ಬಿಲ್​ ಶೇರ್​ ಮಾಡುವಂತೆ ಹೇಳಿದ್ದಕ್ಕೆ ಸಿಟ್ಟು; ಜನುಮದಿನದಂದೇ ಸಿನಿಮೀಯ ಶೈಲಿಯಲ್ಲಿ ಯುವಕನ ಹತ್ಯೆ

Crime
Published on

ಮುಂಬೈ: ಜನುಮದಿನದಂದೆ ಯುವಕನನ್ನು ಆತನ ಸ್ನೇಹಿತರೆ ಕೊಚ್ಚಿ ಕೊಲೆ ಮಾಡಿರುವ ಘಟನೆ ಮುಂಬೈನ ಗೋವಂಡಿ ಎಂಬ ಪ್ರದೇಶದಲ್ಲಿ ನಡೆದಿದೆ. ಬಿಲ್​ ನೀಡುವ ವಿಚಾರವಾಗಿ ಗುಂಪಿನಲ್ಲಿ ಜಗಳ ಏರ್ಪಟ್ಟಿದ್ದು ಒಬ್ಬರ ದಾರುಣ ಅಂತ್ಯದಲ್ಲಿ ಕೊನೆಗೊಂಡಿದೆ.

ಮೃತ ದುರ್ದೈವಿಯನ್ನು ಶಬ್ಬೀರ್​ ಅನ್ಸಾರಿ​(18) ಎಂದು ಗುರುತಿಸಲಾಗಿದೆ. ಪ್ರಕರಣ ಸಂಬಂಧ ಮುಂಬೈನ ಶಿವಾಜಿನಗರ ಪೊಲೀಸರು ಇಬ್ಬರು ಅಪ್ರಾಪ್ತ ವಯಸ್ಕರ ಸೇರಿದಂತೆ ನಾಲ್ವರನ್ನು ವಶಕ್ಕೆ ಪಡೆದಿರುವುದಾಗಿ ತಿಳಿಸಿದ್ಧಾರೆ. ಬಂಧಿತರನ್ನು ಶಾರುಖ್​(19), ನಿಶಾರ್(22) ಬಂಧಿಸಿ ವಿಚಾರಣೆಗೆ ಒಳಪಡಿಸಿರುವುದಾಗಿ ತಿಳಿದು ಬಂದಿದೆ.

ಬಿಲ್​ ಕೇಳಿದ್ದಕ್ಕೆ ಸಿಟ್ಟು

ಈ ಕುರಿತು ಪ್ರತಿಕ್ರಿಯಿಸಿರುವ ಶಿವಾಜಿನಗರ ಪೊಲೀಸ್​ ಠಾಣೆಯ ಅಧಿಕಾರಿ ಒಬ್ಬರು ಘಟನೆಯೂ ಮೇ 31ರಂದು ನಡೆದಿದ್ದು ಮೃತ ಯುವಕ ತನ್ನ ಜನ್ಮದಿನದ ಪ್ರಯುಕ್ತ ಸ್ನೇಹಿತರಿಗಾಗಿ ಢಾಭಾದಲ್ಲಿ ಪಾರ್ಟಿ ಆಯೋಜಿಸಿದ್ದ. ಈ ವೇಳೆ ಬಿಲ್​ ಶೇರ್​ ಮಾಡಿಕೊಳ್ಳುವಂತೆ ಮೃತ ಯುವಕ ತನ್ನ ಸ್ನೇಹಿತರ ಬಳಿ ಹೇಳಿದ್ದಾನೆ.

ANI tweet

ಇದಕ್ಕೊಪ್ಪದ ಆತನ ಸ್ನೇಹಿತರು ಮೊದಲಿಗೆ ಜಗಳ ತೆಗೆದಿದ್ದಾರೆ. ಬಳಿಕ ಬಿಲ್​ ತಾನೇ ಪಾವತಿಸುವುದಾಗಿ ಹೇಳಿ ಯುವಕ ಪರಿಸ್ಥಿತಿಯನ್ನು ತಿಳಿಗೊಳಿಸಿದ್ದಾನೆ. ಇದಾದ ಕೆಲ ಹೊತ್ತಿನ ಬಳಿಕ ಆರೋಪಿಗಳು ಸಂತ್ರಸ್ತನನ್ನು ಕೇಕ್​ ಕಟ್​ ಮಾಡಿಸುವ ನೆಪದಲ್ಲಿ ಕರೆಸಿಕೊಂಡು ಆತನ ಮೇಲೆ ದಾಳಿ ಮಾಡಿ ಮನಸೋಇಚ್ಛೆ ಚಾಕುವಿನಿಂದ ಇರಿದಿದ್ಧಾರೆ.

ನ್ಯಾಯಾಂಗ ವಶಕ್ಕೆ

ಕೇಕ್​ ಕಟ್​ ಮಾಡುವ ಚಾಕುವಿನಿಂದ ಇರಿತಕ್ಕೊಳಗಾಗಿ ತೀವ್ರವಾಗಿ ಗಾಯಗೊಂಡಿದ್ದ ಯುವಕನನ್ನು ಆಸ್ಪತ್ರೆಗೆ ದಾಖಲಿಸಲಾಯಿತಾದರೂ ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟಿದ್ದಾನೆ. ಪ್ರಕರಣ ಸಂಬಂಧ ಅಪ್ರಾಪ್ತ ವಯಸ್ಕರ ಮೊದಲಿಗೆ ಪೊಲೀಸರಿಗೆ ಶರಣಾಗಿದ್ದಾರೆ. ಆ ನಂತರ ಉತ್ತರಪ್ರದೇಶ ಮೂಲದ ಇಬ್ಬರನ್ನು ಗುಜರಾತಿನಲ್ಲಿ ಬಂಧಿಸಲಾಗಿದೆ.

ಆರೋಪಿಗಳನ್ನು ಬಂಧಿಸಿ ವಿಚಾರಣೆಗೆ ಒಳಪಡಿಸಿದಾಗ ತಪ್ಪೊಪ್ಪಿಕೊಂಡಿದ್ದಾರೆ. ಸಲ್ಮಾನ್​ ಖಾನ್​ ನಟನೆಯ ಅಂತಿಮ್​ ಚಿತ್ರವೇ ಇವರಿಗೆ ಕೊಲೆ ಮಾಡಲು ಸ್ಪೂರ್ತಿ ಎಂದು ಹೇಳಿದ್ದಾರೆ. ಅಪ್ರಾಪ್ತ ವಯಸ್ಕರರನ್ನು ಬಾಲ ಅಪರಾಧಿ ಕೇಂದ್ರಕ್ಕೆ ಕಳುಹಿಸಲಾಗಿದ್ದು ಇನ್ನಿಬ್ಬರನ್ನು ನ್ಯಾಯಾಂಗ ವಶಕ್ಕೆ ಒಪ್ಪಿಸಲಾಗಿದೆ ಎಂದು ಶಿವಾಜಿನಗರ ಪೊಲೀಸ್​ ಠಾಣೆಯ ಅಧಿಕಾರಿ ತಿಳಿಸಿದ್ಧಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net