

ನವದೆಹಲಿ: ಎಲ್ಲ ಫಾರ್ಮೆಟ್ಗಳಲ್ಲಿ ಅಗ್ರ ತಂಡವಾಗಿ ಹೊರಹೊಮ್ಮುತ್ತಿರುವ ಭಾರತದ ವಿರುದ್ಧ ಶ್ರೀಲಂಕಾಗೆ ಗೆಲುವು ಕನಸು ಎಂದು ಎಲ್ಲರು ಭಾವಿಸಿದ್ದರು. ಟೀಮ್ ಇಂಡಿಯಾ ಲಂಕಾ ವಿರುದ್ಧದ ಸರಣಿಯನ್ನು ಕ್ಲೀನ್ ಸ್ವೀಪ್ ಮಾಡಲಿದೆ ಅಂದುಕೊಂಡಿದ್ದರು. ಅದರಂತೆ ಟಿ20 ಸರಣಿಯಲ್ಲಿ ಟೀಮ್ ಇಂಡಿಯಾ ಲಂಕಾವನ್ನು ಕ್ಲೀನ್ ಸ್ವೀಪ್ ಮಾಡಿತು. ಹೀಗಾಗಿ ಏಕದಿನ ಸರಣಿ ಕೂಡ ನಮ್ಮದೇ ಎಂಬ ಆತ್ಮ ವಿಶ್ವಾಸ ಹೆಚ್ಚಿತು. ರೋಹಿತ್ ಶರ್ಮ, ವಿರಾಟ್ ಕೊಹ್ಲಿ, ಶ್ರೇಯಸ್ ಅಯ್ಯರ್ ಮತ್ತು ಕೆಎಲ್ ರಾಹುಲ್ ಅವರಂತಹ ಏಕದಿನ ಸ್ಪೆಷಲಿಸ್ಟ್ಗಳು ತಂಡವನ್ನು ಪ್ರವೇಶಿಸಿರುವುದರಿಂದ ಆತಿಥೇಯ ತಂಡಕ್ಕೆ ಮುಳುವಾಗಲಿದೆ ಎಂದು ಭಾವಿಸಲಾಗಿತ್ತು. ಆದರೆ, ಸೀನ್ ರಿವರ್ಸ್ ಆಯಿತು. ಶ್ರೀಲಂಕಾ ಪಡೆ ರೋಹಿತ್ ಸೇನೆಯನ್ನು ಸೋಲಿಸಿ 2-0 ಅಂತರದಲ್ಲಿ ಏಕದಿನ ಸರಣಿ ವಶಪಡಿಸಿಕೊಂಡಿದೆ.
ಬ್ಯಾಟಿಂಗ್ ವೈಫಲ್ಯ, ಟೀಮ್ ಕಾಂಬಿನೇಷನ್ ಸೆಟ್ ಆಗದಿರುವುದು, ಅಭ್ಯಾಸ ಪಂದ್ಯಗಳ ಕೊರತೆ, ಲಂಕಾ ಪಿಚ್ಗಳನ್ನು ಸರಿಯಾಗಿ ಅರ್ಥಮಾಡಿಕೊಳ್ಳದಿರುವುದು ಹಾಗೂ ಸ್ಪಿನ್ ಬೌಲಿಂಗ್ ಎದುರಿಸುವಲ್ಲಿ ದೌರ್ಬಲ್ಯ ಭಾರತದ ಸೋಲಿಗೆ ಕಾರಣಗಳಾದವು. ಆದರೆ ಈ ಭೀಕರ ಸೋಲು ತಂಡದ ಭವಿಷ್ಯದ ಮೇಲೆ ಹೆಚ್ಚು ಪರಿಣಾಮ ಬೀರದಿದ್ದರೂ ಕೆಲ ಆಟಗಾರರ ವೃತ್ತಿಜೀವನದ ಮೇಲೆ ಪರಿಣಾಮ ಬೀರುವುದು ಖಚಿತ ಎನಿಸುತ್ತಿದೆ.
ಸ್ಟಾರ್ ಬ್ಯಾಟ್ಸ್ಮನ್ ಶ್ರೇಯಸ್ ಅಯ್ಯರ್ ಕೂಡ ಡೇಂಜರ್ ಝೋನ್ನಲ್ಲಿ ಇದ್ದಾರೆ. ಅವರ ವೃತ್ತಿ ಜೀವನ ಈಗ ಅಪಾಯದಲ್ಲಿದೆ. ಲಂಕಾ ಜೊತೆಗಿನ ಏಕದಿನ ಸರಣಿಯಲ್ಲಿ ಹಲವು ನಿರೀಕ್ಷೆಗಳೊಂದಿಗೆ ಕಣಕ್ಕೆ ಇಳಿದಿದ್ದ ಈ ಪ್ರತಿಭಾವಂತ ಬ್ಯಾಟ್ಸ್ಮನ್ ತೀವ್ರ ನಿರಾಸೆ ಅನುಭವಿಸಿದ್ದಾರೆ. ಮೊದಲ ಏಕದಿನ ಪಂದ್ಯದಲ್ಲಿ 23 ರನ್ ಗಳಿಸಿದ್ದ ಅಯ್ಯರ್, ಉಳಿದ ಎರಡು ಏಕದಿನ ಪಂದ್ಯಗಳಲ್ಲಿ ಕೇವಲ 15 ರನ್ ಗಳಿಸಿದರು. ಒಟ್ಟಾರೆ ಅವರು ಸರಣಿಯಲ್ಲಿ 38 ರನ್ ಮಾತ್ರ ಗಳಿಸಿದರು. ಮಧ್ಯಮ ಕ್ರಮಾಂಕದಲ್ಲಿ ಬ್ಯಾಟ್ ಬೀಸಿದ ಅಯ್ಯರ್, ಇನ್ನಿಂಗ್ಸ್ ಹಿಡಿದಿಟ್ಟು ತಂಡವನ್ನು ದೊಡ್ಡ ಸ್ಕೋರ್ ಕಡೆಗೆ ಕೊಂಡೊಯ್ಯುತ್ತಾರೆ ಎಂದುಕೊಂಡಿದ್ದರು. ಆದರೆ, ಅವರು ಬೇಗನೇ ಔಟಾಗಿ ತಂಡದ ಕುಸಿತಕ್ಕೆ ಕಾರಣರಾದರು.
ಅಯ್ಯರ್ ಅವರು ವಿಕೆಟ್ ಪತನವನ್ನು ತಡೆದು ಇನ್ನಿಂಗ್ಸ್ ಮುನ್ನಡೆಸಿದ್ದರೆ ಸರಣಿಯ ಫಲಿತಾಂಶವೇ ಬೇರೆಯಾಗುತ್ತಿತ್ತು. ಇತ್ತೀಚಿನ ದಿನಗಳಲ್ಲಿ ಶ್ರೇಯಸ್ ಏಕದಿನ ಪಂದ್ಯಗಳಲ್ಲಿ ಉತ್ತಮವಾಗಿ ಆಡುತ್ತಿದ್ದಾರೆ. 2023ರ 50 ಓವರ್ಗಳ ವಿಶ್ವಕಪ್ನಲ್ಲಿಯೂ ಅವರು ಭಾರಿ ರನ್ ಗಳಿಸಿದ್ದರು. ಐಪಿಎಲ್ನಲ್ಲಿ ಯಶಸ್ಸು ಸಾಧಿಸಿದ್ದರು. ಆದರೆ ಲಂಕಾ ಸರಣಿಯಲ್ಲಿ ದಯನೀಯವಾಗಿ ವಿಫಲರಾದರು. ಇನ್ನು ಸ್ವಲ್ಪ ತಿಂಗಳುಗಳ ಕಾಲ ಭಾರತ ಏಕದಿನ ಪಂದ್ಯಗಳನ್ನು ಆಡುವುದಿಲ್ಲ. ಈ ಅಂತರದಲ್ಲಿ ಹಲವು ಟಿ20 ಹಾಗೂ ಟೆಸ್ಟ್ ಪಂದ್ಯಗಳು ನಡೆಯಲಿವೆ.
ಮುಂಬರುವ ಟಿ20 ಸರಣಿಯಲ್ಲಿ ಅಯ್ಯರ್ಗೆ ಸ್ಥಾನ ಪಡೆಯಲು ಅವಕಾಶವಿಲ್ಲ. ಒಂದು ವೇಳೆ ಟೆಸ್ಟ್ಗೆ ಆಯ್ಕೆಯಾದರೂ ಅವರು ಆಡುತ್ತಾರೆ ಎಂಬ ಭರವಸೆ ಇಲ್ಲ. ಈ ಅಂತರದಲ್ಲಿ ಬೇರೆ ಯಾವುದೇ ಆಟಗಾರ ಮಧ್ಯಮ ಕ್ರಮಾಂಕದಲ್ಲಿ ಮಿಂಚಿದರೆ ಅಯ್ಯರ್, ಚಾಂಪಿಯನ್ಸ್ ಟ್ರೋಫಿಗೆ ತಂಡದಲ್ಲಿ ಸ್ಥಾನ ಪಡೆಯುವುದು ಕಷ್ಟ. ಲಂಕಾ ಸರಣಿಯಲ್ಲಿ ಮಿಂಚಿದ್ದರೆ, ಅಯ್ಯರ್ ಅವರು ಉಳಿದ ಎರಡು ಮಾದರಿಗಳಲ್ಲಿ ಪುನರಾಗಮನ ಮಾಡಬಹುದಿತ್ತು. ಆದರೆ, ಸರಣಿಯನ್ನು ಹೀನಾಯವಾಗಿ ಸೋತಿದ್ದು, ಇದೀಗ ಏಕದಿನ ತಂಡದಲ್ಲಿ ಸ್ಥಾನ ಕೂಡ ಪ್ರಶ್ನಾರ್ಹವಾಗಿ ಪರಿಣಮಿಸಿದೆ. ಅಯ್ಯರ್ ಅವರ ಕೆರಿಯರ್ ಮುಗಿದೇ ಹೋಯ್ತು, ಗಂಭೀರ್ ಕೂಡ ಅವರನ್ನೂ ಉಳಿಸಲು ಸಾಧ್ಯವಿಲ್ಲ ಎಂಬ ಅಭಿಪ್ರಾಯಗಳು ವ್ಯಕ್ತವಾಗುತ್ತಿವೆ. (ಏಜೆನ್ಸೀಸ್)