

ಸಿದ್ಧರಾಮನು ಅಲ್ಲಮಪ್ರಭುವಿನ ಚರಣಗಳನ್ನು ಗಟ್ಟಿಯಾಗಿ ಹಿಡಿದು ಆರ್ತಿಸುತ್ತಿದ್ದಾನೆ. ಅವನ ಮನಸ್ಸು ದುಗುಡಗಳಿಂದ ತುಂಬಿದೆ. ಸಂದೇಹಗಳು ಪ್ರಶ್ನೆಗಳ ರೂಪವನ್ನು ತಾಳಿವೆ. ಅವನ ಪ್ರಶ್ನೆಗಳನ್ನು ಸ್ಥೂಲವಾಗಿ ನೋಡಿದರೆ ಸಾಮಾನ್ಯ ಎಂದೆನಿಸಬಹುದಾದರೂ ಸೂಕ್ಷ್ಮವಾಗಿ ನಿರುಕಿಸಿದರೆ ಗಾಢವೂ ಸಂಕೀರ್ಣವೂ ಆಗಿವೆ. ಸಿದ್ಧರಾಮನು ಮನಸ್ಸಿನ ಬಗೆಯನ್ನು ಕೇಳುತ್ತಿದ್ದಾನೆ. ಇಂದ್ರಿಯಗಳ ಸ್ವರೂಪ ಅವುಗಳು ಸಾಧಕರ ಮೇಲೆ ಉಂಟುಮಾಡುವ ಬಗೆಗಳನ್ನು ಪ್ರಶ್ನಿಸುತ್ತಿದ್ದಾನೆ. ಸಿದ್ಧರಾಮನ ಪ್ರಶ್ನೆಗಳು ನಾಲ್ಕು ಬಗೆಯಾಗಿವೆ. ಅವನು ಕೇಳಿದ ಮೊದಲನೆಯ ಪ್ರಶ್ನೆ: ಮನಸ್ಸು ಹೆಣ್ಣು-ಹೊನ್ನುಗಳ ಮೇಲೆ ಇರದೆ, ಸಂನ್ಯಾಸಿಯಾಗಿ ಜನಗಳಿಗೆ ಬೇಡಿದುದನ್ನು ಕೊಟ್ಟು ಪುಣ್ಯವನ್ನು ಸಂಪಾದಿಸಿದರೆ ಮುಕ್ತಿ ಸಿಗಬಹುದಲ್ಲವೆ?. ಇದಕ್ಕೆ ಅಲ್ಲಮನು ಸೂಕ್ಷ್ಮವಾಗಿ ಉತ್ತರಿಸುತ್ತಾನೆ. ಖ್ಯಾತಿಗಾಗಿ, ಲಾಭಕ್ಕಾಗಿ, ಎಲ್ಲರಿಂದ ಗೌರವಿಸಿಕೊಳ್ಳಬೇಕೆಂಬ ಹಂಬಲದಿಂದಾಗಿ, ದಾನ- ಧರ್ಮ ಮಾಡಿದರೆ ತಾನು ಬಿತ್ತಿದ ಬೆಳೆ ್ಢ
ಯನ್ನು ತಾನೇ ಊಟ ಮಾಡಿದಂತಾಗುತ್ತದೆ. ಸರ್ವಭೋಗಗಳನ್ನು ತನಗಾಗಿಯೇ ಅನುಭವಿಸುತ್ತಿದ್ದರೆ ಮುಕ್ತಿ ದೊರಕುತ್ತದೆಯೆ? ಎಂದು ಅಲ್ಲಮನು ಮಾರ್ವಿುಕವಾಗಿ ಪ್ರಶ್ನಿಸುವ ಮೂಲಕ ಉತ್ತರ ನೀಡುತ್ತಾನೆ. ಹೀಗಾಗಿ, ಮನಸ್ಸೆಂಬುದೇ ಕಾರಣಪುರುಷ. ಎಲ್ಲಾ ಬಗೆಯ ಕರ್ಮದ ಕ್ರಿಯೆಯಲ್ಲಿ ಮನಸ್ಸು ಮುಳುಗಿ ಹೋಗಿದೆ. ಅರಿಷಡ್ವರ್ಗಗಳು ದೇಹವನ್ನು ಹೀರಿ ಹಿಪ್ಪೆ ಮಾಡá-ತ್ತಿವೆ ಎಂದು ಅಲ್ಲಮನು ಮೊದಲ ಪ್ರಶ್ನೆಗೆ ಉತ್ತರವನ್ನು ಕೊಡುತ್ತಾನೆ.
ಸಿದ್ಧರಾಮನು ಅಲ್ಲಮನ ಉತ್ತರದಿಂದ ಸಂತೃಪ್ತನಾಗಿ ಮುಂದಿನ ಪ್ರಶ್ನೆಗಳನ್ನು ಅರಿಕೆ ಮಾಡಿಕೊಳ್ಳುತ್ತಾನೆ. ಸಾವನ್ನು ತಪ್ಪಿಸಿಕೊಳ್ಳುವ ಬಗೆ ಯಾವುದು? ಮುಕ್ತಿಯ ದಾರಿ ಯಾವುದು? ಜನನ-ಮರಣವನ್ನು ಇಲ್ಲವಾಗಿಸಿಕೊಳ್ಳುವ ರೀತಿ ಯಾವುದು?. ಈ ಮೂರು ಪ್ರಶ್ನೆಗಳಿಗೆ ಅಲ್ಲಮನು ನಗುನಗುತ್ತಲೇ ಲೀಲಾವಿನೋದದಿಂದ ಉತ್ತರಿಸುತ್ತಾನೆ. ಈ ಪ್ರಶ್ನೆಗಳು ಅನಾದಿಕಾಲದಿಂದ ಸಾಧಕರು, ಸಾಧುಗಳು ಕೇಳಿಕೊಂಡು ಬಂದಿರುವುದೇನೋ ಸರಿ! ಆಯಾ
ಕಾಲಪ್ರಸಂಗಗಳಲ್ಲಿ ಶಾಸ್ತ್ರಗಳ ಮೂಲಕವೋ ಗುರುವಿನ ಉಪದೇಶದಿಂದಲೋ ಸ್ವಾನುಭವದ ಮೂಲಕವೋ ಸಾಧಕರು ಉತ್ತರ ಕಂಡುಕೊಂಡಿರು ವುದುಂಟು! ಸಿದ್ಧರಾಮನ ಮೂರೂ ಪ್ರಶ್ನೆಗಳಿಗೆ ಅಲ್ಲಮನು ಇಡಿಯಾಗಿ ಉತ್ತರಗಳನ್ನು ನೀಡುತ್ತಾನೆ. ಹೊಲವನ್ನು ಉಳುಮೆ ಮಾಡಿ ಹಸನು ಮಾಡುತ್ತೇವಷ್ಟೆ. ಅಂಥ ಹೊಲಕ್ಕೆ ಕಸವನ್ನು ಬಿತ್ತುವುದಿಲ್ಲ. ಅದರಂತೆ ಅಂತರ್ಜ್ಞಾನದ ಹಾದಿಯಲ್ಲಿ ನಡೆಯುತ್ತಿರುವವನು ಬಹಿರಂಗದ ಬಯಕೆಯಿಂದ ದೂರ ಇರುತ್ತಾನೆ. ದೇಹಭಾವದಲ್ಲಿ ಇರುವವನು ಇಂದ್ರಿಯಗಳ ಮೋಹಕ್ಕೆ ಒಳಗಾಗುತ್ತಾನೆ. ಅಂಥವನು ದೇಹಿ ಭಾವಕ್ಕೆ ಬಂದು ಬಿಡಬೇಕು. ಇಂಥವನ ಅಂತರಂಗವು ಎಲ್ಲಾ ಬಗೆಯ ಸಂಗಗಳಿಂದ ದೂರ ಇರಲು ಸಾಧ್ಯವಾಗುತ್ತದೆ. ಅಂಥವನು ನಿಮೋಹಿ; ಅವನೇ ನಿತ್ಯಸ್ವಭಾವದವನು. ಸಾಧಕರಿಗೆ ಒಳಗು-ಹೊರಗು ಎಂಬ ಮಾರ್ಗಗಳುಂಟು. ಅವುಗಳನ್ನು ನೀತಿಮಾರ್ಗವೆಂದೂ ಪ್ರೀತಿಮಾರ್ಗವೆಂದೂ ಬಲ್ಲವರು ಕರೆಯುತ್ತಾರೆ. ಇವೆರಡು ಮಾರ್ಗಗಳಲ್ಲಿ ಹಲವು ಬಗೆಯ ಕವಲು ದಾರಿಗಳುಂಟು. ಹೀಗಾಗಿ, ನಾವು ಮಧ್ಯಮ ಮಾರ್ಗವನ್ನು ಅನುಸರಿಸಬೇಕು. ಅಂಥವನು ಸುಖದ ಸ್ಥಿತಿಯನ್ನು ಕಾಣುತ್ತಾನೆ. ಆದುದರಿಂದ, ನಾವು ಮೊದಲು ಇಂದ್ರಿಯಗಳನ್ನು ಕೈವಶಮಾಡಿಕೊಳ್ಳಬೇಕು, ಮರಣವನ್ನು ಗೆದ್ದು ಶರಣ ಸ್ಥಿತಿಯಲ್ಲಿ ನಿಂತುಕೊಂಡು ಪರಮಾನಂದ ಸುಖದಿಂದ ತೃಪ್ತನಾಗಬೇಕು. ಅಂಥವನು ಮುಕ್ತಿಯ ದಾರಿಯನ್ನು ತಿಳಿಯುತ್ತಾನೆ.
ಅಲ್ಲಮನು ಒಂದು ಕಡೆ ಸಿದ್ಧರಾಮನ ಪ್ರಶ್ನೆಗಳಿಗೆ ನೇರವಾಗಿ ಉತ್ತರ ಕೊಡುತ್ತಿದ್ದಾನೆ. ಇದು ಪರೋಕ್ಷವಾಗಿ ಸಾಧಕರು ಕಂಡುಕೊಳ್ಳಬೇಕಾದ ನೆಲೆಯೂ ಆಗಿದೆ. ಸಾಧಕರು ಹಂತಹಂತವಾಗಿ ಶಿವಪಥವನ್ನು ಏರಬೇಕು. ಜೀವಾತ್ಮದ ಅರಿವು ಇಲ್ಲದೆ, ಪರಮಾತ್ಮದ ಅರಿವು ಸಾಧಕರಿಗೆ ಎಟುಕುವುದಿಲ್ಲ. ಸಾಧಕರು ಒಂದೊಂದೇ ಸಾಧನೆಯ ಮೆಟ್ಟಿಲನ್ನು ಏರಬೇಕಾಗುತ್ತದೆ. ಸಾಧಕನು ಮನಸ್ಸನ್ನು ಲಿಂಗದಲ್ಲಿ ನೆಲೆಗೊಳಿಸಿಕೊಳ್ಳಬೇಕು. ಆ ಪ್ರಾಣಲಿಂಗದ ದಾರಿಯನ್ನು ತಿಳಿದು ಜ್ಯೋತಿರ್ಲಿಂಗವನ್ನು ನೆಲೆಗೊಳಿಸಿಕೊಳ್ಳುವ ಮರ್ಮವನ್ನು ಕಲಿತರೆ ಅವನೇ ಶಿವಸುಖಿ! ಹೀಗೆ ಅಲ್ಲಮಪ್ರಭುದೇವರು ಲಿಂಗಚೈತನ್ಯಗಳ ಸಂಬಂಧಗಳನ್ನು ಪ್ರೀತಿಯಿಂದ ತಿಳಿಸಿ, ಜೀವಾತ್ಮ ಪರಮಾತ್ಮರನ್ನು ಸಮರಸಗೊಳಿಸುವ ಶಕ್ತಿ-ಭಕ್ತಿಗಳ ಜೋಡಣೆಯನ್ನು ಸಿದ್ಧರಾಮನಿಗೆ ಮನವರಿಕೆ ಮಾಡಿಕೊಟ್ಟನು. ಸಿದ್ಧರಾಮನ ಬುದ್ಧಿಯು ತಿಳಿಯಾಯಿತು. ಜ್ಞಾನಿಯ ಛಾಯೆ ಅವನಲ್ಲಿ ಹೊಳೆಯಿತು. ಒಂಬತ್ತು ಬಗೆಯ ಚಕ್ರಕಮಲಗಳ ಸಮೂಹವನ್ನು ಸಿದ್ಧರಾಮನು ತಿಳಿದು ಸಂತೃಪ್ತನಾದನು!