

ಚೆನ್ನೈ: ಗಾಯಾಳುಗಳನ್ನು ನೆರವಿಗೆ ಧಾವಿಸಿದ ಆ್ಯಂಬುಲೆನ್ಸ್ಗೆ ಮಿನಿಬಸ್ ಡಿಕ್ಕಿ ಹೊಡೆದು ಮೂವರು ದಾರುಣವಾಗಿ ಮೃತಪಟ್ಟಿರುವ ಘಟನೆ ತಮಿಳುನಾಡಿನ ಚೆನ್ನೈ-ತಿರುಚಿರಾಪಳ್ಳಿ ರಾಷ್ಟ್ರೀಯ ಹೆದ್ದಾರಿಯಲ್ಲಿ ನಡೆದಿದೆ.
ಅಪಘಾತದಲ್ಲಿ ಆ್ಯಂಬುಲೆನ್ಸ್ ಚಾಲಕ ಐ. ರಾಜೇಂದ್ರನ್(45), ದಿಂಡಿಗಲ್ ನಿವಾಸಿಗಳಾದ ಎ. ಕುಪ್ಪುಸ್ವಾಮಿ(60), ಎಸ್. ಕವಿಪ್ರಿಯ(22) ಮೃತ ದುರ್ದೈವಿಗಳೆಂದು ತಿಳಿದು ಬಂದಿದೆ.
ಈ ಕುರಿತು ಪ್ರತಿಕ್ರಿಯಿಸಿರುವ ಪೊಲೀಸ್ ಅಧಿಕಾರಿ ಒಬ್ಬರು ತಿರುವಣ್ಣಾಮಲೈನಿಂದ ದಿಂಡಿಗಲ್ಗೆ 10ಮಂದಿ ಪ್ರವಾಸ ಮುಗಿಸಿ ಮಿನಿಬಸ್ನಲ್ಲಿ ವಾಪಸ್ ಆಗುತ್ತಿದ್ದ ವೇಳೆ ಚಾಲಕ ಮುಂಬದಿ ಸಾಗುತ್ತಿದ್ದ ಟ್ರ್ಯಾಕ್ಟರ್ ಓವರ್ಟೇಕ್ ಮಾಡಲು ಮುಂದಾಗಿದ್ದಾನೆ. ಈ ವೇಳೆ ನಿಯಂತ್ರಣ ತಪ್ಪಿ ಮಿನಿಬಸ್ ಟ್ರ್ಯಾಕ್ಟರ್ಗೆ ಡಿಕ್ಕಿ ಹೊಡೆದು ಡಿವೈಡರ್ ಮೇಲೆ ನಿಂತಿದೆ.
ಇದನ್ನೂ ಓದಿ: ಆನ್ಲೈನ್ ಗೇಮಿಂಗ್ ಮೂಲಕ ಅಪ್ರಾಪ್ತ ವಯಸ್ಕರ ಮತಾಂತರ!
ಕೂಡಲೇ ಸಾರ್ವಜನಿಕರು 108 ಆ್ಯಂಬುಲೆನ್ಸ್ಗೆ ಕರೆ ಮಾಡಿ ಅಪಘಾತದ ವಿಚಾರ ತಿಳಿಸಿದ್ದಾರೆ. ವಿಷಯ ತಿಳಿದು ಸ್ಥಳಕ್ಕೆ ದೌಡಾಯಿಸಿದ ಸಿಬ್ಬಂದಿ ಗಾಯಾಳುಗಳ ರಕ್ಷಣೆಯಲ್ಲಿ ತೊಡಗಿದ್ದಾರೆ. ಗಾಯಾಳುಗಳನ್ನು ಆಸ್ಪತ್ರೆಗೆ ಸಾಗಿಸಲು ತಯಾರಿ ನಡೆಸುತ್ತಿದ್ದ ವೇಳೆ ಆ್ಯಂಬುಲೆನ್ಸ್ಗೆ ಚೆನ್ನೈನಿಂದ ತಿರುಚ್ಚಿ ಕಡೆಗೆ ವೇಗವಾಗಿ ಬರುತ್ತಿದ್ದ ಮಿನಿಬಸ್ ಒಂದು ಡಿಕ್ಕಿ ಹೊಡೆದಿದೆ.
ಮಿನಿಬಸ್ ಡಿಕ್ಕಿ ಹೊಡೆದ ರಭಸಕ್ಕೆ ಆ್ಯಂಬುಲೆನ್ಸ್ ಚಾಲಕ ರಾಜೇಂದ್ರನ್, ಗಾಯಾಳುಗಳ ನೆರವಿಗೆ ಧಾವಿಸಿದ್ದ ಕುಪ್ಪುಸ್ವಾಮಿ, ಕವಿಪ್ರಿಯ ಸ್ಥಳದಲ್ಲೇ ಮೃತಪಟ್ಟಿದ್ದಾರೆ. ಘಟನೆಯಲ್ಲಿ ಗಾಯಗೊಂಡವರನ್ನು ಪೆರಂಬಲೂರಿನ ಸರ್ಕಾರಿ ಆಸ್ಪತ್ರೆಗೆ ದಾಖಲಿಸಲಾಗಿದೆ ಎಂದು ಪೊಲೀಸ್ ಅಧಿಕಾರಿ ಒಬ್ಬರು ತಿಳಿಸಿದ್ಧಾರೆ.
ಮಿನಿಬಸ್-ಆ್ಯಂಬುಲೆನಸ್ ನಡುವಿನ ಅಪಘಾತದ ಕುರಿತು ಸಂತಾಪ ಸೂಚಿಸಿರುವ ತಮಿಳುನಾಡು ಮುಖ್ಯಮಂತ್ತಿ ಎಂ.ಕೆ. ಸ್ಟಾಲಿನ್ ಮೃತರ ಕುಟುಂಬಗಳಿಗೆ ತಲಾ 2 ಲಕ್ಷ ರೂ., ಗಾಯಾಳುಗಳಿಗೆ 50,000 ಸಾವಿರ ರೂ. ಪರಿಹಾರವನ್ನು ಘೋಷಿಸಿದ್ಧಾರೆ.