

ಬೆಂಗಳೂರು: ರಾಷ್ಟ್ರ ರಾಜಧಾನಿ ದೆಹಲಿಯಲ್ಲಿ ಗಾಳಿಯ ಗುಣಮಟ್ಟ ತೀವ್ರ ಹದಗೆಟ್ಟು ಆತಂಕ ಸೃಷ್ಟಿಸಿರುವ ನಡುವೆ ರಾಜ್ಯದ ಹಲವು ಜಿಲ್ಲೆಗಳಲ್ಲೂ ಮೂರು ದಿನ ಕಾಲ ವಾಯು ಗುಣಮಟ್ಟ ಸೂಚ್ಯಂಕ( ಎಕ್ಯೂಐ) ಹೆಚ್ಚಳವಾಗಿ ಕಳಪೆ ಮಟ್ಟಕ್ಕೆ ತಲುಪಿದೆ. ದೀಪಾವಳಿ ನಿಮಿತ್ತ ಸಾರ್ವಜನಿಕರು ಪಟಾಕಿ ಸುಟ್ಟ ಪರಿಣಾಮ ನ.12ರಿಂದ ನ.14ರವರೆಗೆ ರಾಜ್ಯದ ಇತರ ಜಿಲ್ಲೆಗಳಗಿಂತ ಬೆಂಗಳೂರಿನ ಜಯನಗರದಲ್ಲಿ ಅತಿ ಹೆಚ್ಚು ಎಕ್ಯೂಐ ದಾಖಲಾಗಿದೆ. ಮಂಗಳೂರು, ಬೀದರ್, ತುಮಕೂರು ಕ್ರಮವಾಗಿ ನಂತರ ಸ್ಥಾನಗಳಿವೆ. ಮಡಿಕೇರಿಯಲ್ಲಿ ಎಕ್ಯೂಐ ವ್ಯಾಲ್ಯೂ 49 ದಾಖಲಾಗಿದ್ದು, ಗಾಳಿ ಗುಣಮಟ್ಟ ಉತ್ತಮವಾಗಿತ್ತು.
ಕಳೆದ ವರ್ಷದ ದೀಪಾವಳಿ ಅವಧಿಗೆ ಉಂಟಾಗಿದ್ದ ಅಂಕಿ ಅಂಶಗಳಿಗೆ ಹೋಲಿಸಿದರೆ ಈ ಬಾರಿ ಇದೇ ಅವಧಿಯಲ್ಲಿ ಎಕ್ಯೂಐ ಮಟ್ಟ ಕಡಿಮೆ ಆಗಿರುವುದು ಗಮನಾರ್ಹ. 2022ರಲ್ಲಿ ಅತಿ ಹೆಚ್ಚು 313 ಎಕ್ಯೂಐ ದಾಖಲಾಗಿತ್ತು. ಈ ಬಾರಿ 268ಎಕ್ಯೂಐ ದಾಖಲಾಗಿದೆ.
ಬೆಂಗಳೂರು ನಗರವೇ ಹೆಚ್ಚು ಮಲಿನ: ಬೆಂಗಳೂರು ನಗರದ ಹಲವು ಪ್ರದೇಶಗಳಲ್ಲಿ ಗಾಳಿಯ ಮಟ್ಟ ಕುಸಿತವಾಗಿದ್ದು, ಕಳಪೆ ಮಟ್ಟಕ್ಕೆ ತಲುಪಿತು. ನ.12ರಿಂದ ನ.14ರವರೆಗೆ ನಗರದ ಹಲವು ಪ್ರದೇಶಗಳಲ್ಲಿ ಎಕ್ಯೂಐ 150ರಿಂದ 268ವರೆಗೆ ದಾಖಲಾಗಿದೆ.
ಶಬ್ದ ಮಾಲಿನ್ಯ ಹೆಚ್ಚು: ಈ ಬಾರಿ ದೀಪಾವಳಿಯಲ್ಲಿ ಶಬ್ದ ಮಾಲಿನ್ಯ ಹೆಚ್ಚಿತ್ತು. ಕಳೆದ ವರ್ಷದ ದೀಪಾವಳಿಗೆ ಹೋಲಿಸಿದರೆ ಇದೇ ಅವಧಿಯಲ್ಲಿ ಶಬ್ದ ಮಾಲಿನ್ಯವು ಜನರಿಗೆ ಹೆಚ್ಚು ಕಿರಿಕಿರಿ ಉಂಟು ಮಾಡಿತ್ತು. ರಾಜ್ಯದಲ್ಲೇ ಮಂಗಳೂರಿನಲ್ಲೇ ಪಟಾಕಿಗಳಿಂದ ಅತಿ ಹೆಚ್ಚು ಶಬ್ದ ಮಾಲಿನ್ಯ ಉಂಟಾಗಿದೆ. ಬೆಂಗಳೂರು,ರಾಮನಗರ, ನೆಲಮಂಗಲ, ಕೋಲಾರ, ಚಿಕ್ಕಬಳ್ಳಾಪುರ, ಧಾರವಾಡ, ಬಾಗಲಕೋಟೆ, ಬೆಳಗಾವಿ, ಚಿಕ್ಕಮಗಳೂರು, ಮೈಸೂರು, ದಾವಣಗೆರೆ, ಬೀದರ್, ಕಲಬುರಗಿಯಲ್ಲಿ ಶಬ್ದ ತೀವ್ರತೆ ಇತ್ತು.
ಎಕ್ಯೂಐ ವ್ಯಾಲ್ಯೂ ಲೆಕ್ಕಾಚಾರ ಹೇಗೆ?: ಎಕ್ಯೂಐ ವ್ಯಾಲ್ಯೂ 50ರ ಒಳಗಡೆ ಇದ್ದರೆ ಗಾಳಿ ಗುಣಮಟ್ಟ ಉತ್ತಮ, 51ರಿಂದ 100ರೊಳಗೆ ಇದ್ದರೆ ತೃಪ್ತಿಕರ, 101 ರಿಂದ 200ರವರೆಗೆ ಇದ್ದರೆ ಸಾಧಾರಣ, 201 ರಿಂದ 300 ಇದ್ದರೆ ಕಳಪೆ ಹಾಗೂ 401ಗಿಂತ ಮೇಲ್ಪಟ್ಟ ಸೂಚ್ಯಂಕವಿದ್ದರೆ ಅತಿ ಕಳಪೆ ಎಂದು ಗುರುತಿಸಲಾಗುತ್ತದೆ.
ತರೀಕೆರೆ: ತಾಲೂಕಿನ ಸುಣ್ಣದಹಳ್ಳಿಯಲ್ಲಿ ಪಟಾಕಿ ಸ್ಪೋಟಕ್ಕೆ ಯುವಕ ಬಲಿಯಾಗಿದ್ದು, ಮೂವರಿಗೆ ಗಾಯಗಳಾಗಿವೆ. ಸುಣ್ಣದಹಳ್ಳಿ ಪ್ರದೀಪ್(38) ಮೃತ. ಜತೆಗಿದ್ದ ಕುಶಾಲ್(12), ಷಣ್ಮುಖ(12) ಹಾಗೂ ದರ್ಶನ್(19) ಎಂಬುವರಿಗೆ ಗಾಯಗಳಾಗಿವೆ. ಮಂಗಳವಾರ ರಾತ್ರಿ ಪಟಾಕಿ ಸಿಡಿಸುತ್ತಿದ್ದಾಗ ಮನೆಯ ಜಗುಲಿಯಲ್ಲಿಟ್ಟಿದ್ದ ಪಟಾಕಿ ಬಾಕ್ಸ್ಗೆ ಆಕಸ್ಮಿಕವಾಗಿ ಬೆಂಕಿ ಕಿಡಿ ತಗುಲಿ ಸ್ಪೋಟಿಸಿದೆ. ಸಿಡಿತದ ರಭಸಕ್ಕೆ ಪ್ರದೀಪ್ ಬಿದ್ದಿದ್ದು, ಮರ್ವಂಗಕ್ಕೆ ತೀವ್ರ ಪೆಟ್ಟಾಗಿದೆ. ಪಟ್ಟಣದ ಸರ್ಕಾರಿ ಆಸ್ಪತ್ರೆಯಲ್ಲಿ ಪ್ರಾಥಮಿಕ ಚಿಕಿತ್ಸೆ ಕೊಡಿಸಿ ಶಿವಮೊಗ್ಗಕ್ಕೆ ಕರೆದೊಯ್ಯುವಾಗ ಮೃತಪಟ್ಟಿದ್ದಾರೆ. ತೀವ್ರವಾಗಿ ಗಾಯಗೊಂಡಿದ್ದ ಮೂವರು ಆಸ್ಪತ್ರೆಯಲ್ಲಿ ಚೇತರಿಸಿಕೊಳ್ಳುತ್ತಿದ್ದಾರೆ. ಸ್ಪೋಟದ ರಭಸಕ್ಕೆ ಮನೆ ಛಾವಣಿ, ಗೋಡೆ ಹಾನಿಯಾಗಿದೆ.