

ಬೆಂಗಳೂರು: ವಿಆರ್ಎಲ್ ಲಾಜಿಸ್ಟಿಕ್ಸ್ ಲಿಮಿಟೆಡ್ನಲ್ಲಿ ಗ್ರಾಹಕರ ಸೋಗಿನಲ್ಲಿ ಗಾಂಜಾ ಸಾಗಾಟಕ್ಕೆ ಯತ್ನಿಸಿರುವ ಪ್ರಕರಣ ಬೆಳಕಿಗೆ ಬಂದಿದೆ. ಲಾಜಿಸ್ಟಿಕ್ಸ್ನ ಮ್ಯಾನೇಜರ್ ಕರ್ತವ್ಯಪ್ರಜ್ಞೆಯಿಂದ ಪಾರ್ಸೆಲ್ನಲ್ಲಿದ್ದ 220 ಕೆಜಿ ಗಾಂಜಾವನ್ನು ಪೊಲೀಸರು ವಶಪಡಿಸಿಕೊಂಡಿದ್ದಾರೆ. ಡ್ರಗ್ಸ್ ಜಾಲ ಪತ್ತೆಗೆ ನೆರವಾದ ವಿಆರ್ಎಲ್ ಲಾಜಿಸ್ಟಿಕ್ಸ್ನ
ವಿಶಾಖಪಟ್ಟಣಂ ಶಾಖಾ ವ್ಯವಸ್ಥಾಪಕ ಎ.ವೈ.ನಾಯ್ಡು ಅವರ ಪ್ರಮಾಣಿಕತೆ ಹಾಗೂ ಕರ್ತವ್ಯಪ್ರಜ್ಞೆ ಮೆಚ್ಚಿ, ವಿಶಾಖಪಟ್ಟಣಂ ನಗರ ಪೊಲೀಸ್ ಆಯುಕ್ತ ತ್ರಿವಿಕ್ರಮ್ ವರ್ಮ ಸ್ಮರಣಿಕೆ ನೀಡಿ ಸನ್ಮಾನಿಸಿದ್ದಾರೆ.
ಲಾಜಿಸ್ಟಿಕ್ಸ್ ವಿಶಾಖಪಟ್ಟಣಂ ಶಾಖೆಗೆ ಬಂದಿದ್ದ ಪೆಡ್ಲರ್ಗಳು, ಮೂರು ಪಾರ್ಸೆಲ್ ಕೊರಿಯರ್ ಬುಕ್ಕಿಂಗ್ ಮಾಡಿದ್ದರು. ಬುಕ್ಕಿಂಗ್ ವೇಳೆ ಪಾರ್ಸೆಲ್ನಲ್ಲಿ ಗ್ಲೌಸ್ ಹಾಗೂ ಚರ್ಮದ ವಸ್ತುಗಳು ಇರುವುದಾಗಿ ಮಾಹಿತಿ ನೀಡಿದ್ದರು. ಪಾರ್ಸೆಲ್ ಬುಕ್ಕಿಂಗ್ನಲ್ಲಿದ್ದ ವ್ಯವಸ್ಥಾಪಕ ಎ.ವೈ. ನಾಯ್ಡು, ಅನುಮಾನ ಬಂದು ಪಾರ್ಸೆಲ್ ಪರಿಶೀಲನೆ ನಡೆಸಿದ್ದಾರೆ. ಪ್ಯಾಕೇಜ್ ತೆರೆದು ನೋಡಿದಾಗ ಅದರಲ್ಲಿ ಗಾಂಜಾ ಇರುವುದು ಬೆಳಕಿಗೆ ಬಂದಿದೆ. ತಕ್ಷಣ ಸ್ಥಳೀಯ ಪೊಲೀಸ್ ಠಾಣೆಗೆ ಮಾಹಿತಿ ನೀಡಿದ್ದರು. ಸ್ಥಳಕ್ಕೆ ಬಂದ ಪೊಲೀಸರು, ಪಾರ್ಸೆಲ್ ಪರಿಶೀಲನೆ ನಡೆಸಿದಾಗ ಗಾಂಜಾ ಎಂಬುದು ಖಚಿತವಾಗಿದೆ. 3 ಪಾರ್ಸೆಲ್ನಲ್ಲಿ ಅಂದಾಜು 220 ಕೆಜಿ ಗಾಂಜಾ ಪತ್ತೆಯಾಗಿದೆ. ಬುಕ್ಕಿಂಗ್ ಮಾಡಿದ್ದ ಬಿಲ್ ಮೂಲಕ ಪೊಲೀಸರು, ವಿಆರ್ಎಲ್ ಲಾಜಿಸ್ಟಿಕ್ಸ್ ಸಿಬ್ಬಂದಿ ಸಹಕಾರದೊಂದಿಗೆ ಆರೋಪಿಗಳನ್ನು ಪತ್ತೆಹಚ್ಚಿದ್ದಾರೆ. ಭಾರಿ ಪ್ರಮಾಣದ ಗಾಂಜಾ ಜಪ್ತಿ ಮತ್ತು ದಂಧೆಕೋರರ ಬಂಧನಕ್ಕೆ ಸಹಕಾರ ನೀಡಿದ ವಿಆರ್ಎಲ್ ಲಾಜಿಸ್ಟಿಕ್ಸ್ ವಿಶಾಖಪಟ್ಟಣಂ ಶಾಖಾ ವ್ಯವಸ್ಥಾಪಕ ಎ.ವೈ.ನಾಯ್ಡು ಕಾರ್ಯಕ್ಕೆ ಮೆಚ್ಚುಗೆ ವ್ಯಕ್ತಪಡಿಸಿದ್ದರು.
ಈ ವಿಷಯವನ್ನು ಸ್ಥಳೀಯ ಪೊಲೀಸರು ಮೇಲಧಿಕಾರಿಗಳಿಗೆ ವರದಿ ನೀಡಿದ್ದರು. ಇದರ ಮೇರೆಗೆ ವಿಶಾಖಪಟ್ಟಣಂ ನಗರ ಪೊಲೀಸ್ ಆಯುಕ್ತ ತ್ರಿವಿಕ್ರಮ್ ವರ್ಮ, ಗುರುವಾರ ಎ.ವೈ. ನಾಯ್ಡು ಅವರನ್ನು ಕಚೇರಿಗೆ ಕರೆಸಿಕೊಂಡು ಸನ್ಮಾನಿಸಿದ್ದಾರೆ. ಜತೆಗೆ ವಿಆರ್ಎಲ್ ಲಾಜಿಸ್ಟಿಕ್ಸ್ ಸಮಾಜಮುಖಿ ಕಾರ್ಯಕ್ಕೆ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.