ಸಹಕಾರ ಸಂಘಗಳ ಕಾಯ್ದೆ ತಿದ್ದುಪಡಿ ಸಂವಿಧಾನಬಾಹಿರ

ವಿಜಯವಾಣಿ-2024-08-09T091435.048
Published on

ಉಚ್ಚ ನ್ಯಾಯಾಲಯ ಮಹತ್ವದ ತೀರ್ಪು | ಕಾನೂನು ಹೋರಾಟದಲ್ಲಿ ರಾಜ್ಯ ಸರ್ಕಾರಕ್ಕೆ ಭಾರಿ ಹಿನ್ನಡೆ

ಬೆಂಗಳೂರು: ಸಹಕಾರ ಸಂಘಗಳ ಸಿಬ್ಬಂದಿ ನೇಮಕಾತಿ ಮತ್ತು ವರ್ಗಾವಣೆಯ ಅಧಿಕಾರವನ್ನು ಸಂಘಗಳಿಂದ ತನ್ನ ತೆಕ್ಕೆಗೆ ಪಡೆದುಕೊಂಡ ಸರ್ಕಾರಕ್ಕೆ ಕಾನೂನು ಹೋರಾಟದಲ್ಲಿ ಹಿನ್ನಡೆ ಉಂಟಾಗಿದೆ. ಇದೀಗ ಸರ್ಕಾರವು 2023ರಲ್ಲಿ ಸಹಕಾರ ಸಂಘಗಳ ಕಾಯ್ದೆಯ ಸೆಕ್ಷನ್ 128ಎಗೆ ಮಾಡಿದ್ದ ತಿದ್ದುಪಡಿಯನ್ನು ಹೈಕೋರ್ಟ್ ಸಂವಿಧಾನಬಾಹಿರ ಎಂದು ಆದೇಶಿಸಿದೆ.

ಈ ವಿಚಾರವಾಗಿ ದಕ್ಷಿಣ ಕನ್ನಡ ಜಿಲ್ಲೆಯ ಪುತ್ತೂರು ತಾಲೂಕಿನ ಉಪ್ಪಿನಂಗಡಿ ಕೃಷಿ ಸಹಕಾರ ಸಂಘ ಸಲ್ಲಿಸಿದ್ದ ಅರ್ಜಿ ವಿಚಾರಣೆ ನಡೆಸಿ ಕಾಯ್ದಿರಿಸಿದ್ದ ತೀರ್ಪನ್ನು ನ್ಯಾಯಮೂರ್ತಿ ಅನಂತ ರಾಮನಾಥ ಹೆಗಡೆ ಅವರ ಏಕಸದಸ್ಯ ಪೀಠ ಗುರುವಾರ ಪ್ರಕಟಿಸಿದೆ. ಅರ್ಜಿಯನ್ನು ಮಾನ್ಯ ಮಾಡಿರುವ ನ್ಯಾಯಾಲಯ, ಸರ್ಕಾರಿ ಸಂಘಗಳ ಕಾಯ್ದೆಯ ಸೆಕ್ಷನ್ 128ಎಗೆ ಮಾಡಿದ್ದ ತಿದ್ದುಪಡಿ ಸಂವಿಧಾನದ ಪರಿಚ್ಛೇದ 19 (1)(ಸಿ) ಉಲ್ಲಂಘನೆಯಾಗಿದೆ ಎಂದು ತೀರ್ಪು ನೀಡಿದೆ. ತೀರ್ಪಿನ ಅಧಿಕೃತ ಪ್ರತಿ ಇನ್ನಷ್ಟೇ ಲಭ್ಯವಾಗಬೇಕಿದೆ.

ಅರ್ಜಿದಾರರ ಪರ ವಾದ ಮಂಡಿಸಿದ ಹಿರಿಯ ವಕೀಲ ಎ.ಕೇಶವ್ ಭಟ್, ಸಹಕಾರ ಸಂಘಗಳ ಬಳಿ ಇದ್ದ ಸಿಬ್ಬಂದಿ ನೇಮಕ, ವರ್ಗಾವಣೆ ಮತ್ತು ಶಿಸ್ತುಕ್ರಮ ಕೈಗೊಳ್ಳುವ ಅಧಿಕಾರವನ್ನು ಸರ್ಕಾರ ಕಬಳಿಸಿದೆ. ಈ ನಿಟ್ಟಿನಲ್ಲಿಯೇ ಸಹಕಾರ ಸಂಘಗಳ ಕಾಯ್ದೆಯ ಸೆಕ್ಷನ್ 128ಎಗೆ ತಿದ್ದುಪಡಿ ಮಾಡಿದ್ದು ಸಂವಿಧಾನಬಾಹಿರವಾಗಿದೆ. ಅಲ್ಲದೆ, ಸಹಕಾರ ಚಳವಳಿಯ ಜೀವಾಳವೇ ಜನರು. ಜನರಿಂದ ಜನರಿಗಾಗಿ ಜನರೇ ರಚಿಸಿಕೊಂಡಿರುವ ಸಂಘಗಳೇ ಸಹಕಾರ ಸಂಘಗಳು.

ಇದರಲ್ಲಿ ಸರ್ಕಾರ ಸೇರಿ ಬೇರೆ ಮೂರನೇ ವ್ಯಕ್ತಿಗಳ ಹಸ್ತಕ್ಷೇಪಕ್ಕೆ ಅವಕಾಶವಿಲ್ಲ. ಇದರ ಹೊರತಾಗಿ ಕಾರ್ಯಾಚರಿಸಿದರೆ ಸಂವಿಧಾನದ ಉಲ್ಲಂಘನೆಯಾಗುತ್ತದೆ. ಇಲ್ಲೂ ಸರ್ಕಾರ ಏಕಪಕ್ಷೀಯವಾಗಿ ಕಾಯ್ದೆಗೆ ತಿದ್ದುಪಡಿ ಮಾಡಿದೆ. ಇದು ನಿಯಮಬಾಹಿರ ಮತ್ತು ಸರ್ಕಾರಕ್ಕೆ ಸಹಕಾರ ಸಂಘಗಳ ವಿಷಯದಲ್ಲಿ ಮಧ್ಯಪ್ರವೇಶ ಮಾಡಲು ಅಧಿಕಾರವಿಲ್ಲ ಎಂದು ಅವರು ತಿಳಿಸಿದ್ದರು.

ಸರ್ಕಾರ ಸಿಬ್ಬಂದಿ ನೇಮಕ ಮತ್ತು ವರ್ಗಾವಣೆ ಅಧಿಕಾರ ತೆಗೆದುಕೊಂಡರೆ ಅದು ರಾಜಕೀಯ ನೆಲೆಯಲ್ಲಿ ಕಾರ್ಯನಿರ್ವಹಿಸುತ್ತದೆ. ಕೊನೆಗೆ ಅದು ಸಹಕಾರ ಸಂಘಗಳ ಕಾರ್ಯನಿರ್ವಹಣೆ ಮೇಲೆ ಪರಿಣಾಮ ಬೀರುತ್ತದೆ. ಹಾಗಾಗಿ ತಿದ್ದುಪಡಿ ರದ್ದುಗೊಳಿಸಬೇಕು, ಸಹಕಾರ ಸಂಘಗಳಿಗೆ ಇರುವ ಸಿಬ್ಬಂದಿ ನೇಮಕದ ಸ್ವಾತಂತ್ರ್ಯ ಬಿಟ್ಟುಕೊಡಬೇಕು ಎಂದು ಅರ್ಜಿಯಲ್ಲಿ ಮನವಿ ಮಾಡಲಾಗಿತ್ತು.

ಏನೆಲ್ಲಾ ಆಗುತ್ತಿತ್ತು?

  • ಈ ಕಾನೂನು ತಿದ್ದುಪಡಿಯಿಂದ ಸರ್ಕಾರದ ಹಸ್ತಕ್ಷೇಪ ಹೆಚ್ಚಾಗಲಿದೆ. ಈ ಮೂಲಕ ರಾಜಕೀಯ ನುಸುಳುವ ಅವಕಾಶದ ಆತಂಕವಿತ್ತು.
  • ಜನರಿಂದ ಜನರಿಗಾಗಿ ಜನರೇ ರಚಿಸಿಕೊಂಡಿರುವ ಸಂಘಗಳೇ ಸಹಕಾರ ಸಂಘಗಳು. ಸರ್ಕಾರದ ತೀರ್ವನದಿಂದ ಮೂರನೇ ವ್ಯಕ್ತಿಗಳ ಹಸ್ತಕ್ಷೇಪಕ್ಕೆ ಅವಕಾಶವಾಗುವಂತಿತ್ತು.
  • ಸಿಬ್ಬಂದಿ ನೇಮಕ ಮತ್ತು ವರ್ಗಾವಣೆ ಅಧಿಕಾರ ಸರ್ಕಾರದ ತೆಕ್ಕೆಗೆ ಹೋದರೆ ಸಂಘಗಳ ಕಾರ್ಯನಿರ್ವಹಣೆ ಮೇಲೆ ಪರಿಣಾಮ ಬೀರುತ್ತದೆ ಎಂಬ ಕಳವಳವಿತ್ತು.

ಸರ್ಕಾರದ ವಾದವೇನು?

ಸಹಕಾರ ಸಂಘಗಳಲ್ಲಿ ನೇಮಕ ಪ್ರಕ್ರಿಯೆಯನ್ನು ಶಿಸ್ತುಬದ್ಧಗೊಳಿಸುವುದು ಕಾನೂನು ತಿದ್ದುಪಡಿಯ ಉದ್ದೇಶವಾಗಿತ್ತು. ಅನರ್ಹರ ನೇಮಕ ತಡೆಯುವುದು, ವ್ಯವಸ್ಥಿತ ನೇಮಕ ಪ್ರಕ್ರಿಯೆ ನಡೆಸುವುದಷ್ಟೇ ಆಶಯವಾಗಿತ್ತು. ಇದೀಗ ನ್ಯಾಯಾಲಯದ ಆದೇಶವನ್ನು ಪರಾಮಶಿಸಿ ಮುಂದೇನು ಮಾಡಬೇಕೆಂದು ನಿರ್ಧರಿಸಲಾಗುತ್ತದೆ ಎಂದು ಸಹಕಾರ ಇಲಾಖೆ ಹಿರಿಯ ಅಧಿಕಾರಿ ತಿಳಿಸಿದ್ದಾರೆ.

ಹಠ ತೋರಿಸಿದ್ದ ಸರ್ಕಾರ

ಸಹಕಾರ ಸಂಘಗಳ ನೇಮಕದ ಮೇಲೆ ನಿಯಂತ್ರಣ ಹಾಗೂ ನಾಮನಿರ್ದೇಶನದ ಮೂಲಕವೂ ಹಸ್ತಕ್ಷೇಪ ಮಾಡುವ ಲೆಕ್ಕಾಚಾರದ ಪೈಕಿ ಒಂದು ಪ್ರಯತ್ನ ಇದೀಗ ಬುಡಮೇಲಾದಂತಾಗಿದೆ. ಸಹಕಾರ ಕ್ಷೇತ್ರ ಪಕ್ಷಾತೀತವಾಗಿ ಬೆಳೆದು ಬಂದಿರುತ್ತದೆ. ಇದರಲ್ಲಿ ಸರ್ಕಾರದ ಹಸ್ತಕ್ಷೇಪ ಸಹಿಸುವುದಿಲ್ಲ ಎಂದು ಸಹಕಾರಿ ರಂಗ ಎಷ್ಟೇ ದನಿ ಎತ್ತಿದರೂ ಸರ್ಕಾರ ತನ್ನ ಹಠ ತೋರಿಸಿತ್ತು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net