

ಕೋಲ್ಕತ: ಪಶ್ಚಿಮ ಬಂಗಾಳದ ವಿಧಾನಸಭಾ ಚುನಾವಣೆಗೆ ಇನ್ನೂ ಕೆಲ ತಿಂಗಳು ಬಾಕಿಯಿರುವಾಗಲೇ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿಗೆ ಅಘಾತದ ಮೇಲೆ ಅಘಾತ ಉಂಟಾಗಿದೆ. ಸುವೇಂದು ಅಧಿಕಾರಿ ಸೇರಿ ಏಳು ಶಾಸಕರು ಪಕ್ಷ ಬಿಟ್ಟು ಹೊರನಡೆದ ಬೆನ್ನಲ್ಲೇ ಇದೀಗ ಮತ್ತೋರ್ವ ಶಾಸಕ ಪಕ್ಷ ಬಿಟ್ಟು ಬಿಜೆಪಿ ಸೇರಿದ್ದಾರೆ.
ನಾಡಿಯಾ ಜಿಲ್ಲೆಯ ಸಂತಪುರದ ಶಾಸಕರಾದ ಅರಿಂದಂ ಭಟ್ಟಾಚಾರ್ಯರು ಟಿಎಂಸಿ ತ್ಯಜಿಸಿದ್ದು, ಬಿಜೆಪಿ ಸೇರಿದ್ದಾರೆ. ಬುಧವಾರದಂದು ಬಿಜೆಪಿಯ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಮತ್ತು ಕೈಲಾಶ್ ವಿಜಯವರ್ಗಿಯಾ ಅವರನ್ನು ನವದೆಹಲಿಯಲ್ಲಿ ಭೇಟಿಯಾದ ಅವರು, ಪಕ್ಷದ ರಾಷ್ಟ್ರೀಯ ಪ್ರಧಾನ ಕಚೇರಿಯಲ್ಲಿ ಬಿಜೆಪಿ ಸೇರಿದರು. ಮಮತಾ ಬ್ಯಾನರ್ಜಿ ನೇತೃತ್ವದ ಪಕ್ಷ ಪಶ್ಚಿಮ ಬಂಗಾಳ ಮತ್ತು ಯುವಜನರಿಗೆ ದೃಷ್ಟಿ ನೀಡುತ್ತಿಲ್ಲ ಎಂದು ಅವರು ದೂರಿದ್ದಾರೆ.
ಅರಿಂದಮ್ ಭಟ್ಟಾಚಾರ್ಯ ಅವರು 2016 ರಲ್ಲಿ ಕಾಂಗ್ರೆಸ್ ಟಿಕೆಟ್‌ನಲ್ಲಿ ವಿಧಾನಸಭಾ ಚುನಾವಣೆಯಲ್ಲಿ ಜಯಗಳಿಸಿದ್ದರು. ಅದರ ಮುಂದಿನ ವರ್ಷ ಟಿಎಂಸಿಗೆ ಸೇರ್ಪಡೆಯಾಗಿದ್ದರು.
ರಾಜ್ಯದಲ್ಲಿನ ಉದ್ಯೋಗದ ಕೊರತೆ ಮತ್ತು ಕೈಗಾರಿಕೀಕರಣದಿಂದಾಗಿ ರಾಜ್ಯದ ಯುವಕರು ಮಮತಾ ಬ್ಯಾನರ್ಜಿ ಸರ್ಕಾರದೊಂದಿಗೆ ಬಿರಾಸೆಗೊಂಡಿದ್ದಾರೆ ಎಂದು ಅವರು ಪ್ರತಿಪಾದಿಸಿದರು. ಪಶ್ಚಿಮ ಬಂಗಾಳ ಈಗ ಮೋದಿಜಿಯ ಆತ್ಮನಿರ್ಭರ ಭಾರತ ಮಂತ್ರದೊಂದಿಗೆ ಗುರುತಿಸಿಕೊಳ್ಳಲು ಬಯಸಿದೆ. ನಮಗೆ ಆತ್ಮನಿರ್ಭರ ಪಶ್ಚಿಮ ಬಂಗಾಳ ಬೇಕು, ಎಂದು ಅವರು ಹೇಳಿದರು. (ಏಜೆನ್ಸೀಸ್)