ಪ್ಲೀಸ್​ ನನ್ನನ್ನು ಮದ್ವೆಯಾಗಿ! ಕಾಲಿಗೆ ಬಿದ್ದು ಬೇಡಿಕೊಂಡ ಅಭಿಮಾನಿಗೆ ಸಮಂತಾ ಕೊಟ್ಟ ಉತ್ತರ ವೈರಲ್​

Samantha
Published on

ಹೈದರಾಬಾದ್​: ಟಾಲಿವುಡ್​ ಹೀರೋ ಮತ್ತು ನಟಿ ಸಮಂತಾರ ಮಾಜಿ ಪತಿ ನಾಗಚೈತನ್ಯ ಎರಡನೇ ಮದುವೆಗೆ ಸಜ್ಜಾಗಿರುವ ಸಂಗತಿ ಎಲ್ಲರಿಗೂ ತಿಳಿದೇ ಇದೆ. ಆಗಸ್ಟ್​ 8ರಂದು ನಟಿ ಶೋಭಿತಾ ಧೂಳಿಪಲ ಅವರೊಂದಿಗೆ ನಿಶ್ಚಿತಾರ್ಥ ಮಾಡಿಕೊಂಡರು. ಶೀಘ್ರದಲ್ಲೇ ಇಬ್ಬರು ಹಸೆಮಣೆ ಏರಲಿದ್ದಾರೆ.

ಯಾವಾಗ ನಾಗಚೈತನ್ಯ ನಿಶ್ಚಿತಾರ್ಥ ಮಾಡಿಕೊಂಡರೋ ಇದೀಗ ಎಲ್ಲರ ಕಣ್ಣು ಸಮಂತಾ ಮೇಲೆ ಬಿದ್ದಿದೆ. ಸಮಂತಾ ಮಾಜಿ ಪತ್ನಿಯಾಗಿರುವುದರಿಂದ ನಿಶ್ಚಿತಾರ್ಥ ಬಗ್ಗೆ ಏನು ಹೇಳುತ್ತಾರೋ ಎಂಬ ಕುತೂಹಲ ಎಲ್ಲರಲ್ಲೂ ಇದೆ. ಈ ಕಾರಣದಿಂದಾಗಿಯೇ ಸಮಂತಾ ಸಾಮಾಜಿಕ ಜಾಲತಾಣದಲ್ಲಿ ಟ್ರೆಂಡ್​ ಆಗಿದ್ದಾರೆ. ಇದರ ನಡುವೆ ಅಭಿಮಾನಿ ಮಾಡಿದ ಪ್ರೇಮ ನಿವೇದನೆಗೆ ಓಕೆ ಎನ್ನುವ ಮೂಲಕ ಸಮಂತಾ ಮತ್ತೆ ಸುದ್ದಿಯಾಗಿದ್ದಾರೆ.

ಮುಕೇಶ್​ ಚಿಂತಾ ಹೆಸರಿನ ಇನ್​ಸ್ಟಾಗ್ರಾಂ ಬಳಕೆದಾರ ಸಮಂತಾಗೆ ಪ್ರಪೋಸ್​ ಮಾಡುತ್ತಿರುವ ವಿಡಿಯೋವೊಂದನ್ನು ಶೇರ್​ ಮಾಡಿಕೊಂಡಿದ್ದಾರೆ. ಸಮಂತಾ ನೀವು ತುಂಬಾ ಬೇಸರ ಮಾಡಿಕೊಳ್ಳಬೇಕಿಲ್ಲ. ನಾನು ನಿಮಗಾಗಿ ಇದ್ದೇನೆ. ನಾನು ಮತ್ತು ನೀವು ಒಳ್ಳೆಯ ಜೋಡಿಯಾಗಬಹುದು. ನೀವು ಓಕೆ ಅಂದರೆ ನಾನು ನಿಮ್ಮನ್ನು ಮದುವೆಯಾಗಲು ಸಿದ್ಧ. ನೀವು ನನಗೆ ಸ್ವಲ್ಪ ವರ್ಷಗಳು ಸಮಯ ಕೊಡಿ, ನಾನು ಚೆನ್ನಾಗಿ ಸಂಪಾದನೆ ಮಾಡಿ ನಿಮ್ಮ ಬಳಿಗೆ ಬರುತ್ತೇನೆ. ನನ್ನ ಹೃದಯವನ್ನು ಸದ್ಯಕ್ಕೆ ಟೋಕನ್​ ಆಗಿ ಇಟ್ಟುಕೊಳ್ಳಿ. ದಯವಿಟ್ಟು ನನ್ನನ್ನು ಮದುವೆಯಾಗಿ ಸ್ಯಾಮ್​. ಪ್ಲೀಸ್​ ಸಮಂತಾ, ಪ್ಲೀಸ್​ ಸಮಂತಾ, ಪ್ಲೀಸ್​ ಸಮಂತಾ ಎಂದು ಹೇಳಿರುವ ವಿಡಿಯೋವನ್ನು ಅಭಿಮಾನಿ ಪೋಸ್ಟ್​ ಮಾಡಿದ್ದಾನೆ.

ಅಭಿಮಾನಿಯ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್​ ಆಗಿದ್ದು, ಕೊನೆಗೂ ಸಮಂತಾ ಕಣ್ಣಿಗೆ ಬಿದ್ದಿದೆ. ಅಲ್ಲದೆ, ಪ್ರತಿಕ್ರಿಯೆ ಸಹ ನೀಡಿದ್ದಾರೆ. ಅಭಿಮಾನಿಯ ವಿಡಿಯೋದಲ್ಲಿ ಬ್ಯಾಕ್​ಗ್ರೌಂಡ್​ನಲ್ಲಿ ಜಿಮ್​ ದೃಶ್ಯಾವಳಿಗಳು ಇವೆ. ಹಿಂಬದಿಯಲ್ಲಿರುವ ಆ ಜಿಮ್​ ಬ್ಯಾಂಕ್​ಗ್ರೌಂಡ್​ ಬಹುತೇಕ ನನಗೆ ಮನವರಿಕೆ ಮಾಡಿದೆ ಎಂದು ಹೇಳುವ ಮೂಲಕ ಅಭಿಮಾನಿಯ ಪ್ರೇಮ ನಿವೇದನೆಗೆ ಸಮಂತಾ ಓಕೆ ಎಂದಿದ್ದಾರೆ.

ಸಮಂತಾ ಪ್ರತಿಕ್ರಿಯೆಯಿಂದ ತುಂಬಾ ಖುಷಿಯಾಗಿರುವ ಅಭಿಮಾನಿ, ಇಡೀ ಜಗತ್ತು ಸಮಂತಾ ಎದುರು ನಿಂತುಕೊಂಡರೆ, ನಾನು ಆ ಜಗತ್ತಿನ ವಿರುದ್ಧವಾಗಿ ನಿಲ್ಲುತ್ತೇನೆ ಎಂದಿದ್ದಾರೆ. ಸದ್ಯ ಈ ಪೋಸ್ಟ್​ ಸಾಮಾಜಿಕ ಜಾಲತಾಣದಲ್ಲಿ ಸಿಕ್ಕಾಪಟ್ಟೆ ವೈರಲ್​ ಆಗುತ್ತಿದೆ. (ಏಜೆನ್ಸೀಸ್​)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net