ಮನೆಯ ಆಧಾರವಾಗಿದ್ದ ಮಗಳು ಕರೊನಾಗೆ ಬಲಿ; ಮನನೊಂದ ಅಪ್ಪನಿಂದ ಆತ್ಮಹತ್ಯೆಗೆ ಯತ್ನ

corona
Published on

ಚೆನ್ನೈ: ಕರೊನಾ ಅನೇಕ ಕುಟುಂಬಗಳನ್ನು ಅಲ್ಲೋಲ ಕಲ್ಲೋಲ ಮಾಡಿಬಿಟ್ಟಿದೆ. ಅದೆಷ್ಟೋ ಕುಟುಂಬಗಳು ತಮ್ಮ ಆಧಾರ ಸ್ಥಂಬಗಳನ್ನೇ ಕಳೆದುಕೊಂಡು ಅನಾಥವಾಗಿಬಿಟ್ಟಿವೆ. ಅದೇ ರೀತಿ ಮನೆಯ ಸರ್ವಸ್ವವಾಗಿದ್ದ ಮಗಳನ್ನು ಕರೊನಾಗೆ ಬಲಿಕೊಟ್ಟ ತಂದೆಯೊಬ್ಬ ಅದೇ ನೋವಿನಿಂದ ಆತ್ಮಹತ್ಯೆಗೆ ಯತ್ನಿಸಿರುವ ಘಟನೆ ತಮಿಳುನಾಡಿನ ಚೆನ್ನೈನಲ್ಲಿ ನಡೆದಿದೆ.


ಅಪ್ಪ ಪಿ ಕೃಷ್ಣನ್​(82) ಮತ್ತು ಮಗಳು ಶಶಿಕಲಾ (32)ಳದ್ದೇ ಒಂದು ಕುಟುಂಬ. ಮಗಳು ಖಾಸಗಿ ಆಸ್ಪತ್ರೆಯೊಂದರಲ್ಲಿ ಸ್ಟಾಫ್​ ನರ್ಸ್​ ಆಗಿ ಕೆಲಸ ಮಾಡಿ, ಅಪ್ಪನನ್ನು ನೋಡಿಕೊಳ್ಳುತ್ತಿದ್ದಳು. ಕರೊನಾ ಲಸಿಕೆಯ ಎರಡೂ ಡೋಸೇಜ್​ ಪಡೆದುಕೊಂಡಿದ್ದರು ಶಶಿಕಲಾಗೆ ಕೆಲ ವಾರಗಳ ಹಿಂದೆ ಕರೊನಾ ಹತ್ತಿಬಿಟ್ಟಿದೆ. ಮೊದಲಿಗೆ ಹೋಂ ಐಸೋಲೇಷನ್​ಗೆ ಒಳಗಾಗಿದ್ದ ಅವಳ ಆರೋಗ್ಯ ಇನ್ನಷ್ಟು ಹದಗೆಟ್ಟ ಹಿನ್ನೆಲೆಯಲ್ಲಿ ಆಕೆಯನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ.


ಸಾಕಷ್ಟು ಕಾಲ ಕರೊನಾ ಜತೆಗೆ ಹೋರಾಡಿದ ಶಶಿಕಲಾ ಇತ್ತೀಚೆಗೆ ಅದೇ ಸೋಂಕಿಗೆ ಬಲಿಯಾಗಿದ್ದಾಳೆ. ಆ ನೋವಿನಿಂದ ಬಳಲುತ್ತಿದ್ದ ತಂದೆ ಕೃಷ್ಣನ್​ ಗುರುವಾರದಂದು ಅಪಾರ್ಟ್​ಮೆಂಟ್​ನ ಮೊದಲನೇ ಮಹಡಿಯಿಂದ ಕೆಳಗೆ ಹಾರಿ ಆತ್ಮಹತ್ಯೆಗೆ ಯತ್ನಿಸಿದ್ದಾನೆ. ಕೆಳಕ್ಕೆ ಬಿದ್ದ ಕೃಷ್ಣನ್ ಅಳಲನ್ನು ಕೇಳಿಸಿಕೊಂಡು ಸ್ಥಳೀಯರು ಆತನನ್ನು ಆಸ್ಪತ್ರೆಗೆ ದಾಖಲಿಸಿದ್ದಾರೆ. ಆತನ ಕೈ ಮತ್ತು ಕಾಲುಗಳಿಗೆ ಬಲವಾಗಿ ಪೆಟ್ಟು ಬಿದ್ದಿರುವುದಾಗಿ ಹೇಳಲಾಗಿದೆ. (ಏಜೆನ್ಸೀಸ್)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net