ಕುಡಿತದ ದಾಸರಾದವರು ಮದ್ಯ ಸಿಗದಿದ್ದರೆ ಚಾಕು ನುಂಗ್ತಾರಾ? ಈ ಕಾಯಿಲೆಗೆ ಏನಂತಾರೆ?

Knife in lever
Published on

ನವದೆಹಲಿ: ಕುಡಿತದ ದಾಸರಾದವರಿಗೆ ಮದ್ಯ ಬೇಕೇ ಬೇಕು. ಲಾಕ್​ಡೌನ್​ ನಂತರದಲ್ಲಿ ಹಲವು ದಿನಗಳವರೆಗೆ ಮದ್ಯದಂಗಡಿಗಳ ಎದುರು ಜನರು ಮೈಲುಗಟ್ಟಲೇ ನಿಂತು ಮದ್ಯ ಖರೀದಿಸಿದ್ದು ಭಾರಿ ಸುದ್ದಿಯಾಗಿತ್ತು.

ಆದರೆ, ಮದ್ಯವೇ ಸಿಗದಿದ್ದರೆ ಏನು ಮಾಡ್ತಾರೆ..? ಮತ್ತು ಬರುವ ಏನನ್ನಾದರೂ ಅವರ ಸೇವಿಸಲು ಸಜ್ಜಾಗಿರುತ್ತಾರೆ. ಕೆಲವರಲ್ಲಿ ವಿಚಿತ್ರ ಕಾಯಿಲೆಯೊಂದು ಮನೆ ಮಾಡಿರುತ್ತದೆ.

ದೆಹಲಿ ಏಮ್ಸ್​ ವೈದ್ಯರು ಇತ್ತೀಚೆಗೆ ವ್ಯಕ್ತಿಯೊಬ್ಬನ ಶಸ್ತ್ರಚಿಕಿತ್ಸೆ ನಡೆಸಿ ಆತನ ಯಕೃತ್ತಿನಲ್ಲಿದ್ದನ್ನು ತೆರೆದಾಗ ಅವರಿಗೆ ಅಚ್ಚರಿ ಕಾದಿತ್ತು. ಏಕೆಂದರೆ ಅಲ್ಲಿದ್ದದ್ದು 20 ಸೆಂ. ಮೀಟರ್​ ಉದ್ದದ ಚಾಕು...!

28 ವರ್ಷದ ವ್ಯಕ್ತಿಗೆ ಕುಡಿತದ ಚಟವಿತ್ತು. ಜತೆಗೆ ಗಾಂಜಾ ಕೂಡ ಸೇವಿಸುತ್ತಿದ್ದ. ಲಾಕ್​ಡೌನ್​ ಸಮಯದಲ್ಲಿ ಕುಡಿತಕ್ಕೆ ಏನೂ ಸಿಗದಿದ್ದಾಗ ಒಂದು ಬಟ್ಟಲಲ್ಲಿ ನೀರು ತೆಗೆದುಕೊಂಡು ಅದರ ಜತೆಗೆ ಚಾಕು ನುಂಗಿದ್ದಾನೆ. ಇದಾಗಿ ಒಂದೂವರೆ ತಿಂಗಳವರೆಗೆ ಆತ ಯಾರಿಗೂ ಏನನ್ನೂ ಹೇಳಿಲ್ಲ. ಹೊಟ್ಟೆ ನೋವು ಆರಂಭವಾದಾಗ ಸಫ್ದರ್​ಜಂಗ್​ ಆಸ್ಪತ್ರೆಗೆ ಹೋಗಿದ್ದಾನೆ. ಎಕ್ಸ್​ರೇ ಮಾಡಿಸಿದ ವೈದ್ಯರಿಗೆ ಹೊಟ್ಟೆಯಲ್ಲಿ ಚಾಕು ಇರುವುದು ಗೊತ್ತಾಗಿದೆ. ಕೂಡಲೇ ಆತನನ್ನು ಏಮ್ಸ್​ಗೆ ಕೊಂಡೊಯ್ಯುವಂತೆ ಹೇಳಿದ್ದಾರೆ.

ಅಮಲಿನ ದಾಸರಾದವರು ಸೈಕೋಸಿಸ್​ ಕಾಯಿಲೆಗೆ ಒಳಗಾಗುತ್ತಾರೆ. ಇದಕ್ಕೆ ಚಿಕಿತ್ಸೆ ಪಡೆಯದೇ ಉಲ್ಬಣಿಸಿದಲ್ಲಿ ರೋಗಿಗಳು ಸೇಫ್ಟಿ ಪಿನ್​ಗಳನ್ನು ನುಂಗುವ ಗೀಳಿಗೆ ಒಳಗಾಗುತ್ತಾರೆ. ಚಮಚಗಳು ಹಾಗೂ ಇತರ ಲೋಹದ ವಸ್ತುಗಳನ್ನು ಗಂಟಲಲ್ಲಿ ಇಳಿಸಿಕೊಳ್ತಾರೆ ಎನ್ನುತ್ತಾರೆ ಏಮ್ಸ್​ ವೈದ್ಯ ಡಾ. ನಿಹಾರ್​ ರಂಜನ್​.

ಚಾಕು ಇಷ್ಟು ದಿನ ಅಲ್ಲಿ ಇದ್ದಿದ್ದಾದರೂ ಹೇಗೆ ಎಂಬುದು ವೈದ್ಯರಿಗೂ ಆಶ್ಚರ್ಯ ಮೂಡಿಸಿದೆ. ಅದನ್ನು ಹೊರ ತೆಗೆಯುವುದು ಕೂಡ ಅವರಿಗೆ ಭಾರಿ ಸವಾಲಾಗಿ ಪರಿಣಮಿಸಿತ್ತು. ಸದ್ಯ ರೋಗಿ ಅಪಾಯದಿಂದ ಪಾರಾಗಿದ್ದು, ಚೇತರಿಸಿಕೊಳ್ಳುತ್ತಿದ್ದಾನೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net