ರಾಷ್ಟ್ರ ಪ್ರಶಸ್ತಿ ಸ್ವೀಕಾರಕ್ಕೂ ಮುನ್ನ "ತಗ್ಗೇದೆ ಲೇ" ಎಂದ ಅಲ್ಲುಅರ್ಜುನ್

allu arjun
Published on

ನವದೆಹಲಿ: ಟಾಲಿವುಡ್​ ನಟ ಅಲ್ಲು ಅರ್ಜುನ್​ ಅವರು ‘ಪುಷ್ಪ-ದಿ ರೈಸ್’ ಸಿನಿಮಾದಲ್ಲಿನ ನಟನೆಗೆ ‘ರಾಷ್ಟ್ರ ಪ್ರಶಸ್ತಿ’ ಪಡೆದಿದ್ದು, ರಾಷ್ಟ್ರ ರಾಜಧಾನಿಯಲ್ಲಿ ನಡೆಯಲಿರುವ 69 ನೇ ರಾಷ್ಟ್ರೀಯ ಚಲನಚಿತ್ರ ಪ್ರಶಸ್ತಿ ಸಮಾರಂಭದಲ್ಲಿ ಪಾಲ್ಗೊಳ್ಳಲು ಪತ್ನಿ ಸ್ನೇಹಾ ರೆಡ್ಡಿ ಜತೆ ಆಗಮಿಸಿದರು.

ಪ್ರಶಸ್ತಿ ಪ್ರದಾನ ಸಮಾರಂಭ ಆರಂಭ ಆಗುವುದಕ್ಕೂ ಮುನ್ನ ಅವರು ಮಾಧ್ಯಮದವರ ಜತೆ ಮಾತನಾಡಿ "ತಮ್ಮ ಕಮರ್ಷಿಯಲ್​ ಸಿನಿಮಾದಲ್ಲಿನ ಅಭಿನಯಕ್ಕೆ ರಾಷ್ಟ್ರ ಪ್ರಶಸ್ತಿ ಬಂದಿರುವುದು ದುಪ್ಪಟ್ಟು ಖುಷಿ ನೀಡಿದೆ" ಎಂದು ಹೇಳಿದ್ದಾರೆ. ಇದೇ ವೇಳೆ ಅವರು ‘ತಗ್ಗೇದೇ ಲೇದು(ಕುಗ್ಗುವ ಪ್ರಶ್ನೆಯೇ ಇಲ್ಲ)..’ ಎಂದು ಡೈಲಾಗ್​ ಹೊಡೆದಿದ್ದಾರೆ.

ಅವರು ದೆಹಲಿಗೆ ತೆರಳುವುದಕ್ಕೆಂದು ಹೈದರಾಬಾದ್ ವಿಮಾನ ನಿಲ್ದಾಣಕ್ಕೆ ಬಂದಾಗ ಅಲ್ಲು ಅರ್ಜುನ್ ಪತ್ನಿ ಸ್ನೇಹಾ ರೆಡ್ಡಿ ಅವರೊಂದಿಗೆ ಕ್ಲಿಕ್ಕಿಸಿಕೊಂಡಿದ್ದು ವಿಶೇಷವಾಗಿತ್ತು. ಪುಷ್ಪ ದಿ ರೈಸ್ ಚಿತ್ರಕ್ಕಾಗಿ ಅಲ್ಲು ಅತ್ಯುತ್ತಮ ನಟ ಪ್ರಶಸ್ತಿ ಪಡೆದುಕೊಂಡಿದ್ದು, ಇದೇ ಚಿತ್ರವು ದೇವಿಶ್ರೀ ಪ್ರಸಾದ್ ಅವರ ಅತ್ಯುತ್ತಮ ಸಂಗೀತ ನಿರ್ದೇಶನಕ್ಕಾಗಿ (ಹಾಡುಗಳು) ಪ್ರಶಸ್ತಿಯನ್ನು ತನ್ನದಾಗಿಸಿಕೊಂಡಿದೆ.

ಸುಕುಮಾರ್ ನಿರ್ದೇಶನದ ಪುಷ್ಪ ದಿ ರೈಸ್ 2021 ರ ಡಿ.17ರಂದು ಬಿಡುಗಡೆಯಾಗಿದ್ದು, ಈ ಚಿತ್ರದಲ್ಲಿ ಅಲ್ಲು ಅರ್ಜುನ್ ಅವರು ಪುಷ್ಪರಾಜ್ ಟ್ರಕ್ ಡ್ರೈವರ್ ಆಗಿ ನಟಿಸಿದ್ದಾರೆ, ಅವರು ಜೀವನೋಪಾಯಕ್ಕಾಗಿ ರಕ್ತಚಂದನ ಕಳ್ಳಸಾಗಣೆ ಮಾಡುತ್ತಾರೆ. ರಶ್ಮಿಕಾ ಮಂದಣ್ಣ ನಾಯಕಿಯಾಗಿ ಶ್ರೀವಲ್ಲಿ ಪಾತ್ರದಲ್ಲಿ ನಟಿಸಿದರೆ, ಫಹಾದ್ ಫಾಸಿಲ್ ಖಳನಾಯಕನಾಗಿ ನಟಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net