

ಪ್ಯಾರಿಸ್: ನಿನ್ನೆ ನಡೆದ ಪ್ಯಾರಿಸ್ ಒಲಿಂಪಿಕ್ಸ್ ಪುರುಷರ ಜಾವಲಿನ್ ಎಸೆತದ ಫೈನಲ್ ಪಂದ್ಯದಲ್ಲಿ ಪಾಕಿಸ್ತಾನದ ಅರ್ಷದ್ ನದೀಮ್ 92.97 ಮೀಟರ್ ಜಾವಲಿನ್ ಎಸೆದು ಚಿನ್ನದ ಪದಕ ಗೆಲ್ಲುವುದರ ಜತೆಗೆ ಹೊಸ ದಾಖಲೆಗೆ ಕಾರಣರಾದರು. ಇನ್ನು 89.45 ಮೀ. ಜಾವಲಿನ್ ಎಸೆತದಿಂದ ಬೆಳ್ಳಿ ಪದಕ ಗೆದ್ದ ನೀರಜ್ ಚೋಪ್ರಾ, ಭಾರತೀಯರನ್ನು ಹೆಮ್ಮೆಪಡಿಸುವುದರಲ್ಲಿ ಹಿಂದೆ ಸರಿಯಲಿಲ್ಲ. ಚಿನ್ನದ ಓಟದಲ್ಲಿ ಈ ಇಬ್ಬರು ಘಟಾನುಘಟಿ ಸ್ಪರ್ಧಿಗಳು ಅಖಾಡಕ್ಕೆ ಇಳಿದಾಗಲೇ ಇದು ರೋಚಕವಾಗಿರಲಿದೆ ಎಂದು ಕ್ರೀಡಾ ಅಭಿಮಾನಿಗಳು ದೊಡ್ಡ ಲೆಕ್ಕಾಚಾರಗಳನ್ನೇ ಹಾಕಿಕೊಂಡಿದ್ದರು. ಆದ್ರೆ, ಅಂತಿಮವಾಗಿ ಈ ಓಟದಲ್ಲಿ ಚಿನ್ನದ ಪದಕ ಗೆಲ್ಲಲು ನೀರಜ್ ವಿಫಲವಾಗಿದ್ದೇ ಆದರೂ ತಮ್ಮ ಮನಸು ಚಿನ್ನ ಎಂಬುದನ್ನು ಇದೊಂದು ಕೆಲಸದಿಂದ ತೋರಿದ್ದಾರೆ.
ಸತತ ಒಲಿಂಪಿಕ್ ಓಟದಲ್ಲಿ ಎರಡು ಪದಕ ಗೆದ್ದಿರುವ ನೀರಜ್ ಚೋಪ್ರಾ, ಎರಡು ಒಲಿಂಪಿಕ್ ಪದಕಗಳನ್ನು ಗೆದ್ದ ಮೊದಲ ಭಾರತೀಯ ಟ್ರ್ಯಾಕ್ ಮತ್ತು ಫೀಲ್ಡ್ ಅಥ್ಲೀಟ್ ಎಂಬ ಇತಿಹಾಸ ಹೊಂದಿದ್ದಾರೆ. 92.97 ಮೀಟರ್ ಎಸೆದು ನೂತನ ಒಲಿಂಪಿಕ್ ದಾಖಲೆ ನಿರ್ಮಿಸುವ ಮೂಲಕ ಎಲ್ಲರ ನಿರೀಕ್ಷೆಗಳನ್ನು ತಲೆಕೆಳಗಾಗಿಸಿದ ಪಾಕಿಸ್ತಾನದ ಅರ್ಷದ್ ನದೀಮ್ಗೆ ಎಲ್ಲೆಡೆಯಿಂದ ಅಭಿನಂದನೆಗಳ ಸುರಿಮಳೆಯೇ ಹರಿದುಬಂದಿದೆ. ಅಂದಹಾಗೆ ಪಾಕಿಸ್ತಾನಕ್ಕೆ 32 ವರ್ಷಗಳ ಬಳಿಕ ಒಲಿಂಪಿಕ್ಸ್ನಲ್ಲಿ ಪದಕವೊಂದು ದೊರಕಿದ್ದು ಇತಿಹಾಸ.
ಜಾವಲಿನ್ ಎಸೆತದಲ್ಲಿ ಚಿನ್ನ ಗೆದ್ದ ಅರ್ಷದ್ಗೆ ಅಭಿನಂದನೆ ತಿಳಿಸಿದ ಚೋಪ್ರಾ, ಪರಸ್ಪರ ಅಪ್ಪಿಕೊಂಡು, ಸ್ನೇಹ ಭಾವವನ್ನು ತೋರಿದರು. ಅಸಲಿಗೆ ನದೀಮ್ ಒಲಿಂಪಿಕ್ಗೆ ಕಾಲಿಡುವ ಮುನ್ನ ಭಾರೀ ಕಷ್ಟಗಳನ್ನು ಅನುಭವಿಸುತ್ತಿದ್ದರು. ಕಳೆದ 8 ವರ್ಷಗಳಿಂದ ಒಂದೇ ಜಾವಲಿನ್ ಹಿಡಿದು ತರಬೇತಿ ನಡೆಸುತ್ತಿದ್ದರು. ಜಾವಲಿನ್ ಸಂಪೂರ್ಣ ಹಾನಿಯಾಗಿದ್ದರು ಅದರಲ್ಲೇ ಪ್ರ್ಯಾಕ್ಟಿಸ್ ಮಾಡುತ್ತಿದ್ದ ಅರ್ಷದ್ ತನಗೆ ಹೊಸ ಜಾವಲಿನ್ ಅವಶ್ಯಕತೆ ಇದೆ ಎಂದು ಮನವಿ ಮಾಡಿದ್ದರು. ಆದ್ರೆ, ಇದಕ್ಕೆ ಸರಿಯಾದ ಸ್ಪಂದನೆ ಸಿಕ್ಕಿರಲಿಲ್ಲ.
ಪ್ಯಾರಿಸ್ ಓಲಿಂಪಿಕ್ಸ್ ಹೋಗುವ ಮುನ್ನ ನನಗೆ ಸಹಾಯ ನೀಡಿ ಎಂದು ಅರ್ಷದ್ ಕಳೆದ ಮಾರ್ಚ್ ತಿಂಗಳಲ್ಲಿ ತಮ್ಮ ಕೋಚ್ ಮುಖಾಂತರ ಮನವಿ ಸಲ್ಲಿಸಿದ್ದರು. ಇದನ್ನು ಅರಿತ ನೀರಜ್, ನನಗೆ ಈ ವಿಷಯ ಭಾರೀ ಆಘಾತವಾಯಿತು. ನಂಬಲು ನಿಜಕ್ಕೂ ಅಸಾಧ್ಯ ಅನಿಸಿತು. 7-8 ವರ್ಷದಿಂದ ಅವರು ಅದೇ ಹಳೆಯ ಜಾವಲಿನ್ ಹಿಡಿದು ತರಬೇತಿ ನಡೆಸಿದ್ದಾರೆ. ನದೀಮ್ ಅವರ ಪ್ರತಿಭೆಗೆ ಅವರ ರಾಷ್ಟ್ರೀಯ ಒಕ್ಕೂಟ ಮತ್ತು ಸಂಭಾವ್ಯ ಪ್ರಾಯೋಜಕರಿಂದ ಅತ್ಯುತ್ತಮ ಸಾಧನ ಮತ್ತು ಬೆಂಬಲ ಸಿಗಬೇಕು ಎಂದು ನೀರಜ್ ಹೇಳಿದ್ದರು.
"ಪ್ರಸಕ್ತ ಸಾಲಿನಲ್ಲಿ ಅರ್ಷದ್ ಅವರು ಟಾಪ್ ಜಾವೆಲಿನ್ ಎಸೆತಗಾರರಾಗಿ ಹೊರಹೊಮ್ಮಿದ್ದಾರೆ. ಇದನ್ನು ನೋಡಿದ ಮೇಲಾದರೂ ಜಾವೆಲಿನ್ ತಯಾರಕರು ಅವರಿಗೆ ಪ್ರಾಯೋಜಿಸಲು ಮತ್ತು ಅವರ ಕ್ರೀಡೆಗೆ ಬೇಕಾದುದನ್ನು ಒದಗಿಸಲು ಹೆಚ್ಚು ಸಂತೋಷದಿಂದ ಮುಂದೆ ಬರುತ್ತಾರೆ ಎಂದು ನಾನು ನಂಬಿದ್ದೇನೆ. ಇದು ನನ್ನದೊಂದು ಚಿಕ್ಕ ಸಲಹೆ" ಎಂದು ಚೋಪ್ರಾ ಹೇಳಿದ್ದಾರೆ. ಸದ್ಯ ಬೆಳ್ಳಿ ಗೆದ್ದ ನೀರಜ್ಗೆ ಜಾಲತಾಣಗಳಲ್ಲಿ ವ್ಯಾಪಕ ಪ್ರಶಂಸೆ, ಮೆಚ್ಚುಗೆ ವ್ಯಕ್ತವಾಗುತ್ತಿದೆ,(ಏಜೆನ್ಸೀಸ್).