ಎಚ್ಚರಿಕೆಯ ಗಂಟೆ: ಎರಡು ಘಟನೆ, ಹಲವು ಸಂದೇಶ

Old Man
Published on

ಮಕ್ಕಳು ತನ್ನನ್ನು ಸರಿಯಾಗಿ ನೋಡಿಕೊಳ್ಳುತ್ತಿಲ್ಲ ಎಂಬ ಕಾರಣಕ್ಕಾಗಿ 85ರ ವೃದ್ಧರೊಬ್ಬರು ತಮ್ಮ ಒಂದೂವರೆ ಕೋಟಿ ರೂಪಾಯಿ ಆಸ್ತಿಯನ್ನು ಉತ್ತರಪ್ರದೇಶ ಸರ್ಕಾರಕ್ಕೆ ನೀಡುವ ಉಯಿಲು ಬರೆದಿದ್ದಾರೆ. ಇನ್ನೊಂದೆಡೆ, 9ನೇ ತರಗತಿಯ ವಿದ್ಯಾರ್ಥಿನಿಯೊಬ್ಬಳು ಯೂಟ್ಯೂಬ್ ನೋಡಿ ಸ್ವತಃ ಹೆರಿಗೆ ಮಾಡಿಕೊಂಡಿರುವ ಘಟನೆಯು ಮಹಾರಾಷ್ಟ್ರದ ನಾಗಪುರದಲ್ಲಿ ಜರುಗಿದೆ. ಸಮಾಜದಲ್ಲಿ ಬದಲಾಗುತ್ತಿರುವ ಮೌಲ್ಯಗಳಿಂದ ಸೃಷ್ಟಿಯಾಗುತ್ತಿರುವ ಸಮಸ್ಯೆಗಳು ಹಾಗೂ ಮೊಬೈಲ್​ಫೋನ್- ಸಾಮಾಜಿಕ ಮಾಧ್ಯಮಗಳ ಅತಿಯಾದ ಬಳಕೆಯ ದುಷ್ಪರಿಣಾಮಗಳ ಮೇಲೆ ಬೆಳಕು ಚೆಲ್ಲುವಂತಹ ಈ ಘಟನೆಗಳು ಕಳವಳಕಾರಿ ಸಂಗತಿಗಳಾಗಿವೆ.

ಉತ್ತರಪ್ರದೇಶದ ಮುಜಫ್ಪರನಗರದ 85 ವರ್ಷದ ನಾಥು ಸಿಂಗ್ ಆಸ್ತಿಯನ್ನು ಉತ್ತರಪ್ರದೇಶ ಸರ್ಕಾರಕ್ಕೆ ನೀಡುವ ನಿರ್ಧಾರ ಕೈಗೊಂಡಿದ್ದಾರೆ. ಇವರಿಗೆ ಒಬ್ಬ ಪುತ್ರ ಹಾಗೂ ಮೂವರು ಪುತ್ರಿಯರಿದ್ದಾರೆ. ಪುತ್ರ ಹಾಗೂ ಸೊಸೆಯ ಜತೆಗೆ ಇರಬೇಕಾಗಿತ್ತಾದರೂ ಅವರು ಸರಿಯಾಗಿ ನೋಡಿಕೊಳ್ಳದ ಕಾರಣ ತಾವು ವೃದ್ಧಾಶ್ರಮದಲ್ಲಿ ವಾಸಿಸುತ್ತಿದ್ದುದಾಗಿ ಹೇಳಿದ್ದಾರೆ. ತಮ್ಮ ನಿಧಾನಾನಂತರ ಆಸ್ಪತ್ರೆ ಆಥವಾ ಶಾಲೆ ನಿರ್ವಿುಸಲು ಜಮೀನು ಬಳಸಿಕೊಳ್ಳಬೇಕು; ಪಾರ್ಥಿವ ಶರೀರವನ್ನು ಸಂಶೋಧನೆ ಹಾಗೂ ಅಧ್ಯಯನ ಕಾರ್ಯಗಳಿಗೆ ಉಪಯೋಗಿಸಬೇಕು ಎಂದು ಸೂಚಿಸಿರುವುದು ಸಂಕಷ್ಟದ ಪರಿಸ್ಥಿತಿಯ ನಡುವೆಯೂ ಅವರ ಸಮಾಜಮುಖಿ ಧೋರಣೆಯನ್ನು ಬಿಂಬಿಸುತ್ತದೆ. ಇದು ನಾಥು ಸಿಂಗ್ ಅವರೊಬ್ಬರ ಕಥೆ ಮಾತ್ರವಲ್ಲ, ಭಾರತದಲ್ಲಿನ ಕೋಟ್ಯಂತರ ವಯೋವೃದ್ಧರ ವ್ಯಥೆಯ ಪ್ರತೀಕವಾಗಿದೆ.

ಭಾರತದಲ್ಲಿ ಈಗ ಅವಿಭಕ್ತ ಕುಟುಂಬಗಳು ಕಣ್ಮರೆಯಾಗಿ ಚಿಕ್ಕಚಿಕ್ಕ ಕುಟುಂಬಗಳು ಎಲ್ಲೆಡೆ ಸೃಷ್ಟಿಯಾಗಿವೆ. ತಂದೆ- ತಾಯಿಗಳು ಮಕ್ಕಳನ್ನು ಜೀವಕ್ಕಿಂತ ಹೆಚ್ಚಾಗಿ ನೋಡಿಕೊಂಡು ಬೆಳೆಸುತ್ತಾರೆ. ಮಕ್ಕಳು ತಮ್ಮ ಸಂಸಾರ ಜಂಜಾಟದಲ್ಲಿ ವಯೋವೃದ್ಧರಾದ ತಂದೆ-ತಾಯಿಗಳತ್ತ ಸೂಕ್ತ ಗಮನ ನೀಡುವುದಿಲ್ಲ. ಹೊಂದಾಣಿಕೆ ಅಥವಾ ವಾಸಸ್ಥಳದ ಕೊರತೆಯಿಂದ ಬೇರೆ ಮನೆ ಮಾಡುವುದು, ಉದ್ಯೋಗ ಅರಸಿ ಬೇರೆ ಊರಿಗೆ ವಲಸೆ ಹೋಗುವುದು ಮುಂತಾದ ಕಾರಣಗಳಿಂದಾಗಿ ಮಕ್ಕಳು ಪ್ರತ್ಯೇಕವಾಗಿ ವಾಸಿಸತೊಡಗುತ್ತಾರೆ. ಇದರಿಂದಾಗಿ ವೃದ್ಧ ತಂದೆ-ತಾಯಿಗಳು ಒಂಟಿಯಾಗಿ ಬದುಕಬೇಕಾಗುತ್ತದೆ. ಈ ಪೈಕಿ ಸಾಕಷ್ಟು ಮಂದಿ ವೃದ್ಧಾಶ್ರಮವನ್ನೂ ಸೇರುತ್ತಾರೆ. ಭಾರತದಲ್ಲಿ ವೃದ್ಧಾಶ್ರಮಗಳ ಸಂಖ್ಯೆ ಏರಿಕೆಯಾಗುತ್ತಿರುವುದು ಇಂತಹ ಪರಿಸ್ಥಿತಿಯನ್ನು ಪುಷ್ಟೀಕರಿಸುತ್ತದೆ.

ತಂದೆ-ತಾಯಿಗಳನ್ನು ಮಕ್ಕಳು ಸದಾ ಪೂಜ್ಯ ಭಾವನೆಯಿಂದ ನೋಡುವುದು ಭಾರತೀಯ ಸಂಸ್ಕೃತಿಯ ತಿರುಳೇ ಆಗಿದೆ. ತಾವೂ ಮುಂದೊಂದು ದಿನ ವೃದ್ಧರಾಗಲಿದ್ದು, ಆಗ ತಮ್ಮ ಮಕ್ಕಳು ತಮ್ಮೊಂದಿಗೆ ಇದೇ ತೆರನಾಗಿ ವರ್ತಿಸಬಾರದು ಎಂಬುದನ್ನು ಮಕ್ಕಳು ಮನವರಿಕೆ ಮಾಡಿಕೊಳ್ಳಬೇಕು.‘ಹೊಸ ಬೇರು ಹಳೇ ಚಿಗುರು ಕೂಡಿರಲು ಮರ ಸೊಬಗು’ ಎಂಬಂತೆ ಕುಟುಂಬಗಳು ಬಾಳಿದರೆ ಎಷ್ಟೋ ಸಮಸ್ಯೆಗಳು ಇಲ್ಲವಾಗುತ್ತವೆ. ಇನ್ನು, 9ನೇ ತರಗತಿಯ 15 ವರ್ಷದ ವಿದ್ಯಾರ್ಥಿನಿ ಯೂಟ್ಯೂಬ್ ನೋಡಿಕೊಂಡು ಸ್ವತಃ ಹೆರಿಗೆ ಮಾಡಿಕೊಂಡಿದ್ದಲ್ಲದೆ ಶಿಶುವನ್ನು ಸಾಯಿಸಿರುವುದು ಆಘಾತಕರ ಸಂಗತಿಯಾಗಿದೆ. ಇನ್​ಸ್ಟಾಂನಲ್ಲಿ ಪರಿಚಯವಾದ ವ್ಯಕ್ತಿಯೇ ಬಾಲಕಿ ಮೇಲೆ ಅತ್ಯಾಚಾರ ಎಸಗಿ ಗರ್ಭಿಣಿಯಾಗಲು ಕಾರಣವಾಗಿದ್ದಾನೆ ಎನ್ನಲಾಗಿದೆ. ವಿವೇಚನಾರಹಿತವಾಗಿ ಮೊಬೈಲ್​ಫೋನ್ ಹಾಗೂ ಸಾಮಾಜಿಕ ಮಾಧ್ಯಮದಲ್ಲಿ ಮುಳುಗಿ ಹೋಗುತ್ತಿರುವ ಮಕ್ಕಳು ಎಂತಹ ಸಂಕಷ್ಟದಲ್ಲಿ ಸಿಲುಕಬಹುದು ಎಂಬುದಕ್ಕೆ ಇದೊಂದು ಉದಾಹರಣೆ. ಈ ಘಟನೆ ಮಕ್ಕಳು ಹಾಗೂ ಪಾಲಕರಿಗೆ ಮಾತ್ರವಲ್ಲ ಸಮಾಜಕ್ಕೂ ಎಚ್ಚರಿಕೆಯ ಗಂಟೆಯಾಗಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net