

ನವದೆಹಲಿ: ಸುಳ್ಳು ಸುದ್ದಿ ಮತ್ತು ಸೆನ್ಸರ್ಶಿಪ್ ಸಂಬಂಧ ಆಕ್ಷೇಪ ವ್ಯಕ್ತಪಡಿಸಿದ್ದಕ್ಕೆ ಕೆಲಸದಿಂದ ವಜಾಗೊಳಿಸಿದ್ದಾರೆ ಎಂದು ಆರೋಪಿಸಿ ಮಾಜಿ ಉದ್ಯೋಗಿಯೊಬ್ಬ ಸಲ್ಲಿಸಿದ್ದ ಅರ್ಜಿ ವಿಚಾರಣೆಗೆ ಎತ್ತಿಕೊಂಡಿರುವ ಗುರುಗ್ರಾಮದ ಜಿಲ್ಲಾ ಕೋರ್ಟ್ ಅಲಿಬಾಬಾ ಮತ್ತು ಅದರ ಸಂಸ್ಥಾಪಕ ಜಾಕ್ಮಾಗೆ ಸಮನ್ಸ್ ಜಾರಿಗೊಳಿಸಿದೆ. ಅಲಿಬಾಬಾ ಕಂಪನಿಗೆ ಭಾರತದಲ್ಲಿ ಇದು ಎರಡನೇ ಸಂಕಷ್ಟ.
ಅಲಿಬಾಬಾ ಮತ್ತು ಜಾಕ್ಮಾ ವಿರುದ್ಧ ಕೇಸ್ ದಾಖಲಿಸಿದ ಮಾಜಿ ಉದ್ಯೋಗಿ ಹೆಸರು ಪುಷ್ಪಂದ್ರ ಸಿಂಗ್ ಪಾರ್ಮರ್. ಚೀನಾದ 59 ಆ್ಯಪ್ಗಳನ್ನು ಭಾರತ ನಿಷೇಧಿಸಿದ ನಂತರ ಈ ಕೇಸ್ ಈಗ ದೇಶದ ಗಮನಸೆಳೆದಿದೆ. ನಿಷೇಧಿತ ಆ್ಯಪ್ಗಳಲ್ಲಿ ಅಲಿಬಾಬಾ ಒಡೆತನದ ಯುಸಿ ನ್ಯೂಸ್ ಮತ್ತು ಯುಸಿ ಬ್ರೌಸರ್ ಕೂಡ ಇದೆ.
ಪುಷ್ಪಂದ್ರ ಸಿಂಗ್ ಪಾರ್ಮರ್ ಜುಲೈ 20ರಂದು ಕೋರ್ಟ್ಗೆ ಸಲ್ಲಿಸಿದ ದಾಖಲೆಗಳ ಪ್ರಕಾರ, ಅಲಿಬಾಬಾ ಕಂಪನಿಯ ಯುಸಿ ವೆಬ್ ಕಂಪನಿಯ ಮಾಜಿ ಉದ್ಯೋಗಿ. 2017ರ ಅಕ್ಟೋಬರ್ ತನಕ ಗುರುಗ್ರಾಮದ ಯುಸಿ ವೆಬ್ ಆಫೀಸ್ನಲ್ಲಿ ಸಿಂಗ್ ಕೆಸಲ ಮಾಡಿದ್ದರು. ಚೀನಾಕ್ಕೆ ಸಂಬಂಧಿಸಿದ ಅಹಿತಕರವಾದ ಸುದ್ದಿಗಳನ್ನು ಯುಸಿ ವೆಬ್ ತನ್ನ ಆ್ಯಪ್ಗಳಾದ ಯುಸಿ ಬ್ರೌಸರ್ ಮತ್ತು ಯುಸಿ ನ್ಯೂಸ್ನಿಂದ ತೆಗೆದು ಹಾಕುತ್ತಿತ್ತು. ದೇಶದಲ್ಲಿ ಸಾಮಾಜಿಕ ಮತ್ತು ರಾಜಕೀಯ ತಲ್ಲಣ ಸೃಷ್ಟಿಸುವ ಸುಳ್ಳುಸುದ್ದಿಗಳನ್ನು ಅದರಲ್ಲಿ ವೈಭವೀಕರಿಸಲಾಗುತ್ತಿತ್ತು. ಇದನ್ನು ಆಕ್ಷೇಪಿಸಿದ್ದಕ್ಕಾಗಿ ಸಿಂಗ್ ಅವರನ್ನು ಕೆಲಸದಿಂದ ವಜಾಗೊಳಿಸಲಾಗಿದೆ ಎಂಬ ಆರೋಪವಿದೆ. ಅಲ್ಲದೆ, 2,68,000 ಡಾಲರ್ ನಷ್ಟ ಪರಿಹಾರವನ್ನೂ ಸಿಂಗ್ ಕೇಳಿದ್ದಾರೆ.
ಈ ಅಹವಾಲಿನ ಅರ್ಜಿ ವಿಚಾರಣೆ ಕೈಗೆತ್ತಿಕೊಂಡಿರುವ ಜಿಲ್ಲಾ ಕೋರ್ಟ್ ನ್ಯಾಯಾಧೀಶೆ ಸೋನಿಯಾ ಶಿಯೋಕಂಡ್ , ಜುಲೈ 29ರಂದು ವಿಚಾರಣೆಗೆ ಖುದ್ದಾಗಿ ಅಥವಾ ವಕೀಲರ ಮೂಲಕ ಹಾಜರಾಗುವಂತೆ ಅಲಿಬಾಬಾ, ಜಾಕ್ಮಾ ಮತ್ತು ಕಂಪನಿಯ 12ಕ್ಕೂ ಹೆಚ್ಚು ಅಧಿಕಾರಿಗಳಿಗೆ ಸಮನ್ಸ್ ಜಾರಿಗೊಳಿಸಿದೆ. ಅಲ್ಲದೆ, ಮೂವತ್ತು ದಿನದೊಳಗೆ ಈ ಸಂಬಂಧ ಲಿಖಿತ ಹೇಳಿಕೆಯನ್ನು ಕಂಪನಿ ಮತ್ತು ಅದರ ಪದಾಧಿಕಾರಿಗಳು ಸಲ್ಲಿಸಬೇಕು ಎಂದೂ ನಿರ್ದೇಶಿಸಿದೆ.
ಈ ಸಂಬಂಧ ಯುಸಿ ಇಂಡಿಯಾ ಮಾಧ್ಯಮಕ್ಕೆ ಹೇಳಿಕೆ ನೀಡಿದ್ದು, ಭಾರತದ ಮಾರುಕಟ್ಟೆ, ಅದರ ಸ್ಥಳೀಯ ಉದ್ಯೋಗಿಗಳ ವಿಚಾರದಲ್ಲಿ ಸಾಕಷ್ಟು ಕಾಳಜಿಯನ್ನೂ ಬದ್ಧತೆಯನ್ನೂ ಹೊಂದಿದೆ. ಸ್ಥಳೀಯ ಕಾನೂನುಗಳನ್ನು ಗೌರವಿಸುತ್ತಲೇ ವ್ಯವಹಾರಗಳನ್ನು ನಡೆಸುತ್ತಿದ್ದೇವೆ. ಸದ್ಯದ ಕಾನೂನು ಹೋರಾಟದ ಬಗ್ಗೆ ಹೇಳಿಕೆ ನೀಡಲಾಗದು ಎಂದು ಹೇಳಿಕೊಂಡಿದೆ.
ಆರೋಪಗಳೇನು?: ಯುಸಿ ನ್ಯೂಸ್, ಯುಸಿ ಬ್ರೌಸರ್ ನಲ್ಲಿ 2017ರಲ್ಲಿ ಹಿಂದಿ ಭಾಷೆಯಲ್ಲಿ ಪ್ರಕಟವಾದ ಸುದ್ದಿಯಲ್ಲಿ 2,000 ರೂಪಾಯಿ ನೋಟು ಇಂದು ಮಧ್ಯರಾತ್ರಿಯಿಂದಲೇ ನಿಷೇಧಗೊಳ್ಳಲಿದೆ ಎಂಬ ಶೀರ್ಷಿಕೆ ಇತ್ತು. 2018ರಲ್ಲಿ ಪ್ರಕಟವಾದ ಇನ್ನೊಂದು ಸುದ್ದಿಯ ಶೀರ್ಷಿಕೆ ಹೀಗಿತ್ತು – “ಇದೀಗ ಬಂದ ಸುದ್ದಿ: ಭಾರತ-ಪಾಕ್ ನಡುವೆ ಯುದ್ಧ ಶುರುವಾಗಿದೆ”. ಎರಡು ದೇಶಗಳ ನಡುವೆ ವೈಷಮ್ಯ ತಂದೊಡ್ಡುವ, ಸಾಮಾಜಿಕವಾಗಿ ತಲ್ಲಣ ಸೃಷ್ಟಿಸುವ ಪದ ಬಳಸಿ ಶೀರ್ಷಿಕೆ ನೀಡುವುದನ್ನು ಆಕ್ಷೇಪಿಸಿದ್ದಾಗಿ ಪಾರ್ಮರ್ ಹೇಳಿಕೊಂಡಿದ್ದಾರೆ. ಇದುವೇ ಚೀನಾದ ವಿಚಾರ ಬಂದಾಗ ಆ ದೇಶದ ಹಿತಕ್ಕೆ ವಿರುದ್ಧವಾದ ಯಾವುದೇ ಕಂಟೆಂಟ್ ಇದ್ದರೂ ಅದನ್ನು ಒಂದೋ ಸ್ವತಃ ಎಡಿಟ್ ಮಾಡುತ್ತಿದ್ದರು ಇಲ್ಲವೇ ಮಷಿನ್ ಮೂಲಕ ಎಡಿಟ್ ಮಾಡುವ ವ್ಯವಸ್ಥೆಯನ್ನು ಇರಿಸಿಕೊಂಡಿದ್ದರು ಎಂಬುದು ಪಾರ್ಮರ್ ಅವರ ಆರೋಪ.
ಯುಸಿ ಬ್ರೌಸರ್ ಬ್ಯಾನ್ ಆಗುವ ಮೊದಲು ಭಾರತದಲ್ಲಿ 68.9 ಕೋಟಿ ಸಲ ಡೌನ್ಲೋಡ್ ಆಗಿತ್ತು. ಯುಸಿ ನ್ಯೂಸ್ 7.98 ಕೋಟಿ ಸಲ ಡೌನ್ಲೋಡ್ ಆಗಿತ್ತು. 2017 ಮತ್ತು 2018ರಲ್ಲಿ ಈ ಆ್ಯಪ್ಗಳು ತನ್ನ ಜಾಲವನ್ನು ವಿಸ್ತರಿಸಿಕೊಂಡಿವೆ ಎಂದು ಸೆನ್ಸರ್ ಟವರ್ಸ್ ಡೇಟಾ ಉಲ್ಲೇಖಿಸಿದೆ.