More

    ಅಲೆದಾಡುತ್ತಿದ್ದ ವಿದೇಶಿಗನನ್ನು ಜರ್ಮನಿಗೆ ಕಳುಹಿಸಿದ ಪೊಲೀಸರು

    ಬೆಂಗಳೂರು: ಕಳೆದ ಒಂದೂವರೆ ವರ್ಷಗಳ ಹಿಂದೆ ಪ್ರವಾಸಿ ವೀಸಾದಡಿ ಬಂದಿದ್ದ ಜರ್ಮನಿ ಪ್ರಜೆಯೊಬ್ಬ ಮಾನಸಿಕ ಸಮಸ್ಯೆಯಿಂದ ಬಳಲಿ ನಗರದೆಲ್ಲೆಡೆ ಅಲೆದಾಡುತ್ತಿರುವುದನ್ನು ಗಮನಿಸಿದ ಸಂಪಂಗಿರಾಮನಗರ ಪೊಲೀಸರು ಆತನನ್ನು ಸ್ವದೇಶಕ್ಕೆ ಮರಳಿಸಿ ಮಾನವೀಯತೆ ಮೆರೆದಿದ್ದಾರೆ.

    ಜರ್ಮನಿ ಮೂಲದ ಅನಪೆಟ್​ ಯಾಡರಿಗೋ (47) ಕಳೆದ 2019 ನವೆಂಬರ್‌ನಿಂದ 2020 ನವೆಂಬರ್ ಅವಧಿವರೆಗೆ ಪ್ರವಾಸಿ ವೀಸಾ ಪಡೆದು ನಗರಕ್ಕೆ ಬಂದಿದ್ದ. ವೀಸಾ ಅವಧಿ ಮುಕ್ತಾಯಗೊಳ್ಳುವವರೆಗೆ ರಾಜ್ಯದ ವಿವಿಧ ಭಾಗಗಳಲ್ಲಿ ಸುತ್ತಾಡುತ್ತಿದ್ದ. ಮಾದಕ ವ್ಯಸನಿಯಾಗಿರುವ ಆತ ಮಾನಸಿಕ ಸಮಸ್ಯೆಯಿಂದ ಬಳಲುತ್ತಿದ್ದ. ಆರಂಭದಲ್ಲಿ ಐಶಾರಾಮಿ ಹೋಟೆಲ್‌ಗಳಲ್ಲಿ ತಂಗುತ್ತಿದ್ದ ಯಾಡರಿಗೋ ಕೈಯಲ್ಲಿ ಹಣ ಖಾಲಿಯಾಗುತ್ತಿದ್ದಂತೆ ಕಂಠೀರವ ಸ್ಟೇಡಿಯಂನ ಆಸು-ಪಾಸಿನಲ್ಲಿ ತಂಗುತ್ತಿದ್ದ. ಕೆಲ ತಿಂಗಳ ಹಿಂದೆ ಆತನ ಬಗ್ಗೆ ಮಾಹಿತಿ ಪಡೆದ ಜರ್ಮನಿ ರಾಯಭಾರ ಕಚೇರಿಯ ಅಧಿಕಾರಿಗಳು ಕಳೆದ ಮಾರ್ಚ್‌ನಲ್ಲಿ ಪತ್ತೆ ಹಚ್ಚಿ ಯಾಡರಿಗೋನನ್ನು ಜರ್ಮನಿ ಕಳುಹಿಸಲು ಸೂಕ್ತ ವ್ಯವಸ್ಥೆ ಮಾಡಿ ವಿಮಾನ ನಿಲ್ದಾಣಕ್ಕೆ ಕಳುಹಿಸಿದ್ದರು. ಆದರೆ, ಅಲ್ಲಿ ಪೊಲೀಸರ ಕಣ್ತಪ್ಪಿಸಿ ಮತ್ತೆ ನಗರಕ್ಕೆ ಬಂದು ಅಲೆದಾಡಲು ಅರಂಭಿಸಿದ್ದ.

    ಅಲೆದಾಡುತ್ತಿದ್ದ ವಿದೇಶಿ ಪ್ರಜೆ:
    ಇತ್ತೀಚೆಗೆ ಸಂಪಂಗಿರಾಮ ನಗರದ ಹೋಟೆಲ್‌ವೊಂದರಲ್ಲಿ ಊಟ ಮಾಡಿ ಕೈಯಲ್ಲಿ ಕಾಸಿಲ್ಲದೇ ತನ್ನ ಮೊಬೈಲ್‌ನ್ನು ಹೋಟೆಲ್ ಸಿಬ್ಬಂದಿಗೆ ಕೊಟ್ಟಿದ್ದ. ನಂತರ ಎಲ್ಲಿ ಹೋಗಬೇಕೆಂದು ಗೊತ್ತಾಗದೇ ಹೋಟೆಲ್ ಮುಂದೆಯೇ ಒಂದೆರಡು ದಿನ ತಿರುಗಾಡುತ್ತಿದ್ದ. ಅನುಮಾನಗೊಂಡ ಹೋಟೆಲ್ ಸಿಬ್ಬಂದಿ ಪೊಲೀಸರಿಗೆ ಮಾಹಿತಿ ನೀಡಿದ್ದರು. ಎಸ್‌ಆರ್ ನಗರ ಪೊಲೀಸ್ ಠಾಣೆಯ ಸಿಬ್ಬಂದಿ ಬಂದು ವಿಚಾರಿಸಿದಾಗ ಈತ ಗೊಂದಲದ ಹೇಳಿಕೆ ನೀಡಿದ್ದ. ಆತ ಮಾನಸಿಕ ಅಸ್ವಸ್ಥನಂತೆ ವರ್ತಿಸುತ್ತಿರುವುದನ್ನು ಕಂಡ ಪೊಲೀಸರು ಆತನ ಬಳಿಯಿದ್ದ ಪಾಸ್ ಪೋರ್ಟ್, ವೀಸಾ ಪರಿಶೀಲಿಸಿದಾಗ ಜರ್ಮನಿ ದೇಶದವನು ಎಂದು ಗೊತ್ತಾಗಿದೆ. ಕೂಡಲೇ ಪೊಲೀಸರು ಹಿರಿಯ ಅಧಿಕಾರಿಗಳಿಗೆ ಮಾಹಿತಿ ನೀಡಿದಾಗ ಆತನಿಗೆ ಸೂಕ್ತ ಚಿಕಿತ್ಸೆ ಕೊಡಿಸುವಂತೆ ಸಲಹೆ ನೀಡಿದ್ದರು. ಅದರಂತೆ ಪೊಲೀಸರು ನಿಮಾನ್ಸ್‌ನಲ್ಲಿ ಯಾಡರಿಗೋಗೆ ಚಿಕಿತ್ಸೆ ಕೊಡಿಸಿದ್ದರು.

    ಮತ್ತೊಂದೆಡೆ ಜರ್ಮನಿ ರಾಯಭಾರ ಕಚೇರಿಗೆ ಆತನ ಬಗ್ಗೆ ಮಾಹಿತಿ ನೀಡಿ, ಯಾಡರಿಗೋ ಬಳಿಯಿದ್ದ ದಾಖಲೆ ಮೂಲದಿಂದ ಆತನ ಕುಟುಂಬ ಸದಸ್ಯರನ್ನು ಸಂಪರ್ಕಿಸಿ ಅವರಿಗೂ ಮಾಹಿತಿ ನೀಡಿದ್ದರು. ನಂತರ ಆತನ ವೀಸಾ ಅವಧಿ ರಿನಿವಲ್ ಮಾಡಿಸಿದ್ದರು. ಯಾಡರಿಗೋ ತಾಯಿ ರಾಯಭಾರ ಕಚೇರಿ ಅಧಿಕಾರಿಗಳ ಮೂಲಕ ಬೆಂಗಳೂರಿನಿಂದ ಜರ್ಮಿನಿಗೆ ಬರುವ ವಿಮಾನದ ಟಿಕೆಟ್‌ನ್ನು ಕಳುಹಿಸಿದ್ದರು. ಯಾಡರಿಗೋಗೆ ನಿಮ್ಹಾನ್ಸ್‌ನಲ್ಲಿ ಚಿಕಿತ್ಸೆ ಪಡೆದು ಚೇತರಿಸಿಕೊಂಡ ಬಳಿಕ ಕಳೆದ ಮೇ 4ರಂದು ವಿಮಾನದ ಮೂಲಕ ಜರ್ಮನಿಗೆ ಕಳುಹಿಸಲಾಗಿದೆ ಎಂದು ಎಸ್.ಆರ್‌ನಗರ ಪೊಲೀಸರು ತಿಳಿಸಿದ್ದಾರೆ.

    ಕಾಫಿ ನಾಡು ನಾಳೆಯಿಂದ ಸಂಪೂರ್ಣ ಲಾಕ್​! ಮದುವೆಗೆ 10 ಮಂದಿ, ಅಂತ್ಯಸಂಸ್ಕಾರಕ್ಕೆ ಐವರಿಗೆ ಅವಕಾಶ

    ಕರೊನಾ ಮೂರನೇ ಅಲೆ ದೇಶಕ್ಕೆ ಕಾಲಿಟ್ಟೇ ಬಿಡ್ತಾ? ಆತಂಕಕಾರಿ‌ ಮಾಹಿತಿ ಹೊರಹಾಕಿದ ವಿಧಿ ವಿಜ್ಞಾನ ತಜ್ಞ

    ನಿಂತಿದ್ದ ಆ್ಯಂಬುಲೆನ್ಸ್​ ಅಲ್ಲಾಡುತ್ತಿತ್ತು; ಹತ್ತಿರ ಹೋಗಿ ನೋಡಿದ ಪೊಲೀಸರಿಗೆ ಕಂಡಿದ್ದು ಬೇರೆಯದ್ದೇ ದೃಶ್ಯ!

    ಹೆಂಡತಿ, ಮಗುವನ್ನು ನೋಡುವುದಕ್ಕಾಗಿ ಬಸ್ಸನ್ನೇ ಕದ್ದ! 4 ಜಿಲ್ಲೆ ದಾಟಿದ ನಂತರ ಸಿಕ್ಕಿಹಾಕಿಕೊಂಡಿದ್ದೇ ರೋಚಕ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts