

ಭುವನೇಶ್ವರ: ಪುರಿ ಜಗನ್ನಾಥ ಸ್ವಾಮಿ ದೇವಸ್ಥಾನದಲ್ಲಿ 46 ವರ್ಷಗಳ ಬಳಿಕ ರತ್ನ ಭಂಡಾರದ ರಹಸ್ಯ ಕೋಣೆಯನ್ನು ಇದೇ ತಿಂಗಳ 14ರಂದು ತೆರೆಯಲಾಯಿತು. ದೇವಸ್ಥಾನದ ಅರ್ಚಕರಿಂದ ವಿಶೇಷ ಪೂಜೆ ಕಾರ್ಯಗಳು ನೆರವೇರಿದ ನಂತರದಲ್ಲಿ ಅಧಿಕಾರಿಗಳು ಮತ್ತು ಕೋಣೆ ತೆರೆಯಲು ನಿಯೋಜನೆಗೊಂಡಿದ್ದ ತಂಡ ಅತ್ಯಂತ ಜಾಗರೂಕತೆಯಿಂದ ಕೋಟಿ ಕೋಟಿ ಬೆಲೆಬಾಳುವ ಆಭರಣಗಳನ್ನು ಸಂಗ್ರಹಿಸಿಡಲಾಗಿದ್ದ ಕೊಠಡಿಗಳನ್ನು ತೆರೆದರು. ದಿನದಿನದಿಂದ ದಿನಕ್ಕೆ ಬಗೆದಷ್ಟು ಬಯಲಾಗ್ತಿದೆ ರತ್ನ ಭಂಡಾರದ ರಹಸ್ಯ ಎನ್ನುವಂತೆ ಇದೀಗ ರತ್ನ ಭಂಡಾರದಲ್ಲಿ ಹಳೇ ಕಾಲದ ಶಸ್ತ್ರಾಸ್ತ್ರಗಳು ಪತ್ತೆಯಾಗಿವೆ.
ಪುರಿ ಜಗನ್ನಾಥ ದೇಗುಲದ ರತ್ನ ಭಂಡಾರದಲ್ಲಿ ಬಹುಕೋಟಿ ಬೆಲೆಬಾಳುವ ವಸ್ತುಗಳ ಸ್ಥಳಾಂತರದ ವೇಳೆ ಪತ್ತೆಯಾದ ವಸ್ತುಗಳಲ್ಲಿ ಪ್ರಾಚೀನ ಕಾಲದಲ್ಲಿ ಬಳಸಲಾಗುತ್ತಿದ್ದ ಕತ್ತಿ, ಈಟಿ ಮತ್ತು ಅನೇಕ ಆಯುಧಗಳು ಪತ್ತೆಯಾಗಿವೆ. 46 ವರ್ಷಗಳ ಕಾಲ ಮುಚ್ಚಿಹೋಗಿದ್ದ ರತ್ನ ಭಂಡಾರವನ್ನು ಒಡಿಶಾ ಸರ್ಕಾರವು ಇದೇ ಜುಲೈ 14ರಂದು ಪುನಃಸ್ಥಾಪನೆ ಮತ್ತು ದಾಸ್ತಾನುಗಳಿಗಾಗಿ ಮತ್ತೆ ತೆರೆಯಿತು.
"ರತ್ನ ಭಂಡಾರದಲ್ಲಿ ನಾವು ಕೆಲವು ಪುರಾತನ ವಿಗ್ರಹಗಳನ್ನು ಕಂಡುಕೊಂಡಿದ್ದೇವೆ. ಈಗ ಒಳಗಿನ ಭಾಗದಲ್ಲಿದ್ದ ಮರದ ಪೆಟ್ಟಿಗೆಯೊಳಗೆ ಕೆಲವು ಕತ್ತಿಗಳು ಮತ್ತು ಈಟಿಗಳು ಸಿಕ್ಕಿವೆ. ಆಯುಧಗಳು ತುಂಬಾ ಭಾರವಾಗಿದ್ದವು ಮತ್ತು ಕಪ್ಪು ಬಣ್ಣಕ್ಕೆ ತಿರುಗಿದ್ದವು ”ಎಂದು ಖಜಾನೆಗೆ ಪ್ರವೇಶಿಸಿದ 11 ಸದಸ್ಯರನ್ನು ಒಳಗೊಂಡಿದ್ದ ಸಮಿತಿಯ ಸದಸ್ಯರೊಬ್ಬರು ಮಾಹಿತಿ ಹಂಚಿಕೊಂಡರು.
ಇತಿಹಾಸಕಾರರು ಮತ್ತು ಪರಂಪರೆ ಸಂಶೋಧಕರು ವಶಪಡಿಸಿಕೊಂಡ ಯುದ್ಧ ಶಸ್ತ್ರಾಸ್ತ್ರಗಳ ಸರಿಯಾದ ಅಧ್ಯಯನಕ್ಕೆ ಒತ್ತಾಯಿಸಿದ್ದು, ಶಸ್ತ್ರಾಸ್ತ್ರಗಳು ಬಳಕೆಯಲ್ಲಿದ್ದ ಅವಧಿಯನ್ನು ಅಧ್ಯಯನ ಮಾಡಲು ಸರ್ಕಾರವು ಪ್ರಖ್ಯಾತ ಪುರಾತತ್ವಶಾಸ್ತ್ರಜ್ಞರನ್ನು ಆಯ್ಕೆ ಮಾಡಿಕೊಳ್ಳಬೇಕು ಎಂಬ ಒತ್ತಾಯವು ಕೂಡ ಕೇಳಿಬಂದಿದೆ. ಇನ್ನು ಪತ್ತೆಯಾದ ಹಳೇ ಕಾಲದ ಆಯುಧಗಳ ಬಗ್ಗೆ ಮಾತನಾಡಿದ ಇತಿಹಾಸ ತಜ್ಞ ಸಜೀವ್ ಮಿಶ್ರಾ, “ಇವು ಐತಿಹಾಸಿಕ ಮಹತ್ವವನ್ನು ಹೊಂದಿರುವ ಅತ್ಯಂತ ಅಪರೂಪದ ವಸ್ತುಗಳು. ಆಯುಧಗಳನ್ನು ಸರಿಯಾಗಿ ಸಂರಕ್ಷಿಸಿ ವಸ್ತುಸಂಗ್ರಹಾಲಯದಲ್ಲಿ ಪ್ರದರ್ಶಿಸಬೇಕು" ಎಂದು ಅಭಿಪ್ರಾಯಿಸಿದ್ದಾರೆ,(ಏಜೆನ್ಸೀಸ್).