ಕಾಂಗ್ರೆಸ್ ಹೈಕಮಾಂಡ್ ಪಾಲಾದ ಲೂಟಿ ಹಣ: ವಿಧಾನ ಪರಿಷತ್ ಸದಸ್ಯ ಸಿ.ಟಿ.ರವಿ ಆರೋಪ

MLC CT Ravi press conference Mandya
Published on

ಮಂಡ್ಯ: ರಾಜ್ಯ ಸರ್ಕಾರ ಲೂಟಿ ಮಾಡಿರುವ ಹಣ ಕಾಂಗ್ರೆಸ್ ಹೈಕಮಾಂಡ್ ಪಾಲಾಗಿದೆ. ಹೀಗಾಗಿ ಹಗರಣದ ಬಗ್ಗೆ ಹೈಕಮಾಂಡ್ ತುಟ್ಟಿ ಬಿಚ್ಚುತ್ತಿಲ್ಲ ಎಂದು ವಿಧಾನ ಪರಿಷತ್ ಸದಸ್ಯ ಸಿ.ಟಿ.ರವಿ ಆರೋಪಿಸಿದರು.

ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡಕ್ಕೆ ಮೀಸಲಾಗಿರುವ ಹಣವನ್ನು ಡೈವರ್ಟ್ ಮಾಡಲಾಗಿದೆ. ಆದರೆ ಈ ಬಗ್ಗೆ ಮಲ್ಲಿಕಾರ್ಜುನ ಖರ್ಗೆ ಸೌಂಡ್‌ಲೆಸ್, ರಾಹುಲ್ಗಾಂಧಿ ವಾಯ್ಸಲೆಸ್ ಆಗಿದ್ದಾರೆ. ಇಬ್ಬರು ಈಗ ಮಾತನಾಡಬೇಕು. ಅಲ್ಪಸಂಖ್ಯಾತರ ಇಲಾಖೆಯಲ್ಲೂ ಹಣದ ಲೂಟಿ ನಡೆದಿದೆ. ಕಾರ್ಮಿಕ ಇಲಾಖೆಯಲ್ಲೂ ಆರೋಗ್ಯ ತಪಾಸಣೆ ಹೆಸರಲ್ಲಿ ಹಣ ಡ್ರಾ ಮಾಡಲಾಗಿದೆ. ಬಿಬಿಎಂಪಿ ಸೇರಿದಂತೆ ವಿವಿಧ ಇಲಾಖೆಯಲ್ಲಿ ಟೆಂಡರ್ ಹಗರಣ ನಡೆದಿದೆ ಎಂದು ಸುದ್ದಿಗೋಷ್ಠಿಯಲ್ಲಿ ಟೀಕಿಸಿದರು.

ಶಾಪ ವಿಮೋಚನೆಗಾಗಿ ಬಿಜೆಪಿ-ಜೆಡಿಎಸ್ ಪಾದಯಾತ್ರೆ ಮಾಡುತ್ತಿದ್ದಾರೆಂದು ಡಿಸಿಎಂ ಡಿ.ಕೆ.ಶಿವಕುಮಾರ್ ಹೇಳಿದ್ದಾರೆ. ಡಿಕೆಶಿ ಎಷ್ಟು ಪುಣ್ಯ ಗಳಿಸಿದ್ದಾರೆ ಎನ್ನುವುದು ಗೊತ್ತಿದೆ. ಆ ಪುಣ್ಯದಿಂದಾಗಿಯೇ ತಿಹಾರ್ ಜೈಲಿಗೆ ಹೋಗಿದ್ದು. ಇನ್ನೂ ಹಲವು ಪ್ರಕರಣಗಳಿಂದ ಬೇಲ್ ಮೇಲಿದ್ದಾರೆ. ನಾವು ಭ್ರಷ್ಟಾಚಾರದ ವಿರುದ್ಧ ಹೋರಾಟ ಮಾಡುತ್ತಿದ್ದೇವೆ. ಭ್ರಷ್ಟಾಚಾರದ ಪರ ನಾವು ನಿಂತಿಲ್ಲ. ನಮ್ಮ ಕಡೆ ಬೊಟ್ಟು ತೋರಿ ಭ್ರಷ್ಟಾಚಾರಕ್ಕೆ ಲೈಸೆನ್ಸ್ ಸಿಕ್ಕಿದೆ ಎಂದುಕೊಂಡಿದ್ದಾರೆ. ಹೀಗಾಗಿ ಭ್ರಷ್ಟಾಚಾರ ಮಾಡಿದವರೆಲ್ಲರೂ ಒಂದಾಗಿದ್ದಾರೆ. ಹಗರಣದ ತನಿಖೆ ಏಕೆ ಮಾಡುತ್ತಿಲ್ಲ. ತನಿಖೆ ಮಾಡಿ ಶಿಕ್ಷೆ ಕೊಡಿಸಲಿ ಎಂದು ಸವಾಲು ಹಾಕಿದರು.

ಬಾಂಗ್ಲಾದೇಶದಲ್ಲಿ ನಡೆದಿರುವ ವಿದ್ಯಮಾನಕ್ಕೆ ಅಲ್ಪಸಂಖ್ಯಾತರು, ಹಿಂದು, ಪರ್ಷಿಯನ್, ಸಿಖ್ಖರು ಆತಂಕಗೊಂಡಿದ್ದಾರೆ. ಪಾದಯಾತ್ರೆ ನಡುವೆ ಬಾಂಗ್ಲಾದೇಶದಲ್ಲಿ ಹಿಂದುಗಳ ಮೇಲೆ ಹಲ್ಲೆ ಮಾಡಲಾಗಿದೆ. ಹಿಂದು ದೇವಾಲಯ ಗುರಿ ಮಾಡಿ ಧ್ವಂಸ ಮಾಡಿದ್ದಾರೆ. ಬಾಂಗ್ಲಾದಲ್ಲಿ ವಿದ್ಯಾರ್ಥಿ ಚಳವಳಿ ಹೆಸರಲ್ಲಿ ಪ್ರಾರಂಭವಾಗಿದ್ದ ಗಲಾಟೆ, ಮಿಸಲಾತಿ ಹೆಚ್ಚಳ ವಿರುದ್ದವಾಗಿ ಬೀದಿಗಳಿದರು. ಬಾಂಗ್ಲಾ ರೀತಿಯಲ್ಲೇ ಸಂಘರ್ಷ ಭಾರತದಲ್ಲೂ ನಡೆಯುವ ಕಾಲ ಹತ್ತಿರದಲ್ಲಿದೆ. ಪ್ರಧಾನಿಗೂ ಅದೇ ರೀತಿ ಪರಿಸ್ಥಿತಿ ಬರುತ್ತೆ ಎನ್ನುವ ಹೇಳಿಕೆಯನ್ನು ಖುರ್ಸಿದ್ ಅಲಂ ಖಾನ್ ಹಾಗೂ ಸಂಜನ್ ಸಿಂಗ್ ವರ್ಮಾ ಹೇಳಿದ್ದಾರೆ. ಅವರ ಹೇಳಿಕೆ ಆಕಸ್ಮಿಕ ಎಂದು ಹೇಳಲಾಗಲ್ಲ. ಹೇಳಿಕೆ ಅವರ ಅಭಿಪ್ರಾಯನಾ ಅಥವಾ ಪಕ್ಷದ ಕಾರ್ಯಕ್ರಮವಾ ಎಂಬುದನ್ನ ಕಾಂಗ್ರೆಸ್ ಪಕ್ಷದ ವರಿಷ್ಠರು ಹೇಳಬೇಕು. ಆದ್ದರಿಂದ ಅವರ ಮೇಲೆ ತನಿಖೆ ನಡೆಸಿ ಕ್ರಮ ಕೈಗೊಳ್ಳಬೇಕು ಎಂದು ಒತ್ತಾಯಿಸಿದರು.

ಬಾಂಗ್ಲಾದೇಶ, ಪಾಕಿಸ್ತಾನ, ಅಫ್ಘಾನಿಸ್ತಾನದ ಜನರು ಭಾರತಕ್ಕೆ ಬಂದರೆ ಪೌರತ್ವ ಸಿಗುತ್ತದೆ. ಈ ಹಿಂದೆಯೂ ದೇಶದಲ್ಲಿ ಕ್ಷೋಭೆ ಮತ್ತು ಹರಾಜಕತೆಯನ್ನ ಉಂಟು ಮಾಡಲು ಸಂಚು ನಡೆಸಿದ್ದರು. ರಾಹುಲ್ ಗಾಂಧಿ ಅವರು ವಿದೇಶಿ ಶಕ್ತಿಯ ಸಹಕಾರ ಕೇಳಿದಾಗಲೂ ಆ ಪಕ್ಷ ಖಂಡಿಸಲಿಲ್ಲ. ಚುನಾಯಿತ ಸರ್ಕಾರವನ್ನ ಬುಡಮೇಲು ಮಾಡುವ ಸಂಚಿಗೆ ಕೈ ಹಾಕಿದ್ದಾರೆ. ಬಾಂಗ್ಲಾ ಮತ್ತು ಪಾಕಿಸ್ತಾನದಲ್ಲಿ ಹಿಂದುಗಳು ಕಡಿಮೆಯಾಗಿದ್ದಾರೆ. ಅಲ್ಲಿನ ಹಿಂದುಗಳ ಸಂಖ್ಯೆಯ ಕುಸಿತಕ್ಕೆ ಕಾರಣ ಏನು?. ಆದರೆ ನಮ್ಮ ದೇಶದಲ್ಲಿ ಮಾತ್ರ ಅವರ ಜನಸಂಖ್ಯೆ ಹೆಚ್ಚಾಗುತ್ತಿದೆ. ಈ ಬಗ್ಗೆ ದೇಶದ ಹಿತಾಸಕ್ತಿಯಿಂದ ರಾಜಕೀಯ ನಾಯಕರು ತಮ್ಮ ನಿಲುವು ಬದಲಾಯಿಸಿಕೊಳ್ಳಬೇಕು ಎಂದು ಸಲಹೆ ನೀಡಿದರು.

ಭಾರತದ ಒಳಗೂ ಅಪಾಯ ಇದೆ. ಕಾಶ್ಮೀರ, ಪಶ್ಚಿಮಬಂಗಾಳ, ಕೇರಳದ ಕೆಲವು ಜಿಲ್ಲೆಗಳಲ್ಲಿ ಅಸುರಕ್ಷತೆ ಇದೆ. ಸೈನ್ಯದ ಬಲದಿಂದಲಾದ್ದರೂ ನಾವು ಅಲ್ಲಿನ ಹಿಂದುಗಳ ರಕ್ಷಣೆ ಮಾಡಬೇಕು. ಹಿಂದುಗಳು ಬಹುಸಂಖ್ಯಾತರಾಗಿ ಉಳಿಯುವವರೆಗೆ ಮಾತ್ರ ಸಂವಿಧಾನ, ಪ್ರಜಾಪ್ರಭುತ್ವ ಉಳಿಯುತ್ತದೆ. ಹೀಗಾಗಿ ನಾವು ಜಾತಿ, ರಾಜಕಾರಣ ಮೀರಿ ಹಿಂದು ಮತ್ತು ದೇಶಕ್ಕಾಗಿ ರಾಜಕಾರಣ ಮಾಡಬೇಕು. ದೇಶ ಮತ್ತು ಸಂವಿಧಾನದ ರಕ್ಷಣೆಗಾಗಿ ರಾಜಕಾರಣ ಮಾಡಬೇಕು ಎಂದ ಅವರು, ವಿನೇಶ್ ಫೋಗಟ್ ವಿಚಾರದಲ್ಲಿ ಭಾರತ ಗೆಲ್ಲುವ ವಿಶ್ವಾಸ ನಮ್ಮಲ್ಲಿತ್ತು. ನಿಯಮಗಳ ಅಡಿಯಲ್ಲಿ ನಮ್ಮ ಅವಕಾಶ ಕಿತ್ತುಕೊಂಡಿದ್ದಾರೆ. ಆಕೆಯೊಂದಿಗೆ ಭಾರತೀಯರಾದ ನಾವೆಲ್ಲರೂ ಇದ್ದೇವೆ. ಪ್ರಧಾನಮಂತ್ರಿ ನರೇಂದ್ರ ಮೋದಿ ಅವರು ಕೂಡ ಧೈರ್ಯ ತುಂಬಿದ್ದಾರೆ ಎಂದು ಹೇಳಿದರು.

ಮಾಜಿ ಶಾಸಕ ಪ್ರೀತಂಗೌಡ ಪ್ಲೆಕ್ಸ್‌ಗೆ ಬೆಂಕಿ ಹಾಕಿದ ವಿಚಾರಕ್ಕೆ ಪ್ರತಿಕ್ರಿಯಿಸಿ, ಎರಡೂ ಪಕ್ಷದ ಕಾರ್ಯಕರ್ತರು ಕೈ ಕೈ ಮಿಲಾಯಿಸಿದ್ದು, ಕೆಲವು ಜನರು ಅಷ್ಟೆ. ಸಾವಿರಾರು ಜನ ಭಾಗವಹಿಸಿದಾಗ ಅವರವರ ನಾಯಕರ ಬಗ್ಗೆ ಅಭಿಮಾನದಿಂದ ಘೋಷಣೆ ಕೂಗಿದ್ದಾರೆ. ಆ ತರಹದ ಘಟನೆ ಏನು ನಡೆದಿಲ್ಲ.ಕುಮಾರಸ್ವಾಮಿ ನಮ್ಮ ಎನ್‌ಡಿಎ ನಾಯಕರು. ಅವರಿಗೆ ಇರಬೇಕಾದ ಗೌರವ ಇದೆ. ಪ್ರೀತಂ ಅವರು ಭವಿಷ್ಯದ ನಾಯಕ. ಆದ್ದರಿಂದ ಪ್ರೀತಂಗೌಡರನ್ನ ರಕ್ಷಣೆ ಮಾಡಿಕೊಂಡು ಕುಮಾರಸ್ವಾಮಿ ಅವರಿಗೂ ಗೌರವ ಕೊಟ್ಟು ನಮ್ಮ ಮೈತ್ರಿ ಮುಂದುವರಿಸುತ್ತೇವೆ. ಭವಿಷ್ಯದ ಬಗ್ಗೆ ಯೋಚನೆ ಮಾಡಿ ರಾಜಕಾರಣ ಮಾಡಬೇಕು ಎಂದರು.

ಮಾಜಿ ಸಚಿವ ಕೆ.ಸಿ.ನಾರಾಯಣಗೌಡ, ಬಿಜೆಪಿ ಜಿಲ್ಲಾಧ್ಯಕ್ಷ ಡಾ.ಎನ್.ಎಸ್.ಇಂದ್ರೇಶ್, ಜಿಲ್ಲಾ ವಕ್ತಾರ ಸಿ.ಟಿ.ಮಂಜುನಾಥ್, ಮಾಧ್ಯಮ ಸಂಚಾಲಕ ನಾಗಾನಂದ ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net