ಟ್ರಿಲಿಯನ್ ಟಾರ್ಗೆಟ್: ರಾಜ್ಯದ ಆರ್ಥಿಕ ಸ್ಥಿತಿ ಏರಿಸಲು ಸರ್ಕಾರದ ಕಸರತ್ತು; 2 ಮತ್ತು 3ನೇ ಹಂತದ ನಗರಗಳಿಗೆ ಪ್ರಾಶಸ್ತ್ಯ

Farmer Budget
Published on

| ರುದ್ರಣ್ಣ ಹರ್ತಿಕೋಟೆ ಬೆಂಗಳೂರು 
ರಾಜ್ಯ ಎದುರಿಸುತ್ತಿರುವ ಆರ್ಥಿಕ ಸವಾಲುಗಳ ನಡುವೆಯೇ ಆರ್ಥಿಕತೆಯ ಮೂರು ಪಟ್ಟು ಅಂದರೆ ಒಂದು ಟ್ರಿಲಿಯನ್ ಡಾಲರ್​ಗೆ ಏರಿಸಲು ಸರ್ಕಾರ ಕಸರತ್ತು ಆರಂಭಿಸಿದೆ.

ಚುನಾವಣೆ ಪೂರ್ವದಲ್ಲಿ ನೀಡಿದ ಭರವಸೆಗಳಂತೆ ಐದು ಗ್ಯಾರಂಟಿಗಳ ಜಾರಿಯ ದೊಡ್ಡ ಆರ್ಥಿಕ ಜವಾಬ್ದಾರಿಯನ್ನು ನಿಭಾಯಿಸುವುದರ ಜತೆಗೆ ಆರ್ಥಿಕತೆಯನ್ನು ಮೂರು ಪಟ್ಟು ಹೆಚ್ಚಿಸುವ ಸವಾಲಿನ ಕೆಲಸಕ್ಕೂ ಕೈ ಹಾಕಲಾಗಿದೆ.

ಆರ್ಥಿಕತೆಯನ್ನು ವೃದ್ಧಿಸುವುದೆಂದರೆ ರಾಜ್ಯದ ಒಟ್ಟಾರೆ ಆಂತರಿಕ ಉತ್ಪನ್ನ ದರವನ್ನು (ಜಿಎಸ್​ಡಿಪಿ) ಹೆಚ್ಚಿಸುವ ಕೆಲಸವಾಗಿದೆ. ಜಿಎಸ್​ಡಿಪಿಯನ್ನು ಜಾಸ್ತಿ ಮಾಡಬೇಕಾದರೆ ಅದಕ್ಕೆ ಕೊಡುಗೆ ನೀಡುವ ವಿವಿಧ ವಲಯಗಳಲ್ಲಿನ ಕೊಡುಗೆ ಹೆಚ್ಚಿಸಬೇಕಾಗುತ್ತದೆ. ಆ ಕೆಲಸಕ್ಕೆ ಈಗ ಸರ್ಕಾರ ಕಾರ್ಯತಂತ್ರ ರೂಪಿಸುತ್ತಿದೆ. ಕೃಷಿ, ಉದ್ಯಮ ಮತ್ತು ಸೇವಾ ವಲಯಗಳ ಸಾಮರ್ಥ್ಯ ವೃದ್ಧಿ, ಅದಕ್ಕಾಗಿ ಮೂಲಸೌಕರ್ಯಕ್ಕೆ ಬೆಂಬಲ, ಅಧಿಕಾರ ಪ್ರತ್ಯಾಯೋಜನೆ, ಆಡಳಿತ ವಿಕೇಂದ್ರೀಕರಣ ಮತ್ತಿತರ ಉಪಕ್ರಮಗಳನ್ನು ಜಾರಿಗೆ ತರುವ ಮೂಲಕ ಆರ್ಥಿಕತೆಯನ್ನು ವೃದ್ಧಿಸುವುದು ಸರ್ಕಾರದ ಉದ್ದೇಶವಾಗಿದೆ.

ಎಷ್ಟಿದೆ ಜಿಎಸ್​ಡಿಪಿ?: ರಾಜ್ಯದ ಜಿಎಸ್​ಡಿಪಿ ಈಗ 25.7 ಲಕ್ಷ ಕೋಟಿ ರೂ.ಗಳಿದೆ. ಅದನ್ನು ಒಂದು ಟ್ರಿಲಿಯನ್ ಡಾಲರ್​ಗೆ ಏರಿಕೆ ಮಾಡುವುದೆಂದರೆ ಮುಂದಿನ ಐದು ವರ್ಷಗಳಲ್ಲಿ 83 ಲಕ್ಷ ಕೋಟಿ ರೂ.ಗಳಿಗೆ ಹೆಚ್ಚಿಸುವುದಾಗಿದೆ.

ಅಂದರೆ ಸರಿಸುಮಾರು ಮೂರು ಪಟ್ಟು ಹೆಚ್ಚು ಮಾಡಬೇಕಾಗಿದೆ. ದೇಶದ ಜಿಡಿಪಿಗೆ ರಾಜ್ಯದ ಪಾಲು ಈಗ ಶೇ. 10 ರಷ್ಟು ಇದೆ. ರಾಜ್ಯದಲ್ಲಿ ಆರ್ಥಿಕತೆ ವೃದ್ದಿಯಾದರೆ ದೇಶಕ್ಕೆ ನೀಡುವ ಕೊಡುಗೆಯೂ ಅದರ ಪ್ರಮಾಣಕ್ಕೆ ತಕ್ಕಂತೆ ಹೆಚ್ಚಾಗಲಿದೆ ಎಂದು ಅರ್ಥಿಕ ತಜ್ಞರು ಹೇಳುತ್ತಾರೆ.

ಎಷ್ಟಾಗಬೇಕು ಬೆಳವಣಿಗೆ?: ಒಂದು ಟ್ರಿಲಿಯನ್ ಡಾಲರ್​ಗೆ ಆರ್ಥಿಕತೆ ವೃದ್ಧಿಯಾಗಬೇಕಾದರೆ, ರಾಜ್ಯದ ಜಿಎಸ್​ಡಿಪಿಯ ಬೆಳವಣಿಗೆ ಸಹ ಹೆಚ್ಚಾಗಬೇಕು. ಜಿಎಸ್​ಡಿಪಿಯ ಬೆಳವಣಿಗೆ ದರ 2021-22 ರಲ್ಲಿ ಶೇ. 11 ರಷ್ಟು ಇತ್ತು. ಆದರೆ ಅದು 2022-23ಕ್ಕೆ 7.9ಕ್ಕೆ ಕುಸಿದಿದೆ. ಈ ಆರ್ಥಿಕ ವರ್ಷಕ್ಕೆ ಶೇ.13 ರಿಂದ 17ರಷ್ಟು ಆಗಬಹುದೆಂದು ಸರ್ಕಾರ ಅಂದಾಜು ಮಾಡಿದೆ. ಆದರೆ ಅಷ್ಟು ಸಾಧ್ಯವೇ ಎಂಬ ಪ್ರಶ್ನೆಯೂ ಇದೆ, ಅದನ್ನು ಸರ್ಕಾರ ಹೇಗೆ ನಿಭಾಯಿಸಲಿದೆ ಎಂಬುದು ಕುತೂಹಲದ ಕೇಂದ್ರಬಿಂದು.

ಸರ್ಕಾರದ ಪ್ಲ್ಯಾನ್​ ಏನು?: ಆರ್ಥಿಕತೆಯನ್ನು ವೃದ್ಧಿಸಲು ಸರ್ಕಾರ ಅನೇಕ ಯೋಜನೆಗಳನ್ನು ರೂಪಿಸಿಕೊಂಡಿದೆ. ಬೆಂಗಳೂರಿನಲ್ಲಿ ಈಗ ಬೆಳವಣಿಗೆಗೆ ಅವಕಾಶಗಳು ಕಡಿಮೆ ಇವೆ. ಆದ್ದರಿಂದ ಸರ್ಕಾರ ಎರಡು ಮತ್ತು ಮೂರನೇ ಹಂತದ ನಗರಗಳ ಕಡೆ ದೃಷ್ಟಿ ನೆಟ್ಟಿದೆ. ಅಲ್ಲಿ ಉದ್ದಿಮೆಗಳನ್ನು ಬೆಳೆಸುವುದಕ್ಕೆ ಪೂರಕ ವಾತಾವರಣ ಮೂಡಿಸುವ ಮೂಲಕ ಹೂಡಿಕೆ ಆಕರ್ಷಣೆ ಮಾಡಿ ಉತ್ಪಾದನಾ ವ್ಯಾಪ್ತಿಗೆ ತಂದು ಆರ್ಥಿಕ ಚಟುವಟಿಕೆಗಳನ್ನು ವೃದ್ದಿಸಿ ಜಿಎಸ್​ಡಿಪಿ ಹೆಚ್ಚಾಗುವಂತೆ ಮಾಡುವುದು ಸರ್ಕಾರದ ಉದ್ದೇಶವಾಗಿದೆ.

ಸಮಿತಿ ರಚನೆ: ಜಿಎಸ್​ಡಿಪಿ ವೃದ್ಧಿಯಾಗಬೇಕೆಂದರೆ ಕೇವಲ ಕೈಗಾರಿಕೆಗಳನ್ನು ಸ್ಥಾಪನೆ ಮಾಡುವುದೊಂದೇ ಅಲ್ಲ, ಬೇರೆ ಬೇರೆ ಕ್ಷೇತ್ರಗಳಲ್ಲಿಯೂ ಅಭಿವೃದ್ದಿಯಾಗಬೇಕಾಗುತ್ತದೆ. ತಲಾವಾರು ಆದಾಯದ ಪ್ರಮಾಣವೂ ಹೆಚ್ಚಾಗಬೇಕು. ಆದ್ದರಿಂದಲೇ ಕೃಷಿ, ತೋಟಗಾರಿಕೆ, ಇಂಧನ, ಗ್ರಾಮೀಣಾಭಿವೃದ್ಧಿ, ನಗರಾಭಿವೃದ್ಧಿ, ಕೈಗಾರಿಕೆ, ಮೂಲಸೌಲಭ್ಯ, ಮಾಹಿತಿ ತಂತ್ರಜ್ಞಾನ ಇಲಾಖೆಗಳ ಸಚಿವರು, ಅಧಿಕಾರಿಗಳು ಮತ್ತು ಆಯಾ ಕ್ಷೇತ್ರದ ತಜ್ಞರನ್ನೊಳಗೊಂಡ ಸಮಿತಿಯೊಂದನ್ನು ರಚನೆ ಮಾಡಲು ಮುಖ್ಯಮಂತ್ರಿ ಸಿದ್ದರಾಮಯ್ಯ ಉದ್ದೇಶಿಸಿದ್ದಾರೆ. ಆ ನಿಟ್ಟಿನಲ್ಲಿ ಈಗಾಗಲೇ ಚರ್ಚೆ ಸಹ ಆರಂಭ ಮಾಡಲಾಗಿದೆ.

ಸಂಪನ್ಮೂಲ ಸಮರ್ಥ ಬಳಕೆ: ರಾಜ್ಯದಲ್ಲಿ ಈಗ ವಿದ್ಯುತ್ ಮತ್ತು ರಸ್ತೆ ಜಾಲದಲ್ಲಿ ಸ್ವಾವಲಂಬನೆ ಸಾಧಿಸಲಾಗಿದೆ. ನೀರಿನ ಸಮಸ್ಯೆಯೂ ಇಲ್ಲ. ಮಾನವ ಸಂಪನ್ಮೂಲವೂ ಹೇರಳವಾಗಿದೆ. ಇದನ್ನು ಸಮರ್ಥವಾಗಿ ಬಳಸಿಕೊಳ್ಳುವ ಮೂಲಕ ಆರ್ಥಿಕತೆ ವೃದ್ಧಿಗೆ ಪ್ರಯತ್ನ ಮಾಡುವುದು ಸರ್ಕಾರದ ನಿರ್ಧಾರವಾಗಿದೆ ಎಂದು ಮೂಲಗಳು ಹೇಳುತ್ತವೆ.

ಸರ್ಕಾರದ ಕಾರ್ಯತಂತ್ರ

  • ಎರಡು, ಮೂರನೇ ಹಂತದ ನಗರಗಳು ಉತ್ಪಾದನಾ ಚಟುವಟಿಕೆ ವ್ಯಾಪ್ತಿಗೆ
  • ಹೂಡಿಕೆಗೆ ಸಹಕಾರಿಯಾಗುವ ರೀತಿಯಲ್ಲಿ ಮೂಲಸೌಕರ್ಯ ಅಭಿವೃದ್ಧಿ
  • ವಿವಿಧ ಇಲಾಖೆಗಳ ಸಮನ್ವಯಕ್ಕಾಗಿ ಸಮಿತಿಯ ರಚನೆ
  • ತಜ್ಞರ ಸೇವೆಯ ಬಳಕೆ ಮಾಡಿಕೊಳ್ಳುವುದು
  • ತಲಾವಾರು ಆದಾಯ 3.31 ಲಕ್ಷ ರೂ.ಗಳಿಂದ ಹೆಚ್ಚಿಸುವುದು

ಜಿಎಸ್​ಡಿಪಿಗೆ ಯಾವ ವಲಯದ ಕೊಡುಗೆ ಎಷ್ಟಿದೆ

ಆವರಣದಲ್ಲಿ ಬೆಳವಣಿಗೆ ದರ

  • ಕೃಷಿ ಶೇ.16 (ಶೇ.5.5)
  • ಉತ್ಪಾದನೆ ಶೇ.20 (ಶೇ.5.1)
  • ಸೇವಾ ವಲಯ ಶೇ.64 (ಶೇ.9.2)

ಸವಾಲುಗಳೇನು?

  • ಬಂಡವಾಳ ತರುವ ಕಡೆ ಗಮನ ಹರಿಸುವುದು
  • ಆಡಳಿತ ವೆಚ್ಚ 1.34 ಲಕ್ಷ ಕೋಟಿ ರೂ.ಗಳಿದ್ದು ಕಡಿಮೆ ಮಾಡುವುದು
  • ತೆರಿಗೆ ವ್ಯಾಪ್ತಿ ಹೆಚ್ಚಿಸಿಕೊಳ್ಳುವುದು
  • ಬಜೆಟ್ ಗಾತ್ರ ಜಿಎಸ್​ಡಿಪಿಯ ಶೇ.14.4 ರಷ್ಟು ಇದ್ದು ಹೆಚ್ಚು ಮಾಡುವುದು
  • ಸಹಾಯಧನಗಳಿಗೆ ನಿಯಂತ್ರಣ ಹಾಕುವುದು
  • ಬಂಡವಾಳ ವೆಚ್ಚವನ್ನು ಹೆಚ್ಚು ಮಾಡುವುದು
  • ಕಾರ್ಯಾಂಗದ ಕಾರ್ಯ ಕ್ಷಮತೆಯನ್ನು ವೃದ್ಧಿಸುವುದು
  • ಬಡತನ, ನಿರುದ್ಯೋಗ ಶಮನಕ್ಕೆ ಕಾರ್ಯಕ್ರಮ ರೂಪಿಸುವುದು
  • ಜಿಎಸ್​ಟಿಯಲ್ಲಿ ಸೋರಿಕೆ ತಡೆಗೆ ವಿವಿಧ ನಿಯಂತ್ರಣ ಕ್ರಮಗಳನ್ನು ರೂಪಿಸುವುದು
  • ಕೇಂದ್ರದಿಂದ ಸೆಸ್, ಸರ್​ಚಾರ್ಜ್​ಗಳಲ್ಲಿ ಆಗುತ್ತಿರುವ 7780 ಕೋಟಿ ರೂಪಾಯಿ ನಷ್ಟವನ್ನು ಸರಿದೂಗಿಸಿಕೊಳ್ಳುವುದು
  • ಕೇಂದ್ರ ಪ್ರಾಯೋಜಿತ ಕಾರ್ಯಕ್ರಮಗಳಲ್ಲಿ ಶೇ.15.52 ರಷ್ಟು ಕಡಿಮೆ ಆಗಿರುವುದನ್ನು ಪಡೆಯುವುದು

ರಫ್ತು ಹೆಚ್ಚಳಕ್ಕೆ ಪ್ರಯತ್ನ: ರಾಜ್ಯ ಈಗ ರಫ್ತಿನಲ್ಲಿ ಮೂರನೇ ಸ್ಥಾನದಲ್ಲಿದೆ. ತಮಿಳುನಾಡು ಹಾಗೂ ಮಹಾರಾಷ್ಟ್ರ ಮೊದಲ ಎರಡು ಸ್ಥಾನದಲ್ಲಿವೆ. ವಿವಿಧ ಅಂಶಗಳ ಆಧಾರದಲ್ಲಿ ನಡೆದಿರುವ ಅಧ್ಯಯನ ಈ ಸ್ಥಾನಗಳನ್ನು ನಿಗದಿ ಮಾಡಿದೆ. ಸರ್ಕಾರ ಆರ್ಥಿಕತೆಯನ್ನು ಒಂದು ಟ್ರಿಲಿಯನ್ ಡಾಲರ್​ಗೆ ತರಬೇಕಾದರೆ ರಫ್ತು ವಲಯ ಸಹ ಹೆಚ್ಚಾಗಬೇಕಾಗುತ್ತದೆ. ಆ ನಿಟ್ಟಿನಲ್ಲಿಯೂ ಪ್ರಯತ್ನ ನಡೆಯಲಿದೆ ಎಂದು ಮೂಲಗಳು ಹೇಳುತ್ತವೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net