ಕುನೋ ರಾಷ್ಟ್ರೀಯ ಉದ್ಯಾನದಲ್ಲಿ ಇನ್ನೊಂದು ಚೀತಾ ಸಾವು; ಐದು ತಿಂಗಳಲ್ಲಿ ಏಳು ಚೀತಾಗಳ ಮರಣ

Cheetah (1)
Published on

ನವದೆಹಲಿ: ಪ್ರಾಜೆಕ್ಟ್ ಚೀತಾ ಇನಿಷಿಯೇಟಿವ್ ಅಡಿ ದಕ್ಷಿಣ ಆಫ್ರಿಕದಿಂದ ಭಾರತಕ್ಕೆ ತರಲಾಗಿದ್ದ ಚೀತಾಗಳ ಪೈಕಿ ಇದೀಗ ಇನ್ನೊಂದು ಚೀತಾ ಕೂಡ ಸಾವಿಗೀಡಾಗಿದೆ. ಈ ಮೂಲಕ ಬರೀ ಐದು ತಿಂಗಳಲ್ಲಿ ಏಳು ಚೀತಾಗಳು ಮೃತಪಟ್ಟಂತಾಗಿದೆ.

ಮಧ್ಯಪ್ರದೇಶದ ಕುನೋ ರಾಷ್ಟ್ರೀಯ ಉದ್ಯಾನದಲ್ಲಿ ಇರಿಸಲಾಗಿದ್ದ ತೇಜಸ್ ಹೆಸರಿನ ಚೀತಾ ಇಂದು ಸಾವಿಗೀಡಾಗಿದೆ. ಇದಕ್ಕೂ ಮುನ್ನ ಮೂರು ಚೀತಾಗಳು ಮತ್ತು ಮೂರು ಚೀತಾ ಮರಿಗಳು ಸಾವಿಗೀಡಾಗಿದ್ದವು.

ಈಗ ಮೃತಪಟ್ಟಿರುವ ತೇಜಸ್, ಇನ್ನೊಂದು ಹೆಣ್ಣು ಚೀತಾ ಕಚ್ಚಿದ್ದರಿಂದ ತೀವ್ರ ಗಾಯಗೊಂಡು ಸಾವಿಗೀಡಾಗಿದೆ ಎಂದು ಹೇಳಲಾಗಿದೆ. ಇಂದು ಬೆಳಗ್ಗೆ 11ರ ಸುಮಾರಿಗೆ ಚೀತಾ ಆರೈಕೆ ಮಾಡುವವರು ಅದರ ಕುತ್ತಿಗೆ ಭಾಗದಲ್ಲಿ ಗಾಯವಾಗಿದ್ದನ್ನು ಗಮನಿಸಿದ್ದರು. ನಂತರ ಈ ಕುರಿತು ಪಾಲ್ಪರ್ ಹೆಡ್​ ಕ್ವಾರ್ಟರ್ಸ್​ನಲ್ಲಿದ್ದ ವನ್ಯಜೀವಿ ಪಶುವೈದ್ಯರ ಗಮನ ಸೆಳೆದಿದ್ದರು.

ತಕ್ಷಣ ವನ್ಯಜೀವಿ ಪರಿಣತರು ತೇಜಸ್​ಗೆ ಚಿಕಿತ್ಸೆ ನೀಡಿದ್ದರೂ ಮಧ್ಯಾಹ್ನ 2ರ ಸುಮಾರಿಗೆ ಅದು ಕೊನೆಯುಸಿರೆಳೆದಿದೆ. ತೇಜಸ್ ಮರಣೋತ್ತರ ಪರೀಕ್ಷೆಯ ವರದಿ ಬುಧವಾರ ಬರಲಿದ್ದು, ಆ ಬಳಿಕವಷ್ಟೇ ಸಾವಿಗೆ ಸಂಬಂಧಿಸಿದಂತೆ ಒಂದಷ್ಟು ಸ್ಪಷ್ಟತೆ ಸಿಗಲಿದೆ. ಒಟ್ಟು 20 ಚೀತಾಗಳನ್ನು ಕುನೋ ರಾಷ್ಟ್ರೀಯ ಉದ್ಯಾನದಲ್ಲಿ ಇರಿಸಲಾಗಿದ್ದು, ತೇಜಸ್ ಸಾವಿನ ಬಳಿಕ ಇನ್ನು 13 ಚೀತಾಗಳಷ್ಟೇ ಉಳಿದಿವೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net