ಆರೇ ತಿಂಗಳಲ್ಲಿ ಅಂಬಾನಿ ಮೀರಿಸುವಂತೆ ಬೆಳೆದ; ಬಳಿಕ ಹುದ್ದೆಯನ್ನೇ ತೊರೆದ ಜಾಕ್​ ಮಾ ಪ್ರತಿಸ್ಪರ್ಧಿ

colin huang
Published on

ನವದೆಹಲಿ: ಲಾಕ್​ಡೌನ್​ ಅವಧಿಯಲ್ಲಿ ಎಲ್ಲ ವಹಿವಾಟುಗಳು ನಷ್ಟದಲ್ಲಿದ್ದರೆ, ಭಾರಿ ಲಾಭ ಮಾಡಿಕೊಳ್ಳುತ್ತಿರುವ ಕಂಪನಿಗಳೆಂದರೆ ಇ-ಕಾಮರ್ಸ್​ ತಾಣಗಳು. ಮನೆ ಬಾಗಿಲಿಗೆ ವಸ್ತುಗಳನ್ನು ತಂದು ನೀಡುವ ಈ ವಾಣಿಜ್ಯ ತಾಣಗಳು ಜನರಿಗೀಗ ಅನಿವಾರ್ಯವಾಗಿವೆ.

ಅಂತೆಯೇ, ಕಾಲಿನ್​ ಹುವಾಂಗ್​ ಲಾಕ್​ಡೌನ್​ ಅವಧಿಯಲ್ಲಿ ಶ್ರೀಮಂತನಾದ ಪರಿ ಹೇಗಿತ್ತು ಎಂದರೆ, ಮುಖೇಶ್​ ಅಂಬಾನಿ ಸೇರಿ ಜಗತ್ತಿನ ಅತಿ ಶ್ರೀಮಂತರು ಎನಿಸಿಕೊಂಡವರೇ ಈ ಮಟ್ಟಿಗಿನ ಸಂಪತ್ತನ್ನು ಕೊಳ್ಳೆ ಹೊಡೆದಿರಲಿಲ್ಲ. ಈತನ ಸಂಪತ್ತು ಬೆಳೆದ ಪರಿಯೂ ಕೂಡ ದಾಖಲೆಯಾಗಿದೆ.

ಪಿನ್​ಡುವಾಡುವಾ ಎಂದು ಕರೆಯಲಾಗುವ ಚೀನಿ ಇ-ಕಾಮರ್ಸ್​ ಆ್ಯಪ್​ನ ಜನಕನೀತ. ಇದನ್ನು ಸ್ಥಾಪಿಸಿದ್ದು 2015ರಲ್ಲಿ. ಅಲ್ಲಿಂದ ಈತ ಯಾರೂ ಊಹಿಸದ ಮಟ್ಟಿಗೆ ಬೆಳೆದಿದ್ದಾನೆ. ಕಳೆದ ಆರು ತಿಂಗಳಲ್ಲಿ ಈತ ಗಳಿಸಿದ ಸಂಪತ್ತು 25 ಬಿಲಿಯನ್​ ಡಾಲರ್​ಗೂ ಅಧಿಕ (ಅಂದಾಜು 1.86 ಲಕ್ಷ ಕೋಟಿ ರೂ.). ಈತನ ಕಂಪನಿ ಹೊಂದಿರುವ ಮಾರುಕಟ್ಟೆ ಪಾಲು 100 ಬಿಲಿಯನ್​ ಡಾಲರ್​ಗೂ ಹೆಚ್ಚು (7.2 ಲಕ್ಷ ಕೋಟಿ ರೂ.). ಚೀನಾದ ಅತಿ ಶ್ರೀಮಂತರಾದ ಜಾಕ್​ ಮಾ ಹಾಗೂ ಪೋನಿ ಮಾ ಜತೆ ಗುರುತಿಸಿಕೊಂಡಿದ್ದ.

ಲಾಕ್​ಡೌನ್​ ಅವಧಿಯಲ್ಲಿ ಈತನ ಆ್ಯಪ್​ನ ಸಕ್ರಿಯ ಬಳಕೆದಾರರ ಸಂಖ್ಯೆ ಶೇ.68ರಷ್ಟು ಹೆಚ್ಚಾಗಿದ್ದರೆ, ಆದಾಯದಲ್ಲಿ ಶೇ.44 ಹೆಚ್ಚಳ ಕಂಡು ಬಂದಿದೆ. ಕೇವಲ ಎರಡು ವರ್ಷಗಳಲ್ಲಿ ಅಮೆರಿಕದಲ್ಲಿ ಈತನ ಕಂಪನಿಯ ವ್ಯವಹಾರ ನಾಲ್ಕು ಪಟ್ಟು ಹೆಚ್ಚಾಗಿತ್ತು. ಸದ್ಯ ಹುವಾಂಗ್​ ಕಂಪನಿಯ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಹುದ್ದೆಯಿಂದ ಕೆಳಗಿಳಿದ್ದಾನೆ. ಹೀಗಿದ್ದರೂ ಈತನ ಒಟ್ಟು ಆದಾಯವೀಗ 2.23 ಲಕ್ಷ ಕೋಟಿ.

ಅತಿ ಕಡಿಮೆ ಬೆಲೆಯಲ್ಲಿ, ಭಾರಿ ರಿಯಾಯಿತಿಯಲ್ಲಿ ವಸ್ತುಗಳ ಮಾರಾಟಕ್ಕೆ ತೊಡಗಿದ್ದೇ ಈತನ ವಹಿವಾಟು ವೃದ್ಧಿಸಲು ಕಾರಣವಾಯಿತು ಎಂಬುದು ತಜ್ಞರ ವಿಶ್ಲೇಷಣೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net