

ಬೆಂಗಳೂರು: ರಾಜ್ಯದ ಕ್ರೀಡಾಪಟುಗಳಿಗೆ ಅಗತ್ಯ ಸವಲತ್ತು-ನೆರವು ನೀಡಲು ನಾನು ಸದಾ ಸಿದ್ದ. ರಾಜ್ಯ ಬಜೆಟ್ ನಲ್ಲಿ ಕ್ರೀಡಾ ಕ್ಷೇತ್ರಕ್ಕೆ ನಿರಂತರ ಅನುದಾನ ನೀಡಿದೆ. ರಾಜ್ಯದಿಂದ ಯಾರಾದರೂ ಒಲಿಂಪಿಕ್ಸ್ನಲ್ಲಿ ದೇಶಕ್ಕೆ ಒಂದು ಚಿನ್ನ ತನ್ನಿ ಎಂದು ಸಿಎಂ ಸಿದ್ದರಾಮಯ್ಯ (CM Siddaramaiah) ಕರೆ ನೀಡಿದ್ದಾರೆ.
ಕರ್ನಾಟಕ ಒಲಂಪಿಕ್ ಸಂಸ್ಥೆ ಯವನಿಕಾದಲ್ಲಿ ಆಯೋಜಿಸಿದ್ದ ಪ್ರಶಸ್ತಿ ಪ್ರದಾನ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಸಿಎಂ (CM Siddaramaiah), ಚಿನ್ನದ ಪದಕ ಪಡೆದವರಿಗೆ 6 ಕೋಟಿ ಹಣ ಮೀಸಲಿಟ್ಟಿದ್ದೀವಿ. ಬೆಳ್ಳಿ ಪದಕ ಪಡೆದವರಿಗೆ 4 ಕೋಟಿ ಹಣ ಇಟ್ಟಿದ್ದೇವೆ. ಆದರೆ ಯಾರೂ ಪದಕ ತರ್ತಾನೇ ಇಲ್ಲ. ದೇಶಕ್ಕೆ ಯಾರಾದರೂ ಚಿನ್ನ ತನ್ನಿ. ಕ್ರೀಡಾಪಟುಗಳು ರಾಜ್ಯ, ರಾಷ್ಟ್ರ, ಅಂತಾರಾಷ್ಟ್ರೀಯ ಮಟ್ಟದಲ್ಲಿ ಭಾಗವಹಿಸಬೇಕು ಎನ್ನುವ ಪ್ರೋತ್ಸಾಹದಾಯಕ ಉದ್ದೇಶದಿಂದ ಕರ್ನಾಟಕ ಒಲಿಂಪಿಕ್ ಸಂಸ್ಥೆ 22 ವರ್ಷಗಳಿಂದ ಈ ಪ್ರಶಸ್ತಿಗಳನ್ನು ನೀಡುತ್ತಿದೆ.
ಗೋವಿಂದರಾಜು ಅವರು ಒಲಿಂಪಿಕ್ ಸಂಸ್ಥೆ ಅಧ್ಯಕ್ಷರಾಗಿ ಕ್ರೀಡಾ ಕ್ಷೇತ್ರದ ಬೆಳವಣಿಗೆಗೆ ನಿರಂತರ ಶ್ರಮಿಸುತ್ತಿದ್ದಾರೆ. ನಾನು ಬಜೆಟ್ ರೂಪಿಸುವಾಗ ಚರ್ಚೆಯಲ್ಲಿ ಕುಳಿತು ಕ್ರೀಡಾಕ್ಷೇತ್ರಕ್ಕೆ ಅಗತ್ಯವಾದ ಎಲ್ಲವನ್ನೂ ಸೇರಿಸುತ್ತಾರೆ. ನಾನು ಕ್ರೀಡಾಪಟು ಅಲ್ಲದಿದ್ದರೂ ಕ್ರೀಡಾಪ್ರೇಮಿ. ನಾನು ಶಾಲಾ, ಕಾಲೇಜಿನಲ್ಲಿ ಎಲ್ಲಾ ಕ್ರೀಡೆಗಳಲ್ಲೂ ಭಾಗವಹಿಸುತ್ತಿದ್ದೆ. ಒಂದೂ ಪ್ರಶಸ್ತಿ ಬರಲಿಲ್ಲ. ಆದರೆ ಶಾಸಕರ ಕ್ರೀಡಾಕೂಟದಲ್ಲಿ ಸಿಕ್ಕಾಪಟ್ಟೆ ಪ್ರಶಸ್ತಿ ಬಂತು ಎಂದು ಮಾತನಾಡುವ ವೇಳೆ ಸ್ಮರಿಸಿದ್ದಾರೆ.
ಕ್ರೀಡೆಯಲ್ಲಿ ಸಣ್ಣ ಪುಟ್ಟ ದೇಶಗಳೆಲ್ಲಾ ಬಹಳ ಮುಂದಿವೆ. ಆದರೆ, ಭಾರತದಂತಹ ದೊಡ್ಡ ದೇಶಕ್ಕೆ ಒಲಂಪಿಕ್ ನಲ್ಲಿ ಒಂದೂ ಚಿನ್ನ ಬರಲಿಲ್ಲ ಎನ್ನುವುದು ಬೇಸರದ ಸಂಗತಿಯಾಗಿದೆ. ಹೀಗಾಗಿ ನಾನು ರಾಜ್ಯದ ಕ್ರೀಡಾಪಟುಗಳಿಗೆ ಅಗತ್ಯ ಇರುವ ಎಲ್ಲಾ ಅನುಕೂಲ ಕಲ್ಪಿಸಿಕೊಡಲು ಸಿದ್ಧನಿದ್ದೇನೆ. ರಾಜ್ಯದ ಕ್ರೀಡಾಪಟುಗಳು ದೇಶಕ್ಕೆ ಒಲಿಂಪಿಕ್ಸ್ನಲ್ಲಿ ಚಿನ್ನ ತರಲಿ ಎಂದು ಸಿಎಂ ಸಿದ್ದರಾಮಯ್ಯ ಆಶಿಸಿದ್ದಾರೆ.