

ವಿಜಯವಾಡ: ಕರೊನಾ ಲಸಿಕೆ ತೆಗೆದುಕೊಂಡ ಬಳಿಕ ಮೃತಪಟ್ಟ ಸ್ವಯಂಸೇವಕಿಯ ಕುಟುಂಬಕ್ಕೆ ಮುಖ್ಯಮಂತ್ರಿ ಪರಿಹಾರ ನಿಧಿಯಿಂದ ಆಂಧ್ರ ಸರ್ಕಾರ 50 ಲಕ್ಷ ರೂಪಾಯಿ ಪರಿಹಾರ ನೀಡಿದೆ.
ಲಲಿತಾ (28) ಮೃತ ಸ್ವಯಂ ಸೇವಕಿ. ಈಕೆ ಆಂಧ್ರದ ಶ್ರೀಕಾಕುಳಂ ಜಿಲ್ಲೆಯ ಪಲಾಸಾ ಮಂಡಲದ ನಿವಾಸಿ. ಭಾನುವಾರ ಇತರೆ ಎಂಟು ಮಂದಿಯೊಂದಿಗೆ ಲಲಿತಾ ಸಹ ಕರೊನಾ ಲಸಿಕೆ ಪಡೆದಿದ್ದಳು. ಲಸಿಕೆ ಪಡೆದ ಅಷ್ಟೂ ಮಂದಿಗೂ ತಲೆ ನೋವು ಮತ್ತು ಜ್ವರದಂತಹ ರೋಗ ಲಕ್ಷಣಗಳು ಕಾಣಿಸಿಕೊಂಡಿತ್ತು.
ಆದರೆ, ಲಲಿತಾರ ಪರಿಸ್ಥತಿ ಮಾತ್ರ ತುಂಬಾ ಗಂಭೀರವಾಗಿತ್ತು. ಇದಾದ ಬಳಿಕ ಮಾತ್ರೆಯನ್ನು ತೆಗೆದುಕೊಂಡಿದ್ದ ಆಕೆ ಸ್ವಲ್ಪ ಚೇತರಿಸಿಕೊಂಡಿದ್ದರು. ಆದರೆ, ಸ್ವಲ್ಪ ಸಮಯದ ಬಳಿಕ ಲಲಿತಾ ಮೃತಪಟ್ಟರು. ಮಾಹಿತಿ ತಿಳಿದು ಸ್ಥಳಕ್ಕೆ ಆಗಮಿಸಿದ ಅಧಿಕಾರಿಗಳು ಆಕೆಯ ಮೃತದೇಹವನ್ನು ಸ್ಥಳೀಯ ಸರ್ಕಾರಿ ಆಸ್ಪತ್ರೆಗೆ ಶವಪರೀಕ್ಷೆಗೆಂದು ದಾಖಲಿಸಿದ್ದಾರೆ.
ಪಶುಸಂಗೋಪನೆ ಮತ್ತು ಮೀನುಗಾರಿಕೆ ಸಚಿವ ಹಾಗೂ ಪಲಾಸಾ ಮಂಡಲದ ಶಾಸಕರಾಗಿರುವ ಡಾ.ಸಿದಿರಿ ಅಪ್ಪಲರಾಜು ಆಸ್ಪತ್ರೆಗೆ ಭೇಟಿ ಮಾಹಿತಿ ಮಾಹಿತಿಯನ್ನು ಪಡೆದು, ಲಲಿತಾ ಕುಟುಂಬದ ಜತೆ ಮಾತನಾಡಿದ್ದರು. ಅಲ್ಲದೆ, ಸರ್ಕಾರದಿಂದ ಹಣದ ನೆರವು ನೀಡುವುದಾಗಿಯು ಭರವಸೆ ನೀಡಿದ್ದರು.
ಇದೀಗ ಸಿಎಂ ಜಗನ್ ನೇತೃತ್ವದ ಸರ್ಕಾರ ಲಲಿತಾ ಕುಟುಂಬಕ್ಕೆ 50 ಲಕ್ಷ ರೂ. ಪರಿಹಾರ ನೀಡಿದೆ. ಲಲಿತಾಗೆ ಮದುವೆಯಾಗಿ ಓರ್ವ ಗಂಡು ಮಗನಿದ್ದಾನೆ. (ಏಜೆನ್ಸೀಸ್)