ಸಿಟ್ಟು ಒಂದು ಬುಲ್ಶಿಟ್ಟು! ವಿವಾದಾತ್ಮಕ ಹೇಳಿಕೆ ಬೆನ್ನಲ್ಲೇ ಜೈನರ ಬಳಿ ಕ್ಷಮೆಯಾಚಿಸಿದ ಹಂಸಲೇಖ

Hamsalekha
Published on

ಬೆಂಗಳೂರು: ಜೈನ ಸಮುದಾಯದ ಬಗ್ಗೆ ವಿವಾದಾತ್ಮಕ ಹೇಳಿಕೆ ನೀಡಿ ಜೈನರ ಆಕ್ರೋಶಕ್ಕೆ ಗುರಿಯಾದ ಬೆನ್ನಲ್ಲೇ ಹಿರಿಯ ಸಂಗೀತ ಹಂಸಲೇಖ ಅವರು ಕ್ಷಮೆಯಾಚಿಸಿದ್ದಾರೆ.

ಕಳೆದ ಸೋಮವಾರ ಇಂದ್ರಜಿತ್ ಲಂಕೇಶ್​ ನಿರ್ದೇಶನದ ಗೌರಿ ಸಿನಿಮಾದ ಹಾಡುಗಳ ಬಿಡುಗಡೆ ಕಾರ್ಯಕ್ರಮ ನಡೆಯಿತು. ಈ ವೇಳೆ ಮುಖ್ಯ ಅತಿಥಿಯಾಗಿ ಆಗಮಿಸಿದ್ದ ಹಂಸಲೇಖ ಅವರು ಹಾಡುಗಳನ್ನು ಬಿಡುಗಡೆ ಮಾಡಿದರು. ಇದಾದ ಬಳಿಕ ವಿವಾದಾತ್ಮಕ ಹೇಳಿಕೆ ನೀಡಿದರು. ಜೈನರ ಫಿಲಾಸಫಿಯಲ್ಲಿ 24 ಜನ್ಮಗಳಿವೆ ಅಂತಾರೆ, ಅದೆಲ್ಲ ಬುಲ್​ಶಿಟ್ ಎಂದು ಹೇಳಿದ್ದರು.

ಬುಲ್​ಶಿಟ್​ ಎಂಬ ಪದ ಬಳಸಿದ್ದಕ್ಕೆ ಹಂಸಲೇಖ ವಿರುದ್ಧ ಜೈನರು ಕಿಡಿಕಾರಿದ್ದರು. ಇದೀಗ ಪತ್ರದ ಮೂಲಕ ಜೈನರ ಕ್ಷಮೆಯಾಚಿಸುವ ಮೂಲಕ ವಿವಾದವನ್ನು ತಣ್ಣಗಾಗಿಸುವ ಪ್ರಯತ್ನ ಮಾಡಿದ್ದಾರೆ.

ಹಂಸಲೇಖ ಬರೆದ ಪತ್ರದಲ್ಲೇನಿದೆ?

ನನ್ನ ಪಂಪನಾಣೆ, ನನ್ನ ಪದ ಬಳಕೆ ಉದ್ದೇಶಪೂರಿತವಲ್ಲ. ಗಲಾಟೆ, ಒತ್ತಡದ ಆ ಕ್ಯಾಮರಾಗಳ ಗುಂಪಿನಲ್ಲಿ ಆ ಮಾತು ತೂರಿ ಬಂದಿದೆ. ತ್ಯಾಗ ಮತ್ತು ಸಹನೆಯ ಸಂಸ್ಕೃತಿಯನ್ನು ಜಗತ್ತಿಗೆ ನೀಡಿದ ಜೈನ ಸಮುದಾಯಕ್ಕೆ ಶಿರಬಾಗಿ ಕ್ಷಮೆ ಕೋರುತ್ತೇನೆ. ಪ್ರಿಯ ಮಾಧ್ಯಮಗಳೇ ದಯಮಾಡಿ ನಾನು ದುಡುಕಿ ಮಾತಾಡಿದ ಆ " BULLSHIT " ಪದವನ್ನು DELETE ಮಾಡಿ. ಕನ್ನಡದ ಕಾವ್ಯಪರಂಪರೆಯ ಬೇರು ಕಾಂಡಗಳಾಗಿರುವ ಜೈನ ಕವಿ ಮುನಿ ಪರಂಪರೆಗೆ ಆಗಿರುವ ಗಾಯವನ್ನು ವಾಸಿಮಾಡಲು ಈ ಮೂಲಕ ಕೋರುತ್ತಿದ್ದೇನೆ. ಆಡು ಮಾತುಗಳನ್ನು COIN ಮಾಡುವ ನನ್ನಂತ ಸಿನಿಮಾ ರೈಟರ್‌ಗಳಿಗೆ ಇದು ಶಾಸ್ತಿ ಮತ್ತು ಶಾಪ ಎಂದು ನಾನು ಭಾವಿಸಿದ್ದೇನೆ.

ಆ 'ಮಾತು' ನನ್ನ ಬಾಯಿಂದ ಅಲ್ಲಿ ಹೊರಟ ಹಿನ್ನೆಲೆ ಹೀಗಿದೆ. ಆ ಕಾರ್ಯಕ್ರಮ ಮುಗಿಸಿ ಹೊರ ಬರುವಾಗ ಮಾಧ್ಯಮದವರು ಪ್ರತ್ಯೇಕ ಬೈಟ್​ಗಳಿಗಾಗಿ ನನ್ನ ಕೈ ಹಿಡಿದು ಎಳೆದಾಡಿದರು. ಆಗ ಸಿಟ್ಟು ತಡೆದುಕೊಂಡು ಹೊರಬಂದೆ. ನನ್ನ ಸಹಾಯಕ, ನನ್ನನ್ನ ಹೊಗಳಿದ. ಸಿಟ್ಟು ತಡೆಯಲಾಗಲಿಲ್ಲ ಆದರೂ, ತಡೆದುಕೊಂಡಿದ್ದು ಒಳ್ಳೆದಾಯ್ತು ಸಾರ್ ಎಂದ. ಆಗ ನಾನು ಆತನಿಗೆ "ಸಿಟ್ಟು, ಹೋಗಿ ಬರೋ ಬುಲೆಟ್ಟು" ಎಂದು ನಗಿಸಿದೆ. ನಾನು ಇನ್ನೂ ಮುಂದುವರೆದು "ಸಿಟ್ಟು ಒಂದು ಬುಲ್ಶಿಟ್ಟು"ಎಂದೆ. ಆದರೆ ಆ ಪದ ಅಲ್ಲಿ ಬರಬಾರದಿತ್ತು ಇಷ್ಟೆ ನಡೆದಿದ್ದು. ದಯವಿಟ್ಟು ಕ್ಷಮಿಸಿ ಎಂದು ಹಂಸಲೇಖ ಹೇಳಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net