ಏರ್​ ಇಂಡಿಯಾ ಸಿಬ್ಬಂದಿಗೆ 6 ತಿಂಗಳಿನಿಂದ 2 ವರ್ಷದವರೆಗೂ ರಜೆ ಸೌಲಭ್ಯ; ಸಂಬಳದ ಕತೆಯೇನು...?

Air India
Published on

ನವದೆಹಲಿ: ಸರ್ಕಾರಿ ವಿಮಾನ ಯಾನ ಸೇವಾ ಸಂಸ್ಥೆ ಏರ್​ ಇಂಡಿಯಾ ಜುಲೈ 20ರ ಬಳಿಕ ಎಲ್ಲ ಸಿಬ್ಬಂದಿಗೂ ಮನೆಯಿಂದ ಕೆಲಸ ಮಾಡುವ ಅವಕಾಶವನ್ನು (ವರ್ಕ್​ ಫ್ರಾಮ್​ ಹೋಮ್​ ) ರದ್ದು ಮಾಡಲಿದೆ.

ಆದರೆ, ಇದರಲ್ಲಿ ಕೆಲ ವಿನಾಯ್ತಿಗಳನ್ನು ನೀಡಿದೆ. ಕಂಟೇನ್​ಮೆಂಟ್​ ಝೋನ್​ಗಳಲ್ಲಿ ಕೆಲಸ ಮಾಡುತ್ತಿರುವವರು, ದೀರ್ಘಕಾಲದ ಕಾಯಿಲೆಯಿಂದ ಬಳಲುತ್ತಿರುವವರು, ಗರ್ಭಿಣಿಯರಿಗೆ ಈ ಸೌಲಭ್ಯ ನೀಡಲು ಪರಿಗಣಿಸಬಹುದು ಎಂದು ತಿಳಿಸಿದೆ.

ಈ ನಡುವೆ, ಇನ್ನೊಂದು ಶಾಕ್​ ನೀಡಲು ಏರ್​ ಇಂಡಿಯಾ ಸಜ್ಜಾಗಿದೆ. ಸಿಬ್ಬಂದಿಗೆ ಆರು ತಿಂಗಳಿನಿಂದ ಎರಡು ವರ್ಷದ ಅವಧಿಗೆ ರಜೆ ನೀಡಲು ನಿರ್ಧರಿಸಿದೆ. ಈ ರಜೆ ಸೌಲಭ್ಯವನ್ನು ಐದು ವರ್ಷಗಳವರೆಗೂ ವಿಸ್ತರಿಸಲು ಅವಕಾಶವಿದೆ ಎಂದು ಮಾಹಿತಿ ನೀಡಿದೆ.

ಇದು ಕೇವಲ ರಜೆ ಸೌಲಭ್ಯವಲ್ಲ, ಕಡ್ಡಾಯ ವೇತನರಹಿತ ರಜೆ ಆಗಿದೆ. ಇದಕ್ಕಾಗಿ ಉದ್ಯೋಗಿಯ ಅಗತ್ಯತೆ, ಕಾರ್ಯಕ್ಷಮತೆ, ವೈದ್ಯಕೀಯ ಕಾರಣ ಮೊದಲಾದ ಅಂಶಗಳನ್ನು ಪರಿಗಣಿಸಿ ಸಿಬ್ಬಂದಿಯ ಪಟ್ಟಿಯನ್ನು ಸಿದ್ಧಪಡಿಸಲು ಸೂಚಿಸಲಾಗಿದೆ. ಜತೆಗೆ, ಇನ್ನೊಂದು ಷರತ್ತು ಇದರಲ್ಲಿದೆ. ಈ ರಜೆ ಸೌಲಭ್ಯ ಪಡೆದವರು ಇತರ ಯಾವುದೇ ಸಾರ್ವಜನಿಕ ವಲಯದ ಉದ್ದಿಮೆಗಳಲ್ಲಿ ಉದ್ಯೋಗ ಹೊಂದುವಂತಿಲ್ಲ.

ಕೋವಿಡ್​ ಸಂಕಷ್ಟದಿಂದಾಗಿ ಹಲವು ಖಾಸಗಿ ವಿಮಾನ ಯಾನ ಸಂಸ್ಥೆಗಳು ಈಗಾಗಲೇ ಸಿಬ್ಬಂದಿಗೆ ವೇತನರಹಿತ ರಜೆ ಘೋಷಿಸಿವೆ. ಇದೀಗ ಏರ್​ ಇಂಡಿಯಾ ಸರದಿಯಾಗಿದೆ. ಸದ್ಯ ಪ್ರಾದೇಶಿಕ ವಿಮಾನಯಾನಕ್ಕೆ ಮಾತ್ರ ಅನುಮತಿ ನೀಡಲಾಗಿದ್ದು, ಶೇ.50 ವಿಮಾನಗಳು ಮಾತ್ರ ಹಾರಾಟ ನಡೆಸುತ್ತಿವೆ. ಅಂತಾರಾಷ್ಟ್ರೀಯ ಮಾರ್ಗದಲ್ಲಿನ್ನೂ ಸಂಚಾರ ಆರಂಭವಾಗಿಲ್ಲ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net