

ದಾವಣಗೆರೆ: ಸುರಿಯುತ್ತಿದ್ದ ಧಾರಕಾರ ಮಳೆಯ ನಡುವೆ 8 ಕಿ.ಮೀ ದೂರ ಓಡುವ ಮೂಲಕ ಕೊಲೆಗೈದ ಆರೋಪಿಯನ್ನು ಪತ್ತೆಹಚ್ಚುವಲ್ಲಿ ಪೊಲೀಸ್ ಶ್ವಾನವೊಂದು ಯಶಸ್ವಿಯಾಗಿದೆ. ದಾವಣಗೆರೆಯ ಸಂತೆಬೆನ್ನೂರಿನಲ್ಲಿ ನಡೆದ ಹತ್ಯೆ ಘಟನೆಯನ್ನು ಭೇದಿಸಿದ ತುಂಗಾ, ಪೊಲೀಸರ ಕೆಲಸವನ್ನು ಬಹಳ ಸುಲಭ ಮಾಡಿಕೊಟ್ಟಿರುವುದು ಇದೀಗ ಎಲ್ಲರ ಮೆಚ್ಚುಗೆಗೆ ಪಾತ್ರವಾಗಿದೆ. ಕೊಲೆ ನಡೆದು ಒಂದು ದಿನ ಕಳೆಯುವ ಮುಂಚಿತವಾಗಿಯೇ ಅಪರಾಧಿಯನ್ನು ಪೊಲೀಸರಿಗೆ ಹುಡುಕಿಕೊಟ್ಟಿದ್ದು ತುಂಗಾ!
ಬಹುದಿನಗಳಿಂದ ತನ್ನ ಪತ್ನಿಯೊಂದಿಗೆ ಆಕೆಯ ಸ್ನೇಹಿತ ಅನೈತಿಕ ಸಂಬಂಧ ಹೊಂದಿದ್ದಾನೆ ಎಂದು ಶಂಕಿಸಿದ ಪತಿ, ಆತನನ್ನು ಮಾರಾಕಾಸ್ತ್ರಗಳಿಂದ ಹತ್ಯೆಗೈದ ಘಟನೆ ಬುಧವಾರ (ಜು.17) ರಾತ್ರಿ ದಾವಣಗೆರೆ ಜಿಲ್ಲೆಯ ಚನ್ನಗಿರಿ ತಾಲೂಕಿನ ಸಂತೆಬೆನ್ನೂರಿನ ಚನ್ನಾಪುರ ಗ್ರಾಮದಲ್ಲಿ ವರದಿಯಾಗಿತ್ತು. ವ್ಯಕ್ತಿಯನ್ನು ಹತ್ಯೆಗೈದು ಮನೆಗೆ ಹಿಂತಿರುಗಿದ್ದ ಪತಿ ರಂಗಸ್ವಾಮಿ ತನ್ನ ಪತ್ನಿ ರೂಪಾಳನ್ನು ದೊಣ್ಣೆಯಿಂದ ಹಿಗ್ಗಾಮುಗ್ಗಾ ಥಳಿಸಿ, ಇನ್ನೇನು ಕೊಲ್ಲಬೇಕು ಎನ್ನುವಷ್ಟರೊಳಗೆ ಪೊಲೀಸರ ಬಲೆಗೆ ಸಿಕ್ಕಿಬಿದ್ದಿದ್ದಾನೆ. ಇಲ್ಲಿ ರೋಚಕ ಸಂಗತಿ ಏನೆಂದರೆ ಅಪರಾಧಿ ರಂಗಸ್ವಾಮಿಯನ್ನು ಪತ್ತೆಹಚ್ಚಿದ್ದು ಪೊಲೀಸರಲ್ಲ ಬದಲಿಗೆ ಪೊಲೀಸ್ ಶ್ವಾನ 'ತುಂಗಾ 2'.
ಎಲ್ಲರಂತೆ ದಾಂಪತ್ಯ ಜೀವನ ನಡೆಸುತ್ತಿದ್ದ ದಾವಣಗೆರೆಯ ರಂಗಸ್ವಾಮಿ ಹಾಗೂ ರೂಪಾ ಬದುಕಿನಲ್ಲಿ ಅನುಮಾನ ಎಂಬ ರೋಗ ಹುಟ್ಟಿಕೊಂಡಿದ್ದೇ ಇಂತಹ ದುರ್ಘಟನೆಗೆ ಕಾರಣ. ವೃತ್ತಿಯಲ್ಲಿ ಬ್ಯೂಟಿಷಿಯನ್ ಆಗಿದ್ದ ರೂಪಾಗೆ ಮೃತ ಸಂತೋಷ ಜತೆ ಅನೈತಿಕ ಸಂಬಂಧ ಇದೆ ಎಂದು ಶಂಕಿಸಿದ ರಂಗಸ್ವಾಮಿ, ಆತನನ್ನು ಕೊಲೆ ಮಾಡುವ ನಿರ್ಧಾರಕ್ಕೆ ಬಂದಿದ್ದ. ತಡರಾತ್ರಿ ಸಂತೆಬೆನ್ನೂರಿನಲ್ಲಿ ಬಾಡಾ ರಸ್ತೆಯ ಪೆಟ್ರೋಲ್ ಬಂಕ್ ಸಮೀಪ ಮಾರಾಕಾಸ್ತ್ರ ಹಿಡಿದು ಬಂದ ರಂಗಸ್ವಾಮಿ, ಸಂತೋಷನನ್ನು ಬರ್ಬರವಾಗಿ ಹತ್ಯೆಗೈದಿದ್ದಾನೆ. ತದನಂತರ ಮನೆಗೆ ಓಡಿಬಂದು ಹೆಂಡತಿಯನ್ನು ಹಿಗ್ಗಾಮುಗ್ಗಾ ಥಳಿಸಿ, ಹಿಂಸಿಸಿದ್ದಾನೆ.
ಘಟನೆ ಬಗ್ಗೆ ಮಾಹಿತಿ ಪಡೆದ ಪೊಲೀಸರ ತಂಡ ತಕ್ಷಣವೇ ಸಂತೋಷ್ ಹತ್ಯೆಯಾದ ಸ್ಥಳದಲ್ಲಿ ಪೊಲೀಸ್ ಶ್ವಾನ ಎಂದೇ ಊರಿನಲ್ಲಿ ಖ್ಯಾತಿಗಳಿಸಿದ್ದ ತುಂಗಾ ಅನ್ನು ಆರೋಪಿ ಪತ್ತೆಹಚ್ಚುವಂತೆ ತಿಳಿಸಿದೆ. ರಂಗಸ್ವಾಮಿ ವಾಸನೆ ಕಂಡುಹಿಡಿದ ತುಂಗಾ, ಇದಕ್ಕಿದ್ದಂತೆ 8 ಕಿ.ಮೀ ದೂರ ನಿರಂತರವಾಗಿ ಓಡಲು ಪ್ರಾರಂಭಿಸಿದೆ. ಶ್ವಾನ ನೇರವಾಗಿ ಕೊಲೆಗೈದ ರಂಗಸ್ವಾಮಿ ಮನೆ ಮುಂದೆ ಬಂದು ನಿಂತಿದ್ದೇ ತಡ ಪೊಲೀಸರು ಆತನ ಮನಗೆ ನುಗ್ಗಿದಾಗ ತನ್ನ ಹೆಂಡತಿಗೆ ಥಳಿಸುತ್ತಿರುವುದು ಗೊತ್ತಾಗಿದೆ. ಕೂಡಲೇ ರಂಗಸ್ವಾಮಿ ಬಂಧಿಸಿದ ಪೊಲೀಸರು, ಸದ್ಯ ವಿಚಾರಣೆಗೆ ಒಳಪಡಿಸಿದ್ದಾರೆ.