ಅನಾಥವಾಗಿರುವ ಕಾರಿನ ಹತ್ತಿರ ಹೋಗೋ ಧೈರ್ಯ ಯಾರಿಗೂ ಇಲ್ಲ, ಕಾರಣ ನಂಬರ್​ ಪ್ಲೇಟ್​...!

covid
Published on

ನವದೆಹಲಿ: ವಾಹನಗಳು ಅನಾಥವಾಗಿದ್ದರೆ ಕೆಲ ದಿನಗಳಲ್ಲಿಯೇ ಅದು ಇದ್ದಲ್ಲಿಂದ ಮಾಯವಾಗಿರುತ್ತದೆ ಅಥವಾ ಅದರ ಒಂದೊಂದೇ ಬಿಡಿಭಾಗಗಳನ್ನು ಕದ್ದು ಸಾಗಿಸಲಾಗಿರುತ್ತದೆ. ಪೊಲೀಸ್​ ಠಾಣೆಯ ಆವರಣದಲ್ಲಿರುವ ವಶಪಡಿಸಿಕೊಂಡ ವಾಹನಗಳೂ ಇದಕ್ಕೆ ಹೊರತಲ್ಲ..!

ಆದರೆ, ಆಸ್ಟ್ರೇಲಿಯಾದ ಅಡಿಲೇಡ್​ ವಿಮಾನ ನಿಲ್ದಾಣದಲ್ಲಿರುವ ಐಷಾರಾಮಿ ಕಾರು ಆರು ತಿಂಗಳಿಂದ ಅನಾಥವಾಗಿದೆ. ಇದನ್ನು ಯಾರಾದರೂ ಕದಿಯುವುದಿರಲಿ...... ಹತ್ತಿರ ಹೋಗಲು ಭಯ ಪಡುತ್ತಾರೆ ಕಾರಣ ಇದರ ನಂಬರ್​ ಪ್ಲೇಟ್​.

ಆಸ್ಟ್ರೇಲಿಯಾದಲ್ಲಿ ಮಾಲೀಕರು ಇಚ್ಛಿಸಿದ ಸಂಖ್ಯೆ ಅಥವಾ ಹೆಸರನ್ನು ವಾಹನಗಳಿಗೆ ಹೊಂದಲು ಅವಕಾಶ ಕಲ್ಪಿಸಲಾಗುತ್ತದೆ. ಅಂತೆಯೇ ಐಷಾರಾಮಿ ಬಿಎಂಡಬ್ಲ್ಯು ಕಾರಿಗೆ ಅದರ ಮಾಲೀಕ ಕೋವಿಡ್​ 19 ಎಂಬ ನೋಂದಣಿ ಫಲಕ ಹೊಂದಿದ್ದಾನೆ.

ವಿಮಾನ ನಿಲ್ದಾಣದ ಸಿಬ್ಬಂದಿಗೆ ಮೀಸಲಾದ ಕಾರು ಪಾರ್ಕಿಂಗ್​ ಜಾಗದಲ್ಲಿ ಇದನ್ನು ನಿಲ್ಲಿಸಲಾಗಿದೆ. ಕಳೆದ ಫೆಬ್ರವರಿಯಿಂದಲೂ ಕಾರನ್ನು ಅಲ್ಲಿ ನಿಲ್ಲಿಸಲಾಗಿದೆ. ಮೊದಲು ಅದರ ಮೇಲೆ ಹೊದಿಕೆಯಿತ್ತು. ಗಾಳಿಗೆ ಹಾರಿ ಹೋಗಿದ್ದರಿಂದ ಅದರ ನಂಬರ್​ ಪ್ಲೇಟ್​ ಎಲ್ಲರ ಗಮನ ಸೆಳೆಯುತ್ತದೆ. ಜತೆಗೆ ಹತ್ತಿರ ಹೋಗಲು ಹೆದರುತ್ತಾರೆ ಎಂದೇ ವಿಮಾನ ನಿಲ್ದಾಣದ ಸಿಬ್ಬಂದಿ ಹೇಳುತ್ತಾರೆ.

ದಾಖಲೆಗಳ ಪ್ರಕಾರ ಕಾರಿಗೆ ಸಪ್ಟೆಂಬರ್​ 2020ರ ಅವಧಿವರೆಗೆ ಈ ಹೆಸರನ್ನು ನೋಂದಣಿ ಮಾಡಿಸಲಾಗಿದೆ. ಆ ಬಳಿಕ ಕಾರಿನಿಂದ (ನವೀಕರಿಸದಿದ್ದರೆ) ಮಾತ್ರವಲ್ಲ ಜಗತ್ತಿನಿಂದಲೇ ಕೋವಿಡ್​ ದೂರಾಗಬಹುದೇನೋ?

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net