

ನವದೆಹಲಿ: ಪೌರತ್ವ ತಿದ್ದುಪಡಿ ಕಾನೂನು (ಸಿಎಎ) ನಿಯಮಗಳ ಅನುಷ್ಠಾನಕ್ಕೆ ತಡೆ ಕೋರಿ ಮಂಗಳವಾರ ಸುಪ್ರೀಂ ಕೋರ್ಟ್ಗೆ ಅರ್ಜಿಗಳನ್ನು ಸಲ್ಲಿಸಲಾಗಿದೆ. 2019ರ ಸಿಎಎಯ ಸಾಂವಿಧಾನಿಕ ಸಿಂಧುತ್ವ ಪ್ರಶ್ನಿಸಿ ಸಲ್ಲಿಸಲಾಗಿರುವ ಅರ್ಜಿ ಇತ್ಯರ್ಥ ಆಗುವವರೆಗೆ ತಡೆ ನೀಡುವಂತೆ ಅರ್ಜಿದಾರರು ಮನವಿ ಮಾಡಿದ್ದಾರೆ. ಲೋಕಸಭೆ ಚುನಾವಣೆಯ ಹೊಸ್ತಿಲಲ್ಲಿ, ಸಿಎಎ ನಿಯಮಗಳ ಜಾರಿ ಕುರಿತು ಕೇಂದ್ರ ಗೃಹ ಸಚಿವಾಲಯ ಮಂಗಳವಾರ ಅಧಿಸೂಚನೆ ಹೊರಡಿಸಿತ್ತು.
ಪೌರತ್ವ ಕಾನೂನಿನ ಸಿಂಧುತ್ವ ಪ್ರಶ್ನಿಸಿ ಅರ್ಜಿ ಸಲ್ಲಿಸಿದ ಪಕ್ಷಗಾರರಲ್ಲಿ ಒಂದಾದ ಇಂಡಿಯನ್ ಯೂನಿಯನ್ ಮುಸ್ಲಿಂ ಲೀಗ್ (ಐಯುಎಂಎಲ್), ಅಧಿಸೂಚನೆ ವಿರುದ್ಧ ಕೋರ್ಟ್ ಮೆಟ್ಟಿಲೇರಿದೆ. ಮುಸ್ಲಿಂ ಸಮುದಾಯದ ಜನರ ವಿರುದ್ಧ ಯಾವುದೇ ಬಲವಂತದ ಕ್ರಮಗಳನ್ನು ಕೈಗೊಳ್ಳದಂತೆ ಸರ್ಕಾರಕ್ಕೆ ನಿರ್ದೇಶಿಸಬೇಕೆಂದು ಲೀಗ್ ಕೋರಿದೆ. ಭಾರತ ಪ್ರಜಾಸತ್ತಾತ್ಮಕ ಯುವಜನ ಫೆಡರೇಷನ್ (ಡಿವೈಎಫ್ಐ), ತಡೆ ಕೋರಿದ ಇನ್ನೊಂದು ಸಂಘಟನೆಯಾಗಿದೆ. ಸಿಎಎ ಸಾಂವಿಧಾನಿಕ ಸಿಂಧುತ್ವ ಪ್ರಶ್ನಿಸಿ ಸವೋಚ್ಛ ನ್ಯಾಯಾಲಯಕ್ಕೆ ಈಗಾಗಲೇ ಸಲ್ಲಿಸಲಾಗಿರುವ ಹಲವು ಅರ್ಜಿಗಳು ಇತ್ಯರ್ಥಕ್ಕೆ ಬಾಕಿ ಇವೆ.
ಉತ್ತರ ಪ್ರದೇಶ ಶಾಂತ: ಸೋಮವಾರ ಸಿಎಎ ನಿಯಮಗಳ ಅಧಿಸೂಚನೆ ಪ್ರಕಟಿಸಿದಾಗಿನಿಂದ ಉತ್ತರ ಪ್ರದೇಶದಲ್ಲಿ ಯಾವುದೇ ಅಹಿತಕರ ಘಟನೆಗಳು ವರದಿ ಆಗಿಲ್ಲ ಎಂದು ಡಿಜಿಪಿ ಪ್ರಶಾಂತ್ ಕುಮಾರ್ ಮಂಗಳವಾರ ತಿಳಿಸಿದ್ದಾರೆ.
ಪ್ರತಿಭಟನೆಯ ದನಿ: ಸಿಎಎ ವಿರುದ್ಧ 2019ರ ಚಳವಳಿಯಲ್ಲಿ ಸಕ್ರಿಯವಾಗಿದ್ದ ದೆಹಲಿಯ ಜಾಮಿಯಾ ಮಿಲಿಯಾ ಇಸ್ಲಾಮಿಯಾ ವಿಶ್ವವಿದ್ಯಾಲಯದ ವಿದ್ಯಾರ್ಥಿಗಳ ಒಂದು ಗುಂಪು ಪ್ರತಿಭಟಿಸಿ ಸಿಎಎ ವಾಪಸ್ ಪಡೆಯುವಂತೆ ಒತ್ತಾಯಿಸಿದರು. ಅಸ್ಸಾಂನಲ್ಲಿ ಪ್ರತಿಭಟನೆಗಳು ನಡೆದಿದ್ದು ಪ್ರಧಾನಿ ಮೋದಿ, ಗೃಹ ಸಚಿವ ಅಮಿತ್ ಷಾರ ಪ್ರತಿಕೃತಿಗಳನ್ನು ಸುಡಲಾಗಿದೆ. ಕಾನೂನಿನ ಪ್ರತಿಗಳನ್ನೂ ದಹಿಸಲಾಗಿದೆ. ಸಿಎಎ ಸಂವಿಧಾನದ ಜಾತ್ಯತೀತ ಸ್ವರೂಪಕ್ಕೆ ವ್ಯತಿರಿಕ್ತವಾಗಿದೆ ಎಂದು ಸಿಪಿಐ (ಎಂ) ಪಾಲಿಟ್ಬ್ಯೂರೋ ಟೀಕಿಸಿದೆ.
ಸ್ವಾಗತ-ವಿರೋಧ: ಪ್ರತಿಯೊಬ್ಬ ಭಾರತೀಯ ಮುಸ್ಲಿಮರು ಸಿಎಎಯನ್ನು ಸ್ವಾಗತಿಸಬೇಕು ಎಂದು ಅಖಿಲ ಭಾರತ ಮುಸ್ಲಿಂ ಜಮಾತ್ ಅಧ್ಯಕ್ಷ ಮೌಲಾನಾ ಷಹಾಬುದ್ದಿನ್ ರಿಜ್ವಿ ಬರೇಲ್ವಿ ಹೇಳಿದ್ದಾರೆ. ಆದರೆ, ಅಖಿಲ ಭಾರತ ಮಜ್ಲಿಸ್ ಎ ಇತ್ತೆಹಾದುಲ್ ಮುಸ್ಲಿಮೀನ್, ಕಾನೂನನ್ನು ವಿರೋಧಿಸಿದೆ. ಸಿಎಎ-ವಿರೋಧಿ ಚಳವಳಿಯ ಕೇಂದ್ರ ಬಿಂದುವಾಗಿದ್ದ ದಕ್ಷಿಣ ದೆಹಲಿಯ ಷಹೀನ್ ಬಾಗ್ ಪ್ರದೇಶದಲ್ಲಿ ಭಯ ಮತ್ತು ಅನಿಶ್ಚಯತೆಯ ಆತಂಕ ಮನೆ ಮಾಡಿದೆ.
ರಮ್ಜಾನ್ ಕೊಡುಗೆ: ವದಂತಿಗಳನ್ನು ನಂಬದಂತೆ ಬಿಜೆಪಿ ನಾಯಕ ಷಾಹನ ವಾಜ್ ಹುಸೇನ್ ಕೋರಿದ್ದಾರೆ. ಈ ಕಾನೂನಿನಿಂದ ಯಾರೂ ಪೌರತ್ವ ಕಳೆದು ಕೊಳ್ಳುವುದಿಲ್ಲ ಎಂದಿದ್ದಾರೆ. ಸೂಕ್ತ ಪ್ರಕ್ರಿಯೆ ಅನುಸರಿಸಿ ಸಿಎಎ ಜಾರಿ ಮಾಡಲಾಗಿದೆ ಎಂದು ಮಧ್ಯಪ್ರದೇಶದ ಸಚಿವ ಪ್ರಹ್ಲಾದ್ ಪಟೇಲ್ ಹೇಳಿದ್ದಾರೆ. ಸಿಎಎ ತಮಗೆ ಆಶಾಕಿರಣ ಎಂದು ದೆಹಲಿಯಲ್ಲಿರುವ ಪಾಕಿಸ್ತಾನಿ ಹಿಂದು ನಿರಾಶ್ರಿತರು ಹೇಳಿದ್ದಾರೆ. ಸಿಎಎ ಮುಸ್ಲಿಮರಿಗೆ ಬಿಜೆಪಿಯ ರಮ್ಜಾನ್ ಕೊಡುಗೆ ಎಂದು ನ್ಯಾಷನಲ್ ಕಾನ್ಪರೆನ್ಸ್ ಉಪಾಧ್ಯಕ್ಷ ಒಮರ್ ಅಬ್ದುಲ್ಲಾ ವ್ಯಂಗ್ಯವಾಡಿದ್ದಾರೆ.
ಲೋಕಸಭಾ ಚುನಾವಣೆ ಸಂದರ್ಭದಲ್ಲಿ ಸಿಎಎ ಏಕೆ ಜಾರಿ ಮಾಡಬೇಕಿತ್ತು? ಧರ್ಮದ ಆಧಾರದ ಮೇಲೆ ಪೌರತ್ವ ಕೊಡಲು ನಮ್ಮ ವಿರೋಧವಿದೆ.
| ಸಿದ್ದರಾಮಯ್ಯ ಸಿಎಂ
ಸಿಎಎ ಮೂಲಕ ಪೌರತ್ವ ನೀಡಿ ಪ್ರಧಾನಿ ಮೋದಿ ಹಿಂದು, ಜೈನ, ಬೌದ್ಧ ಮತ್ತು ಸಿಖ್ ನಿರಾಶ್ರಿತರನ್ನು ಗೌರವಿಸಿದ್ದಾರೆ.
| ಅಮಿತ್ ಷಾ ಗೃಹ ಸಚಿವ