

ಅಮರಾವತಿ: ಚಂದ್ರಬಾಬು ನಾಯ್ಡು ನೇತೃತ್ವದ ಟಿಡಿಪಿ ಸರ್ಕಾರವು ಜಗನ್ ಮೋಹನ್ ರೆಡ್ಡಿ ಮುಖ್ಯಮಂತ್ರಿಯಾಗಿದ್ದಾಗ ರಚಿಸಿದ್ದ ವಕ್ಫ್ ಮಂಡಳಿಯನ್ನು (Waqf Board) ವಿಸರ್ಜಿಸಿ ಆದೇಶ ಹೊರಡಿಸಿದೆ.
ಈ ನಿರ್ಧಾರವು ವಕ್ಫ್ (ತಿದ್ದುಪಡಿ) ಮಸೂದೆ 2024ರ ವಿರುದ್ಧ ಮುಸ್ಲಿಂ ಸಂಘಟನೆಗಳು ಮತ್ತು ವಿರೋಧ ಪಕ್ಷಗಳ ಪ್ರತಿಭಟನೆಯ ಬೆನ್ನಲ್ಲೇ ಹೊರಬಂದಿದ್ದು, ರಾಷ್ಟ್ರಮಟ್ಟದಲ್ಲಿ ಸದ್ದು ಮಾಡುತ್ತಿದೆ.
ನವೆಂಬರ್ 30ರಂದು ಹೊರಡಿಸಲಾಗಿರುವ ಆದೇಶದಲ್ಲಿ 2023ರಿಂದ ಆಂಧ್ರಪ್ರದೇಶ ವಕ್ಫ್ ಮಂಡಳಿ (Waqf Board) ಯಾವುದೇ ಕಾರ್ಯಚಟುವಟಿಕೆಗಳನ್ನು ನಿರ್ವಹಿಸಿಲ್ಲ. ಇದರ ಬಗ್ಗೆ ದೂರುಗಳೂ ಹೆಚ್ಚಾಗಿದ್ದವು. ಸುನ್ನಿ, ಶಿಯಾ ಮುಸ್ಲಿಂ ಪಂಗಡಗಳಿಗೆ ಸರಿಯಾದ ಪ್ರಾತಿನಿಧ್ಯವನ್ನು ಕಲ್ಪಿಸಿರಲಿಲ್ಲ. ಸದ್ಯದ ವಕ್ಫ್ ಮಂಡಳಿಯನ್ನು (Waqf Board) ರದ್ದು ಮಾಡಿ ಹೊಸದಾಗಿ ನಿರ್ಧಾರ ಕೈಗೊಳ್ಳಲಾಗುತ್ತದೆ.
ಬಾರ್ ಕೌನ್ಸಿಲ್ ವಿಭಾಗದಲ್ಲಿ ಸರಿಯಾದ ಮಾನದಂಡವಿಲ್ಲದ ಜೂನಿಯರ್ ವಕೀಲರನ್ನು ನೇಮಿಸಲಾಗಿದ್ದು, ಆದೇಶದ ಪ್ರಕಾರ ಪ್ರಕರಣಗಳನ್ನು ದಾಖಲಿಸಿದ ಹಿರಿಯ ವಕೀಲರನ್ನು ಒಳಗೊಂಡ ಹಿತಾಸಕ್ತಿ ಸಂಘರ್ಷಕ್ಕೆ ಕಾರಣವಾಗುತ್ತದೆ. ಇದರ ಬೆನ್ನಲ್ಲೇ ರಾಜ್ಯ ಸರ್ಕಾರ ನೂತನ ವಕ್ಫ್ ಮಂಡಳಿ (Waqf Board) ರಚನೆ ಮಾಡಲಿದೆ ಎಂದು ಸರ್ಕಾರ ಹೊರಡಿಸಿರುವ ಆದೇಶದಲ್ಲಿ ತಿಳಿಸಲಾಗಿದೆ.