

ಭಾರತ-ಪಾಕಿಸ್ತಾನ ನಡುವಿನ ಕ್ರಿಕೆಟ್ ಪಂದ್ಯ ಎಂದರೆ ಈ ಎರಡು ರಾಷ್ಟ್ರಗಳ ಅಭಿಮಾನಿಗಳು ಮಾತ್ರವಲ್ಲ, ಇಡೀ ಜಗತ್ತೇ ಕುತೂಹಲದಿಂದ ಎದುರುನೋಡುತ್ತದೆ. ಇದಕ್ಕೆ ಕಾರಣ- ಎರಡೂ ತಂಡಗಳ ಮಧ್ಯೆ ಏರ್ಪಡುವ ಅತ್ಯುಗ್ರ ಸ್ಪರ್ಧೆ. 1947ರಲ್ಲಿ ಭಾರತ ವಿಭಜನೆಯಾಗಿ ಪಾಕಿಸ್ತಾನ ಜನ್ಮ ತಳೆಯುವುದರೊಂದಿಗೆ ಆರಂಭವಾದ ಉಭಯ ದೇಶಗಳ ನಡುವಿನ ಮನಸ್ತಾಪ ಈಗಲೂ ಎಲ್ಲ ಕ್ಷೇತ್ರಗಳಲ್ಲಿಯೂ ಮುಂದುವರಿದಿದೆ. ಭಾರತದೊಳಗೆ ನುಸುಳಿ ವಿಧ್ವಂಸಕ ಕೃತ್ಯ ನಡೆಸುವ ಭಯೋತ್ಪಾದಕರಿಗೆ ಪಾಕಿಸ್ತಾನ ಕುಮ್ಮಕ್ಕು ನೀಡುತ್ತಿರುವುದೇ ಸಮಸ್ಯೆಯ ಮೂಲ. ಹತ್ತುಹಲವು ಬಾರಿ ಭಾರತವೇ ಸ್ನೇಹಹಸ್ತ ಚಾಚಿದರೂ, ಮರುಘಳಿಗೆಯಲ್ಲೇ ಪಾಕಿಸ್ತಾನ ಉಗ್ರಕೃತ್ಯ ನಡೆಸಿ ವಿಶ್ವಾಸಘಾತಕತನ ತೋರಿದ ಘಟನೆಗಳು ಅಸಂಖ್ಯ.
2008ರಲ್ಲಿ ಪಾಕ್ನಿಂದ ಸಮುದ್ರಮಾರ್ಗದಲ್ಲಿ ಬಂದ ಭಯೋತ್ಪಾದಕರು ಭಾರತದ ವಾಣಿಜ್ಯ ರಾಜಧಾನಿ ಮುಂಬೈಯಲ್ಲಿ ಮೂರು ದಿನಗಳ ಕಾಲ ನಡೆಸಿದ ಹತ್ಯಾಕಾಂಡ ಮರೆಯಲಸಾಧ್ಯ. ಅಲ್ಲಿಂದ ಶುರುವಾದ ರಾಜಕೀಯ ಮತ್ತು ರಾಜತಾಂತ್ರಿಕ ಬಿಕ್ಕಟ್ಟು, ಕ್ರಿಕೆಟ್ ಮೇಲೂ ಸಾಕಷ್ಟು ಪರಿಣಾಮ ಬೀರಿದೆ. 2008ರಲ್ಲಿ ಕರಾಚಿಯಲ್ಲಿ ನಡೆದ ಏಷ್ಯಾಕಪ್ ಪಂದ್ಯವೇ ಕೊನೆ. ಮತ್ತೆಂದೂ ಭಾರತ ಕ್ರಿಕೆಟ್ ತಂಡ ಪಾಕಿಸ್ತಾನಕ್ಕೆ ಹೋಗಿಲ್ಲ. ಎರಡೂ ರಾಷ್ಟ್ರಗಳ ನಡುವಿನ ದ್ವಿಪಕ್ಷೀಯ ಸರಣಿ ನಿಂತೇ ಹೋಗಿದೆ. ಅಂತಾರಾಷ್ಟ್ರೀಯ ಕ್ರಿಕೆಟ್ ಸಮಿತಿ (ಐಸಿಸಿ) ಆಯೋಜಿಸುವ ಟೂರ್ನಿಗಳು ಭಾರತದಲ್ಲಿ ನಡೆದಾಗ ಅಥವಾ ಪಾಕಿಸ್ತಾನ ಬಿಟ್ಟು ಬೇರೆ ಯಾವುದಾದರೂ ರಾಷ್ಟ್ರದಲ್ಲಿ ನಡೆದಾಗ ಮಾತ್ರ ಭಾರತ-ಪಾಕ್ ತಂಡಗಳು ಮುಖಾಮುಖಿಯಾಗಿದ್ದುಂಟು. ಕಳೆದ ವರ್ಷ ಅಹ್ಮದಾಬಾದ್ನಲ್ಲಿ ನಡೆದ ಐಸಿಸಿ ವಿಶ್ವಕಪ್ ಪಂದ್ಯದಲ್ಲಿ ಪಾಕ್ ಪಾಲ್ಗೊಂಡಿತ್ತು. ಭಾರತವೂ ಪಾಕ್ಗೆ ಬಂದು ಆಡಬೇಕೆಂದು ಅದು ನಿರೀಕ್ಷಿಸಿತಾದರೂ ಭಾರತ ಕ್ರಿಕೆಟ್ ನಿಯಂತ್ರಣ ಮಂಡಳಿ (ಬಿಸಿಸಿಐ) ಸೊಪ್ಪು ಹಾಕಲಿಲ್ಲ. ಏಷ್ಯಾ ಕಪ್ ಪಂದ್ಯಗಳನ್ನೂ ಭಾರತ ತಂಡ ಶ್ರೀಲಂಕಾದಲ್ಲಿ ಆಡಿತು.
ಈ ಬಾರಿ ಪಾಕ್ ಆತಿಥ್ಯದಲ್ಲಿ ಮುಂದಿನ ವರ್ಷ ನಡೆಯಲಿರುವ ಐಸಿಸಿ ಚಾಂಪಿಯನ್ಸ್ ಟ್ರೋಫಿ ಟೂರ್ನಿಗೆ ಭಾರತ ತಂಡ ಪಾಕ್ಗೆ ಹೋಗುತ್ತದೆಯೇ ಎಂಬ ಕುತೂಹಲ ಎಲ್ಲರಲ್ಲಿತ್ತು. ಅದಕ್ಕೀಗ ತೆರೆ ಬಿದ್ದಿದೆ. ಪಾಕ್ನಲ್ಲಿ ನಡೆಯುವ ಪಂದ್ಯಗಳಲ್ಲಿ ತಾನು ಭಾಗವಹಿಸುವುದಿಲ್ಲ ಎಂದು ಬಿಸಿಸಿಐ ಸ್ಪಷ್ಟಪಡಿಸಿದೆ. ಇದರಿಂದ ಕಂಗೆಟ್ಟಿರುವ ಪಾಕ್, ಚಾಂಪಿಯನ್ಸ್ ಟ್ರೋಫಿ ಆತಿಥ್ಯದಿಂದ ತಾನು ಹಿಂದೆ ಸರಿಯುವ ಬಗ್ಗೆ ಚಿಂತನೆ ನಡೆಸಿದೆ. ಈ ಎಲ್ಲ ಹಿನ್ನೆಲೆಯಲ್ಲಿ ಇಡೀ ಪಂದ್ಯಾವಳಿಯನ್ನು ಐಸಿಸಿಯು ದಕ್ಷಿಣ ಆಫ್ರಿಕಾಕ್ಕೆ ಸ್ಥಳಾಂತರಿಸಿದರೂ ಆಶ್ಚರ್ಯವಿಲ್ಲ. ಭಾರತವು ಪಾಕ್ ವಿಷಯದಲ್ಲಿ ಈ ರೀತಿಯ ನಿಲುವು ತಳೆಯುತ್ತಿರುವುದು ಇದೇ ಮೊದಲಲ್ಲ. ಹಿಂದೆ ಅನೇಕ ಬಾರಿ ಪಾಕ್ಗೆ ಬಿಸಿಸಿಐ ಹೀಗೆ ಬಿಸಿ ಮುಟ್ಟಿಸಿದ್ದಿದೆ. ಆದರೂ ಪಾಕ್ ಪಾಠ ಕಲಿತಿಲ್ಲ. ಅಂತಾರಾಷ್ಟ್ರೀಯ ಮಟ್ಟದಲ್ಲಿ ಮುಖಭಂಗ ಅನುಭವಿಸಿದರೂ ಭಯೋತ್ಪಾದನೆಗೆ ಕುಮ್ಮಕ್ಕು ಕೊಡುವುದನ್ನು ನಿಲ್ಲಿಸಿಲ್ಲ. ಭಾರತದ ಈ ಸಲದ ನಿಲುವು ಕೂಡ ‘ದೇಶದ ಹಿತಕ್ಕೇ ಮೊದಲ ಆದ್ಯತೆ’ ಎಂಬುದನ್ನು ಪ್ರಬಲವಾಗಿ ಪ್ರತಿಪಾದಿಸಿದೆ. ಈಗಲಾದರೂ ಪಾಕ್ ಸರ್ಕಾರ ಮತ್ತು ರಾಜಕಾರಣಿಗಳು ಭಯೋತ್ಪಾದಕರ ನೆರಳಿನಿಂದ ಹೊರಬರಬೇಕಿದೆ.