್ಕೆ ಖರ್ಗೆಯವರ ಉದಾಹರಣೆ ನೀಡಿದ್ದೇನೆ ಅಷ್ಟೇ ಎಂದು ಹೇಳಿದ್ದಾರೆ.
ಅರಣ್ಯ ಸಚಿವರಾಗಿರುವವರು ಹೆಚ್ಚಿನವರು ಆ ಭಾಗದ ಜನಪ್ರತಿನಿಧಿಗಳೇ ಆಗಿರುವುದರಿಂದ ಮಲೆನಾಡ ಜನಗಳ, ಇಲ್ಲಿನ ಮರಗಿಡಗಳ ಸಮಸ್ಯೆ ಬಗ್ಗೆ ಅವರಿಗೆ ಅರಿವು ಇರುವುದಿಲ್ಲ ಎನ್ನುವ ಅರ್ಥದಲ್ಲಿ ಹೇಳಿಕೆ ನೀಡಿದ್ದೇನೆ ವಿನಃ, ಮಲ್ಲಿಕಾರ್ಜುನ ಖರ್ಗೆ ಅವರ ಬಗ್ಗೆ ಯಾವುದೇ ಅವಹೇಳನೆ ಮಾಡಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆ.
ಸಮಸ್ಯೆಗಳಿಗೆ ಪರಿಹಾರ ಕಲ್ಪಿಸುವ ಬದಲು ಇಂತಹ ರಾಜಕೀಯ ಪ್ರೇರಿತ ಹೇಳಿಕೆ ನೀಡುವುದನ್ನು ಕಾಂಗ್ರೆಸ್ನವರು ನಿಲ್ಲಿಸಬೇಕು. ದಲಿತರನ್ನು ಗೌರವಿಸುವುದನ್ನು ಕಾಂಗ್ರೆಸ್ನಿಂದ ನಾವು ಕಲಿಯಬೇಕಾಗಿಲ್ಲ. ಡಾ.ಅಂಬೇಡ್ಕರ್ ಅವರನ್ನು ಕಾಂಗ್ರೆಸ್ ಹೇಗೆ ನಡೆಸಿಕೊಂಡಿದೆ ಎಂಬುದಕ್ಕೆ ಇತಿಹಾಸ ಸಾಕ್ಷಿಯಾಗಿದೆ. ರಾಜ್ಯದ ಜನತೆ ದಡ್ಡರಲ್ಲ ಎಂದು ಹೇಳಿದ್ದಾರೆ.