ಮಾಜಿ ಗೃಹ ಸಚಿವರನ್ನು ಬಂಧಿಸುವಂತೆ ಆಗ್ರಹ: ಅಖಿಲ ಭಾರತ ವೀರಶೈವ ಮಹಾಸಭಾದಿಂದ ಪೊಲೀಸರಿಗೆ ದೂರು

Araga Jnanendra
Published on

ಬೆಂಗಳೂರು: ಮಾಜಿ ಗೃಹ ಸಚಿವ ಆರಗ ಜ್ಞಾನೇಂದ್ರ ವಿರುದ್ಧ ಅಖಿಲ ಭಾರತ ವೀರಶೈವ ಮಹಾಸಭಾ ರಾಜಧಾನಿ ಬೆಂಗಳೂರಿನ ಸದಾಶಿವ ನಗರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದೆ. ಈ ಮೂಲಕ ವರ್ಣಸಂಘರ್ಷ ಪೊಲೀಸ್ ಠಾಣೆ ಮೆಟ್ಟಿಲೇರಿದಂತಾಗಿದೆ.

ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಹಾಗೂ ಸಚಿವ ಈಶ್ವರ ಖಂಡ್ರೆ ಅವರ ವಿರುದ್ಧ ಆರಗ ಜ್ಞಾನೇಂದ್ರ ಅವರು ಅವಹೇಳನಕಾರಿಯಾಗಿ ಮಾತನಾಡಿದ್ದ ಎಂಬ ಹಿನ್ನೆಲೆಯಲ್ಲಿ ಅಖಿಲ ಭಾರತ ವೀರಶೈವ ಮಹಾಸಭಾ ಈ ದೂರನ್ನು ದಾಖಲಿಸಿದೆ.

ಆರಗ ಜ್ಞಾನೇಂದ್ರ ನಿನ್ನೆ ತೀರ್ಥಹಳ್ಳಿಯಲ್ಲಿ ನಡೆದ ಬಿಜೆಪಿ ರ್ಯಾಲಿ ಸಂದರ್ಭದಲ್ಲಿ, 'ಕಲ್ಯಾಣ ಕರ್ನಾಟಕ ಭಾಗದವರು ಸುಟ್ಟು ಕರಕಲಿನಂತೆ ಇರುತ್ತಾರೆ, ಇದು ಖರ್ಗೆಯವರನ್ನು ನೋಡಿದರೆ ತಿಳಿಯುತ್ತದೆ. ಅರಣ್ಯ ಸಚಿವರಾದ ಈಶ್ವರ ಖಂಡ್ರೆಯವರ ತಲೆ ಮೇಲೆ ಕೂದಲು ಮುಚ್ಚಿಕೊಂಡಿರುವುದರಿಂದ ಕರಕಲಾಗದಂತೆ ಉಳಿದುಕೊಂಡಿರುತ್ತಾರೆ' ಹೇಳಿರುತ್ತಾರೆ ಎಂಬುದನ್ನು ದೂರಿನಲ್ಲಿ ಉಲ್ಲೇಖಿಸಲಾಗಿದೆ.

ಈ ಮೂಲಕ ಆರಗ ಜ್ಞಾನೇಂದ್ರ ಅಸಮಾನತೆ, ವರ್ಣಭೇದ, ಜನಾಂಗೀಯ ಮತ್ತು ಪ್ರಾಂತ್ಯವಾರು ನಿಂದನೆಗಳ ಮೂಲಕ ಸಮಾಜದಲ್ಲಿ ಅಶಾಂತಿ ಉಂಟುಮಾಡಲು ಪ್ರಯತ್ನಿಸಿರುತ್ತಾರೆ. ಅವರನ್ನು ತಕ್ಷಣವೇ ಬಂಧಿಸಿ ಕಾನೂನುಕ್ರಮ ಕೈಗೊಳ್ಳಬೇಕು ಎಂದು ಅಖಿಲ ಭಾರತ ವೀರಶೈವ ಮಹಾಸಭಾದ ಕಾರ್ಯದರ್ಶಿ ಎಚ್​.ಎಂ.ರೇಣುಕಾಪ್ರಸನ್ನ ದೂರಿನಲ್ಲಿ ತಿಳಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net