ಜಡ್ಜ್​ಗಳು ಸರ್ಕಾರ ನಡೆಸಬೇಕಾ? ನ್ಯಾಯಾಧೀಶರ ವಿರುದ್ಧವೇ ಹರಿಹಾಯ್ದ ಆಂಧ್ರ ಸ್ಪೀಕರ್​

tammaneni sitaram
Published on

ಹೈದರಾಬಾದ್​: ಜನರ ಪ್ರತಿನಿಧಿಯಾಗಿ ಕೆಲಸ ಮಾಡುವ ಸರ್ಕಾರದ ಕಾರ್ಯಗಳಲ್ಲಿ ನ್ಯಾಯಾಂಗವು ಹಸ್ತಕ್ಷೇಪ ನಡೆಸುತ್ತಿದೆ ಎಂದು ಆಂಧ್ರಪ್ರದೇಶ ಸ್ಪೀಕರ್​ ವಿವಾದಾತ್ಮಕ ಹೇಳಿಕೆ ನೀಡಿದ್ದಾರೆ.

ತಿರುಪತಿಗೆ ಆಗಮಿಸಿದ್ದ ಸ್ಪೀಕರ್​ ತಮ್ಮನೇನಿ ಸೀತಾರಾಮ್ ಸುದ್ದಿಗಾರರೊಂದಿಗೆ ಮಾತನಾಡಿ, ನ್ಯಾಯಾಧೀಶರು ಸರ್ಕಾರ ನಡೆಸಬೇಕೆಂದು ಬಯಸುತ್ತಾರೆಯೇ ಎಂದು ಪ್ರಶ್ನಿಸುವ ಮೂಲಕ ವಿವಾದಕ್ಕೆ ನಾಂದಿ ಹಾಡಿದ್ದಾರೆ.

ಸರ್ಕಾರ ಏನು ಮಾಡಬೇಕೆಂಬುದನ್ನು ಕೋರ್ಟ್​ ನಿರ್ಧಾರ ಮಾಡುವುದಾದಲ್ಲಿ ಚುನಾವಣೆಯ ಅಗತ್ಯವೇನಿದೆ? ಜನರು ಶಾಸಕರು, ಸಂಸದರನ್ನು ಏಕೆ ಆಯ್ಕೆ ಮಾಡಬೇಕು? ಆಡಳಿತ ನಡೆಸಲು ಮುಖ್ಯಮಂತ್ರಿ ಯಾಕಿರಬೇಕು? ವಿಧಾನಸಭೆ, ಸ್ಪೀಕರ್​ ಅಗತ್ಯವೇನು ಎಂದು ಖಾರವಾಗಿಯೇ ಪ್ರಶ್ನಿಸಿದ್ದಾರೆ.

ನ್ಯಾಯಾಧೀಶರು ಕೋರ್ಟ್​ ಹಾಲ್​ಗಳಿಂದಲೇ ನೇರವಾಗಿ ಸರ್ಕಾರವನ್ನು ನಡೆಸುತ್ತ ರಾಜ್ಯವನ್ನು ಆಳಲು ಬಯಸುತ್ತಾರಾ ಎಂದು ಸೀತಾರಾಮ್​ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಆಡಳಿತಾರೂಢ ಜಗನ್​ಮೋಹನ್​ ರೆಡ್ಡಿ ಸರ್ಕಾರದ ವಿರುದ್ಧ ಹಲವು ತೀರ್ಪಗಳು ಬಂದ ಹಿನ್ನೆಲೆಯಲ್ಲಿ ಸೀತಾರಾಮ್​ ಈ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ. ದಲಿತ ವೈದ್ಯನ ಮೇಲೆ ಹಲ್ಲೆಯ ಸಿಬಿಐ ತನಿಖೆ, ಚುನಾವಣಾಧಿಕಾರಿಯಾಗಿ ನಿವೃತ್ತ ಐಎಎಸ್​ ಅಧಿಕಾರಿ ನಿಮ್ಮಗಢ ರಮೇಶ್​ಕುಮಾರ್​ ಮರುನೇಮಕ, ಸರ್ಕಾರ ಕಟ್ಟಡಗಳ ಮೇಲಿದ್ದ ವೈಎಸ್​ಆರ್​ ಪಕ್ಷದ ಬಣ್ಣವನ್ನು ತೆಗೆಸಿದ್ದು, ಗುಪ್ತಚರದ ವಿಭಾಗದ ನಿವೃತ್ತ ಮುಖ್ಯಸ್ಥನ ಅಮಾನತು ರದ್ದುಪಡಿಸಿದ್ದು... ಹೀಗೆ ಹಲವು ತೀರ್ಪುಗಳು ಸರ್ಕಾರದ ಮುಖಭಂಗಕ್ಕೆ ಕಾರಣವಾಗಿದ್ದರಿಂದ ಸ್ಪೀಕರ್​ ನ್ಯಾಯಾಲಯಗಳ ವಿರುದ್ಧ ಹಾಯ್ದಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net