ವಾದ ಮತ್ತು ಮುನಿಸು; ಪತಿ ಹಾಗೂ ಪತ್ನಿಯ ನಡುವಿನ ಸಂಬಂಧದ ಬಗ್ಗೆ ಪ್ರೇಮಾನಂದ ಮಹಾರಾಜ್ ಹೇಳಿದ್ದು ಹೀಗೆ| relationship

premanand
Published on

Premanand maharaj; ಗಂಡ ಹೆಂಡತಿಯ ನಡುವಿನ ಸಂಬಂಧ ಕೇವಲ ಮನೆಯನ್ನು ನಿರ್ವಹಿಸುವುದಕ್ಕೆ ಮಾತ್ರವಲ್ಲ. ಬದಲಿಗೆ ಇದು ಜೀವನದ ಅತ್ಯಂತ ಭಾವನಾತ್ಮಕವಾದ ಬಂಧವಾಗಿದೆ. ಇದು ವಿಶ್ವಾಸ, ಪ್ರೀತಿ, ಗೌರವ, ಕೋಪ, ಮತ್ತು ಅಸಮಾಧಾನವನ್ನು ಒಳಗೊಂಡಿರುತ್ತದೆ. ಇನ್ನೂ ಪ್ರೇಮಾನಂದ ಮಹಾರಾಜ್ ಅವರು ಪತಿ ಮತ್ತು ಪತ್ನಿಯ ನಡುವಿನ ಸಂಬಂಧದ ಮಹತ್ವದ ಬಗ್ಗೆ ಕೆಲವು ಸಲಹೆಯನ್ನು ನೀಡಿದ್ದಾರೆ.

ಪ್ರೇಮಾನಂದ್ ಮಹಾರಾಜ್ ಪ್ರಸಿದ್ಧ ಆಧ್ಯಾತ್ಮಿಕ ಗುರುವಾಗಿ, ಪತಿ ಹಾಗೂ ಪತ್ನಿ ಸಂಬಂಧಗಳ ಬಗ್ಗೆ ತಮ್ಮ ಅನೇಕ ಉಪದೇಶಗಳನ್ನು ನೀಡಿದ್ದಾರೆ. ಅವರ ಉಪನ್ಯಾಸಗಳು ಪ್ರೀತಿ, ಗೌರವ, ಸಂವಹನ ಮತ್ತು ಭಕ್ತಿಯ ಮೂಲಕ ಸಂಬಂಧಗಳನ್ನು ಬಲಪಡಿಸುವುದರ ಬಗ್ಗೆ ಕೇಂದ್ರೀಕರಿಸಿವೆ. ಕೋಪ, ವಾದ ಮತ್ತು ಮುನಿಸು ಇವುಗಳು ಸಂಬಂಧದಲ್ಲಿ ಸಹಜವಾಗಿ ಬರುತ್ತವೆ. ಆದರೆ ಅವುಗಳನ್ನು ಹೇಗೆ ನಿರ್ವಹಿಸುವುದು ಎಂಬುದರಲ್ಲಿ ತಾಳ್ಮೆ ಮತ್ತು ಗೌರವವೇ ಮುಖ್ಯ ಎಂದು ಮಹಾರಾಜ್ ಒತ್ತಿ ಹೇಳುತ್ತಾರೆ.

ಶ್ರೀಕೃಷ್ಣನ ಮೇಲಿನ ಭಕ್ತಿಗೆ ಹೆಸರುವಾಸಿಯಾಗಿರುವ ಸ್ವಾಮಿ ಪ್ರೇಮಾನಂದ ಮಹಾರಾಜ್ ಅವರು ಭಾರತದ ಹಿಂದೂ ಧರ್ಮದ ಶ್ರೇಷ್ಠ ಸಂತರಲ್ಲಿ ಒಬ್ಬರಾಗಿದ್ದಾರೆ. ಶ್ರೀಕೃಷ್ಣನಿಗೆ ಅರ್ಪಿತವಾದ ಧಾರ್ಮಿಕ ಕಾರ್ಯಕ್ರಮಗಳನ್ನು ಆಯೋಜಿಸುವುದರಲ್ಲಿ ಅವರು ಪ್ರಸಿದ್ಧರಾಗಿದ್ದಾರೆ. ಅವರು ಶ್ರೀಕೃಷ್ಣನ ಕಟ್ಟಾ ಭಕ್ತರಾಗಿದ್ದು, ಶ್ರೀಕೃಷ್ಣನ ಮೇಲಿನ ಪ್ರೀತಿ ಮತ್ತು ಭಕ್ತಿಯ ಮಹತ್ವವನ್ನು ಯಾವಾಗಲೂ ಒತ್ತಿ ಹೇಳುತ್ತಾರೆ.

ಸಂವಹನದ ಕೊರತೆ

ಪತಿ ಹಾಗೂ ಪತ್ನಿ ನಡುವಿನ ವಾದಗಳ ಮುಖ್ಯ ಕಾರಣ ಸರಿಯಾದ ಸಂವಹನದ ಕೊರತೆಯಂತೆ. ಇಬ್ಬರೂ ತಮ್ಮ-ತಮ್ಮಗಳ ಭಾವನೆಗಳನ್ನು ಗೌರವಿಸಿ, ತಿಳಿಯಲು ಪ್ರಯತ್ನಿಸಬೇಕು. ಇದರಿಂದ ಕೋಪ ಕಡಿಮೆಯಾಗಿ, ಪ್ರೀತಿ ಹೆಚ್ಚಾಗುತ್ತದೆ ಎಂದು ಹೇಳಲಾಗಿದೆ.

ಮುನಿಸು

ದೀರ್ಘಕಾಲದ ಮುನಿಸು ಸಂಬಂಧವನ್ನು ಹಾನಿಗೊಳಿಸುತ್ತದೆ. ಹಾಗಾಗಿ ಒಬ್ಬರೊಬ್ಬರ ದೃಷ್ಟಿಕೋನವನ್ನು ಅರ್ಥಮಾಡಿಕೊಳ್ಳಿ ಮತ್ತು ಗೌರವಿಸಿ. ಪತಿ ಮತ್ತು ಪತ್ನಿ ಸಂಬಂಧದಲ್ಲಿ ಗೌರವ ಮತ್ತು ತಿಳುವಳಿಕೆಯೇ ಪ್ರೀತಿಯನ್ನು ಹೆಚ್ಚಿಸುತ್ತವೆ ಎಂದು ಪ್ರೇಮಾನಂದರು ವಿವರಿಸಿದ್ದಾರೆ.

ಪರಸ್ಪರ ಪ್ರೀತಿ ಬಂಧನ

ನೀವು ಯಾರನ್ನಾದರೂ ಪ್ರೀತಿಸಿದರೆ, ಅದನ್ನು ಶುದ್ಧ ಪ್ರೀತಿಯಾಗಿ ಮಾಡಿ, ರಾಧಾ ರಾಣಿಯಂತಹ ಭಕ್ತಿಯ ಮಾರ್ಗದಲ್ಲಿ ನಡೆಯಿರಿ. ಇದರಿಂದ ಸಂಬಂಧಕ್ಕೆ ನಿಜವಾದ ಅರ್ಥ ಬರುತ್ತದೆ ಎಂದು ಮಹಾರಾಜ್ ದಂಪತಿಗೆ ಉಪದೇಶಿಸಿದ್ದಾರೆ.

ಕಠಿಣ ಮಾತುಗಳು

ಕೋಪ ಸಹಜ, ಆದರೆ ಅದರಲ್ಲಿ ಗೌರವ ಕಳೆದುಕೊಳ್ಳಬಾರದು. ಒಪ್ಪಂದ ಮತ್ತು ಪ್ರೀತಿಯಿಂದ ಮಾತನಾಡಿ, ತಪ್ಪನ್ನು ಒಪ್ಪಿಕೊಂಡು ಕ್ಷಮೆಯಾಚಿಸಿ. ಇದು ಸಂಬಂಧವನ್ನು ಬಲಪಡಿಸುತ್ತದೆ ಎಂದು ಪ್ರೇಮಾನಂದರು ಹೇಳಿದ್ದಾರೆ.

ಹಿಂದಿನ ಸಂಬಂಧದ ಚರ್ಚೆ

ಮದುವೆಯ ಬಳಿಕ ಹಿಂದಿನ ಪ್ರೀತಿಯ ಸಂಬಂಧಗಳ ಬಗ್ಗೆ ಚರ್ಚೆ ಮಾಡಬಾರದು. ಇದು ನಕಾರಾತ್ಮಕತೆ ತರುತ್ತದೆ. ಮದುವೆ ಒಂದು ಹೊಸ ಆರಂಭವಾಗಿದ್ದು, ಈ ಸಂದರ್ಭದಲ್ಲಿ ಹಿಂದಿನ ಸಂಬಂಧಗಳ ಬಗ್ಗೆ ಮಾತನಾಡುವುದು ಸಂಬಂಧದಲ್ಲಿ ಮುನಿಸನ್ನು ತರುತ್ತದೆ. ಇದರಿಂದ ವಿಶ್ವಾಸ ಕಡಿಮೆಯಾಗಿ, ಭಾವನಾತ್ಮಕ ಗಾಯಗಳು ಉಂಟಾಗಬಹುದು.  ಹಾಗಾಗಿ ಹಿಂದಿನದ್ದನ್ನು ಬಿಟ್ಟು, ಪತಿ-ಪತ್ನಿಯಾಗಿ ಒಗ್ಗಟ್ಟಿನ ಜೀವನದ ಮೇಲೆ ಕೇಂದ್ರೀಕರಿಸಿ ಎನ್ನುತ್ತಾರೆ.

ಈ ಮೇಲೆ ನೀಡಲಾದ ಮಾಹಿತಿಯನ್ನು ಧಾರ್ಮಿಕ ನಂಬಿಕೆಗಳು, ಆಧ್ಯಾತ್ಯಿಕ ಪಠ್ಯಗಳಿಂದ ಸಂಗ್ರಹಿಸಲಾಗಿದೆ.

(ಏಜೆನ್ಸೀಸ್)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net