

ನವದೆಹಲಿ: ದೇಶದ ಶ್ರೀಮಂತ ಉದ್ಯಮಿ ಮುಕೇಶ್ ಅಂಬಾನಿ ಕುಟುಂಬ ಇತ್ತೀಚೆಗಷ್ಟೇ ತಮ್ಮ ಕಿರಿಯ ಪುತ್ರ ಅನಂತ್ ಅಂಬಾನಿ ಮದುವೆಯನ್ನು 5,454 ಕೋಟಿ ರೂ. ಖರ್ಚು ಮಾಡಿ ಬಹಳ ಅದ್ಧೂರಿಯಾಗಿ ನೆರವೇರಿಸಿದ್ದು ಎಲ್ಲರಿಗೂ ಗೊತ್ತೇ ಇದೆ. ಇಡೀ ದೇಶವೇ ಈ ವಿವಾಹ ಸಮಾರಂಭವನ್ನು ನೋಡಿ ಬಾಯಿ ಮೇಲೆ ಬೆರಳಿಟ್ಟುಕೊಂಡಿತು. ಇದೀಗ ಅಂಬಾನಿ ಕುಟುಂಬಕ್ಕೆ ಸಂಬಂಧಿಸಿದ ಮತ್ತೊಂದು ಆಶ್ಚರ್ಯಕರ ಸಂಗತಿ ವರದಿಯಾಗಿದೆ. ಅದೇನೆಂದರೆ ದೇಶದ ಒಟ್ಟು ದೇಶೀಯ ಉತ್ಪನ್ನ (ಜಿಡಿಪಿ)ದ ಶೇ.10 ರಷ್ಟು ಆಸ್ತಿಯನ್ನು ಅಂಬಾನಿ ಕುಟುಂಬವೇ ಹೊಂದಿದೆ.
ಹೌದು, 2024ರ ಬಾರ್ಕ್ಲೇಸ್ ಪ್ರೈವೇಟ್ ಕ್ಲೈಂಟ್ಸ್ ಹುರುನ್ ಇಂಡಿಯಾ ಮೋಸ್ಟ್ ವ್ಯಾಲ್ಯೂಯೇಬಲ್ ಫ್ಯಾಮಿಲಿ ಬಿಸಿನೆಸ್ ಲೀಸ್ಟ್ನಲ್ಲಿ ಅಂಬಾನಿ ಕುಟಂಬ ಮೊದಲ ಸ್ಥಾನವನ್ನು ಪಡೆದಿದೆ. ಬರೋಬ್ಬರಿ 309 ಬಿಲಿಯನ್ ಡಾಲರ್ (25.75 ಲಕ್ಷ ಕೋಟಿ ರೂಪಾಯಿ) ಆಸ್ತಿಯನ್ನು ಹೊಂದಿರುವ ಮುಕೇಶ್ ಅಂಬಾನಿ ಕುಟುಂಬ ದೇಶದ ಜಿಡಿಪಿಯ ಶೇ. 10 ರಷ್ಟು ಸಂಪತ್ತನ್ನು ತನ್ನ ಖಜಾನೆಯಲ್ಲಿ ತುಂಬಿಕೊಂಡಿದೆ.
ಈ ಲೀಸ್ಟ್ನಲ್ಲಿ ನೀರಜ್ ಬಜಾಬ್ ನೇತೃತ್ವದ ಬಜಾಜ್ ಕುಟುಂಬ 7,12,700 ಕೋಟಿ ರೂ. ನಿವ್ವಳ ಮೌಲ್ಯದೊಂದಿಗೆ ಎರಡನೇ ಸ್ಥಾನದಲ್ಲಿದೆ. ಕುಮಾರ್ ಮಂಗಳಂ ಅವರ ಬಿರ್ಲಾ ಕುಟುಂಬ 5,38,500 ಕೋಟಿ ರೂ. ನಿವ್ವಳ ಮೌಲ್ಯದೊಂದಿಗೆ ಮೂರನೇ ಸ್ಥಾನದಲ್ಲಿದೆ. ಆದರೆ, 15,44,500 ಕೋಟಿ ರೂ. ನಿವ್ವಳ ಮೌಲ್ಯ ಹೊಂದಿರುವ ಗೌತಮ್ ಅದಾನಿ ನೇತೃತ್ವದ ಸಂಘಟಿತ ಕಂಪನಿ ಈ ಪಟ್ಟಿಯಲ್ಲಿ ಸ್ಥಾನವನ್ನು ಪಡೆದಿಲ್ಲ. ಏಕೆಂದರೆ, ಮೊದಲ ತಲೆಮಾರಿನ ಕುಟುಂಬ ವ್ಯವಹಾರದ ಸ್ಥಿತಿಯಿಂದಾಗಿ ಅದಾನಿ ಕಂಪನಿ ಸ್ಥಾನ ಪಡೆದಿಲ್ಲ.
ಹುರುನ್ ವರದಿಯ ಪ್ರಕಾರ, ಅದರ ಪಟ್ಟಿಯು ಕುಟುಂಬದ ವಂಶಸ್ಥರು ಬಿಜಿನೆಸ್ಗಾಗಿ ಸಕ್ರಿಯವಾಗಿ ಕೊಡುಗೆ ನೀಡುತ್ತಾ ಬಂದಿರುವ ಕೌಟುಂಬಿಕ ವ್ಯವಹಾರಗಳ ಮೇಲೆ ಕೇಂದ್ರೀಕರಿಸುತ್ತದೆ. ಅಲ್ಲದೆ, ಕುಟುಂಬ ಮಾಲೀಕತ್ವದ ಉದ್ಯಮಗಳ ಒಟ್ಟಾರೆ ಮೌಲ್ಯವನ್ನು ಇದು ನಿರ್ಣಯಿಸುತ್ತದೆ.
ಈ ಪಟ್ಟಿಯಲ್ಲಿರುವ ಭಾರತದ ಅಗ್ರ ಹತ್ತು ವ್ಯಾಪಾರ ಕುಟುಂಬಗಳು ಒಟ್ಟಾರೆಯಾಗಿ 60,09,100 ಕೋಟಿ ಮೌಲ್ಯವನ್ನು ಹೊಂದಿವೆ. ಈ ಒಂದು ಅಂಕಿ-ಅಂಶ ಭಾರತದ ವ್ಯಾಪಾರ ವಲಯದಲ್ಲಿ ಕುಟುಂಬ ನೇತೃತ್ವದ ಉದ್ಯಮಗಳ ಗಮನಾರ್ಹ ಉಪಸ್ಥಿತಿಯನ್ನು ಎತ್ತಿ ತೋರಿಸುತ್ತದೆ. 2024ರ ಬಾರ್ಕ್ಲೇಸ್ ಪ್ರೈವೇಟ್ ಕ್ಲೈಂಟ್ಸ್ ಹುರುನ್ ಇಂಡಿಯಾ ಮೋಸ್ಟ್ ವ್ಯಾಲ್ಯೂಯೇಬಲ್ ಫ್ಯಾಮಿಲಿ ಬಿಜಿನೆಸ್ ಒಟ್ಟು ಮೌಲ್ಯವು 130 ಲಕ್ಷ ಕೋಟಿ ರೂ. ಆಗಿದೆ. ಈ ಅಂಕಿ ಅಂಶವು ಯುಎಇ ಮತ್ತು ಸ್ವಿಟ್ಜರ್ಲೆಂಡ್‌ನಂತಹ ದೇಶಗಳ ಜಿಡಿಪಿಯನ್ನು ಸಹ ಮೀರಿಸುತ್ತದೆ. ಗಮನಾರ್ಹ ಸಂಗತಿ ಏನೆಂದರೆ, ಈ ಪಟ್ಟಿಯಲ್ಲಿ ಒಟ್ಟು 46 ಲಕ್ಷ ಕೋಟಿ ರೂ. ಮೌಲ್ಯವನ್ನು ಹೊಂದಿರುವ ಅಗ್ರ ಮೂರು ಕುಟುಂಬಗಳು ಸಿಂಗಾಪುರದ ಜಿಡಿಪಿಗೆ ಹೋಲಿಸಬಹುದಾದ ಅಂಕಿ ಅಂಶವನ್ನು ಹೊಂದಿವೆ.
ಹತ್ತು ಮೋಸ್ಟ್ ವ್ಯಾಲ್ಯೂಯೇಬಲ್ ಫ್ಯಾಮಿಲಿ ಬಿಜಿನೆಸ್ ಪಟ್ಟಿ ಈ ಕೆಳಕಂಡಂತಿದೆ
1. ಅಂಬಾನಿ ಕುಟುಂಬ
2. ಬಜಾಜ್ ಕುಟುಂಬ
3. ಕುಮಾರ್ ಮಂಗಳಂ ಬಿರ್ಲಾ ಕುಟುಂಬ
4. ಜಿಂದಾಲ್ ಕುಟುಂಬ
5. ನದಾರ್ ಕುಟುಂಬ
6. ಮಹೀಂದ್ರಾ ಕುಟುಂಬ
7. ದನಿ ಕುಟುಂಬ, ಚೋಕ್ಸಿ ಕುಟುಂಬ ಮತ್ತು ವಕಿಲ್ ಕುಟುಂಬ
8. ಪ್ರೇಮ್ಜಿ ಕುಟುಂಬ
9. ರಾಜೀವ್ ಸಿಂಗ್ ಕುಟುಂಬ
10. ಮುರುಗಪ್ಪ ಕುಟುಂಬ