ಅಗ್ನಿವೀರರಿಗೆ ಭೂಸೇನೆ ಅಧಿಸೂಚನೆ: ವಿವಿಧೆಡೆ ಉದ್ಯೋಗ ಮೀಸಲಾತಿ..

Protest
ಅಗ್ನಿಪಥ ಯೋಜನೆ ವಿರೋಧಿಸಿ ದೆಹಲಿಯ ಶಿವಾಜಿ ಬ್ರಿಡ್ಜ್ ಬಳಿ ರೈಲು ತಡೆದು ಪ್ರತಿಭಟನೆ.
Published on

ನವದೆಹಲಿ: ಅಲ್ಪಾವಧಿ ಸೇನಾ ನೇಮಕ ಯೋಜನೆ ಅಗ್ನಿಪಥಕ್ಕೆ ದೇಶಾದ್ಯಂತ ವಿರೋಧ ಮುಂದುವರಿದ ಬೆನ್ನಿಗೆ ಭೂಸೇನೆ ಈ ಯೋಜನೆಯಡಿ ನೇಮಕಾತಿಗೆ ಸೋಮವಾರ ಅಧಿಸೂಚನೆ ಪ್ರಕಟಿಸಿದೆ. ಮೊದಲ ನೇಮಕಾತಿ ರ್ಯಾಲಿಗೆ ಜುಲೈನಿಂದ ನೋಂದಣಿ ಪ್ರಕ್ರಿಯೆ ಆರಂಭವಾಗಲಿದೆ ಎಂದು ತಿಳಿಸಿದೆ. ‘ಅಗ್ನಿವೀರ’ರು ಈಗಿರುವ ಇತರ ರ್ಯಾಂಕ್​ಗಳಿಗಿಂತ ಭಿನ್ನವಾದ ರ್ಯಾಕ್​ನ ಭಾಗವಾಗಿರುತ್ತಾರೆ. ನಾಲ್ಕು ವರ್ಷಗಳ ಸೇವೆಯಿಂದ ಹೊರಗೆ ಬಂದ ನಂತರ ಅಲ್ಲಿನ ಯಾವುದೇ ರಹಸ್ಯ ಮಾಹಿತಿಯನ್ನು ‘ಅಗ್ನಿವೀರ’ರು ಬಹಿರಂಗಪಡಿಸುವುದನ್ನು 1923ರ ಅಧಿಕೃತ ರಹಸ್ಯ ಕಾನೂನು ಅನ್ವಯ ನಿರ್ಬಂಧಿಸಲಾಗಿದೆ ಎಂದು ಸೇನೆ ಸ್ಪಷ್ಟಪಡಿಸಿದೆ. ಭೂ ಸೇನೆ, ವಾಯು ಪಡೆ ಮತ್ತು ನೌಕಾ ಪಡೆಯ ಮೂಖ್ಯಸ್ಥರು ಮಂಗಳವಾರ ಕೂಡ ಅಗ್ನಿಪಥ ಯೋಜನೆ ಸಂಬಂಧ ಸಭೆ ನಡೆಸಲಿದ್ದಾರೆ. ರಕ್ಷಣಾ ಸಚಿವ ರಾಜನಾಥ ಸಿಂಗ್​ರೊಂದಿಗೆ ಭಾನುವಾರ ಕೂಡ ಅವರು ಸಭೆ ನಡೆಸಿ ನಂತರ, ತಮ್ಮ ತಮ್ಮ ಪಡೆಗಳ ನೇಮಕಾತಿ ಯೋಜನೆಯ ಮಾಹಿತಿಯನ್ನು ವಿವರಿಸಿದ್ದರು.

ರೈಲ್ವೆ ಆಸ್ತಿಗೆ ಹಾನಿ: ಉತ್ತರ ಭಾರತದಲ್ಲಿ ಬಂದ್ ಪರಿಣಾಮವಾಗಿ 500ಕ್ಕೂ ಹೆಚ್ಚು ರೈಲುಗಳ ಸಂಚಾರ ಅಸ್ತವ್ಯಸ್ತಗೊಂಡಿದೆ. ಪ್ರಯಾಣಿಕರಿಗೆ ಟಿಕೆಟ್​ನ ಪೂರ್ಣ ದರವನ್ನು ರೈಲ್ವೆ ಮರುಪಾವತಿ ಮಾಡುವುದಾಗಿ ಹೇಳಿದೆ. ಪ್ರತಿಭಟನೆಕಾರರು ಬೋಗಿಗಳಿಗೆ ಅಗ್ನಿಸ್ಪರ್ಶ ಮಾಡುವುದೂ ಸೇರಿ ಹಲವು ದುಷ್ಕೃತ್ಯಗಳಲ್ಲಿ ತೊಡಗಿರುವುದರಿಂದ ರೈಲ್ವೆಗೆ ಭಾರಿ ಹಾನಿಯುಂಟಾಗಿದೆ. ಯೋಜನೆಯನ್ನು ಕೈಬಿಡುವಂತೆ ಆಕಾಂಕ್ಷಿಗಳು ಮತ್ತು ಪ್ರತಿಪಕ್ಷಗಳು ಪಟ್ಟು ಹಿಡಿದಿವೆ. ಆದರೆ ಅದನ್ನು ವಾಪಸ್ ಪಡೆಯುವ ಪ್ರಶ್ನೆಯೇ ಇಲ್ಲವೆಂದು ಸರ್ಕಾರ ಸ್ಪಷ್ಟಪಡಿಸಿದೆ.

ಕಾಂಗ್ರೆಸ್ ನಾಯಕನ ಬೆಂಬಲ: ಅಗ್ನಿಪಥ ಯೋಜನೆಗೆ ಕಾಂಗ್ರೆಸ್ ವಿರೋಧ ದಾಖಲಿಸಿರುವುದರ ನಡುವೆಯೇ ಆ ಪಕ್ಷದ ಸಂಸದ ಮನೀಶ್ ತಿವಾರಿ ಯೋಜನೆ ಪರವಾಗಿ ಬ್ಯಾಟ್ ಬೀಸಿದ್ದಾರೆ. 1975ರಲ್ಲಿ ಡೊನಾಲ್ಡ್ ರಮ್ಸ್​ಫೀಲ್ಡ್ ಅಮೆರಿಕದ ರಕ್ಷಣಾ ಕಾರ್ಯದರ್ಶಿಯಾಗಿದ್ದಾಗ ಮಿಲಿಟರಿ ಗಾತ್ರವನ್ನು ಕಡಿತಗೊಳಿಸುವ (ರೈಟ್ ಸೈಝಿಂಗ್) ಪ್ರಕ್ರಿಯೆ ಆರಂಭವಾಗಿತ್ತು. ಅದಾದ ನಂತರದ ಅಲ್ಲಿನ ಎಲ್ಲ ಸರ್ಕಾರಗಳು ಇದನ್ನು ಪಾಲಿಸಿಕೊಂಡು ಬಂದಿವೆ ಎಂದು ತಿವಾರಿ ಯೋಜನೆಯನ್ನು ಸಮರ್ಥಿಸಿದ್ದಾರೆ. ಭವಿಷ್ಯದ ಸಮರಾಂಗಣದ ಸ್ವರೂಪವನ್ನು ಮನಗಂಡು ಅದಕ್ಕೆ ಅನುಗುಣವಾಗಿ ಸಶಸ್ತ್ರ ಪಡೆಗಳನ್ನು ಸಿದ್ಧಪಡಿಸುವ ಯೋಜನೆಯನ್ನು ರಮ್ಸ್​ಫೀಲ್ಡ್ ರೂಪಿಸಿದ್ದರು ಎಂದವರು ವಿವರಿಸಿದ್ದಾರೆ. ಚೀನಾ ಕೂಡ 1985ರಷ್ಟು ಹಿಂದೆಯೇ ರೈಟ್ ಸೈಝಿಂಗ್ ಪ್ರಕ್ರಿಯೆ ಆರಂಭಿಸಿತ್ತು ಎಂದವರು ಹೇಳಿದ್ದಾರೆ. ರಕ್ಷಣಾ ಕ್ಷೇತ್ರದ ಸುಧಾರಣೆಯು ವಿಶಾಲ ವ್ಯೂಹಾತ್ಮಕ ವಲಯಕ್ಕೆ ಸಂಬಂಧಿಸಿದ್ದಾಗಿದ್ದು ಕೇವಲ ಆಂತರಿಕ ಪುನರ್​ಸಂಘಟನೆ ದೃಷ್ಟಿಯಿಂದ ನೋಡಬಾರದು ಎಂದು ತಿವಾರಿ ತಮ್ಮ ‘10 ಫ್ಲ್ಯಾಶ್ ಪಾಯಿಂಟ್ಸ್ 20 ಇಯರ್ಸ್’ ಎಂಬ ಪುಸ್ತಕದಲ್ಲಿ ಅಭಿಪ್ರಾಯ ಪಟ್ಟಿದ್ದಾರೆ.

ಅಗ್ನಿವೀರರಿಗೆ ಕಂಪನಿಗಳ ಆಫರ್: ಅಗ್ನಿಪಥ ಯೋಜನೆಯಡಿ ನಾಲ್ಕು ವರ್ಷಗಳ ಮಿಲಿಟರಿ ಸೇವೆಯಿಂದ ಹೊರಬರುವ ‘ಅಗ್ನಿವೀರ’ರಿಗೆ ಕೇಂದ್ರ ಮತ್ತು ಹಲವು ರಾಜ್ಯ ಸರ್ಕಾರಗಳು ಈಗಾಗಲೇ ಹಲವು ನೇಮಕಾತಿ/ಮೀಸಲಾತಿ ಸೌಲಭ್ಯಗಳನ್ನು ಪ್ರಕಟಿಸಿದ್ದು ಈಗ ಕೈಗಾರಿಕೋದ್ಯಮಿಗಳು ಕೂಡ ಮುಂದೆ ಬಂದಿದ್ದಾರೆ. ಹರ್ಷ ಗೋಯೆಂಕಾ ಮತ್ತು ಆನಂದ ಮಹೀಂದ್ರಾ ಅವರಲ್ಲಿ ಪ್ರಮುಖರು. ಹೊಸ ಯೋಜನೆಗೆ ನಿಗದಿಪಡಿಸಿರುವ ನೇಮಕದ ಗರಿಷ್ಠ ವಯೋಮಿತಿಯನ್ನು 2022ನೇ ಸಾಲಿಗೆ ಮಾತ್ರ 21ರಿಂದ 23 ವರ್ಷಕ್ಕೆ ಏರಿಸಿತ್ತು. ಅದರ ಬೆನ್ನಲ್ಲೇ ಗೃಹ ಮತ್ತು ರಕ್ಷಣಾ ಸಚಿವಾಲಯಗಳು ತಮ್ಮ ನೇಮಕಾತಿಗಳಲ್ಲಿ ಸೇವೆಯಿಂದ ನಿವೃತ್ತರಾದ ಅಗ್ನಿವೀರರಿಗೆ ಶೇಕಡ 10 ಮೀಸಲಾತಿ ಘೋಷಿಸಿತ್ತು.

  • ಹೆಚ್ಚು ಕುಶಲ, ಶಿಸ್ತುಬದ್ಧ ಹಾಗೂ ಉತ್ಸಾಹಪೂರ್ಣ ಅಗ್ನಿವೀರರಿಗೆ ವಿವಿಧ ವಲಯಗಳಲ್ಲಿ ಉದ್ಯೋಗ ಒದಗಿಸುವುದಾಗಿ ನಾಗರಿಕ ವಿಮಾನಯಾನ ಸಚಿವಾಲಯ ತಿಳಿಸಿದೆ.
  • ವಸತಿ ಮತ್ತು ಪೆಟ್ರೋಲಿಯಂ ಸಚಿವಾಲಯದಡಿ ಬರುವ ಸಾರ್ವಜನಿಕ ಉದ್ಯಮಗಳಲ್ಲಿ ಅಗ್ನಿವೀರರಿಗೆ ಅವರ ಸೇವಾ-ನಂತರ ಕೆಲಸ ಒದಗಿಸಲಾಗುವುದೆಂದು ಸಚಿವ ಹರ್​ದೀಪ್ ಸಿಂಗ್ ಪುರಿ ಹೇಳಿದ್ದಾರೆ.

ವಾರಾಣಸಿಯಲ್ಲಿ ನಷ್ಟ ವಸೂಲಿ: ಸಾರ್ವಜನಿಕ ಆಸ್ತಿಗಾದ ನಷ್ಟವನ್ನು ಚಳವಳಿಕಾರರಿಂದಲೇ ವಸೂಲಿ ಮಾಡಲಾಗುವುದೆಂದು ಉತ್ತರ ಪ್ರದೇಶದ ವಾರಾಣಸಿಯ ಜಿಲ್ಲಾಧಿಕಾರಿ ಕೌಶಲ್ ರಾಜ್ ಶರ್ಮಾ ಸೋಮವಾರ ಹೇಳಿದ್ದಾರೆ. ಜೂನ್ 17ರಂದು ನಡೆದ ಹಿಂಸಾತ್ಮಕ ಪ್ರತಿಭಟನೆಯಲ್ಲಿ 36 ಬಸ್​ಗಳು ಜಖಂಗೊಂಡಿದ್ದು, 12 ಲಕ್ಷ ರೂಪಾಯಿ ನಷ್ಟ ಸಂಭವಿಸಿದೆ. ಇದುವರೆಗೆ 27 ಜನರನ್ನು ಬಂಧಿಸಲಾಗಿದ್ದು ಇತರರ ಪತ್ತೆಗೆ ಜಾಲ ಬೀಸಲಾಗಿದೆ. ಕಾಂಗ್ರೆಸ್ ಸತ್ಯಾಗ್ರಹ: ಅಗ್ನಿಪಥ ಯೋಜನೆ ವಿರುದ್ಧ ಕಾಂಗ್ರೆಸ್ ನಾಯಕರು ದೆಹಲಿಯ ಜಂತರ್ ಮಂತರ್​ನಲ್ಲಿ ಧರಣಿ ನಡೆಸಿದರು. ಕನ್ನಾಟ್ ಪ್ಲೇಸ್ ಸಮೀಪದ ಶಿವಾಜಿ ಬ್ರಿಡ್ಜ್ ರೈಲ್ವೆ ಸ್ಟೇಷನ್​ನಲ್ಲಿ ರೈಲು ತಡೆದ ಹಲವು ಕಾಂಗ್ರೆಸ್ ಕಾರ್ಯಕರ್ತರನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ. ನಗರ, ಜಿಲ್ಲಾ ಗಡಿಗಳಲ್ಲಿ ಭದ್ರತಾ ವ್ಯವಸ್ಥೆ ಬಿಗಿಗೊಳಿಸಿದ್ದರಿಂದ ನಗರದ ಹಲವು ಭಾಗಗಳಲ್ಲಿ ಟ್ರಾಫಿಕ್ ಜಾಮ್ ಉಂಟಾಗಿತ್ತು. ದೆಹಲಿ-ಹರಿಯಾಣದ ಗಡಿಯ ಸಿಂಘು ಗಡಿಯಲ್ಲಿ ಪ್ರತಿಭಟನೆ ನಡೆಸಿದ ಮೂವರು ಕಾಂಗ್ರೆಸ್ ಶಾಸಕರ ಸಹಿತ 50ಕ್ಕೂ ಹೆಚ್ಚು ಮಂದಿಯನ್ನು ವಶಕ್ಕೆ ಪಡೆಯಲಾಗಿದೆ. ಅಹಿತಕರ ಘಟನೆಗಳು ನಡೆಯುವುದನ್ನು ತಪ್ಪಿಸಲು ಕೇರಳ, ತೆಲಂಗಾಣ, ಬಂಗಾಳ ಮತ್ತು ರಾಜಸ್ಥಾನಗಳ ಹಲವೆಡೆ ಭದ್ರತೆಯನ್ನು ಬಿಗಿಗೊಳಿಸಲಾಗಿದೆ. ಈ ಮಧ್ಯೆ ಸಂಯುಕ್ತ ಕಿಸಾನ್ ಮೋರ್ಚಾ ಜೂನ್ 24ಕ್ಕೆ ದೇಶಾದ್ಯಂತ ಪ್ರತಿಭಟನೆ ನಡೆಸಲು ಕರೆ ನೀಡಿದೆ.

ಸರ್ಕಾರ ತನ್ನ ವಿವಾದಾತ್ಮಕ ನಿರ್ಧಾರ ವನ್ನು ಸಮರ್ಥಿಸಿಕೊಳ್ಳಲು ಇದೇ ಮೊದಲ ಬಾರಿಗೆ ಸೇನಾಪಡೆಗಳ ಮುಖ್ಯಸ್ಥರನ್ನು ಮುನ್ನೆಲೆಗೆ ತಂದಿದೆ. 75 ವರ್ಷದ ಇತಿಹಾಸದಲ್ಲಿ ಸೇನಾ ಮುಖ್ಯಸ್ಥರು ಈ ರೀತಿ ರಾಜಕೀಯ ಉದ್ದೇಶಕ್ಕೆ ಬಳಕೆ ಆಗಿರಲಿಲ್ಲ. ಪ್ರಧಾನಿ, ರಕ್ಷಣಾ, ಗೃಹ ಸಚಿವರೇ ಅಗ್ನಿಪಥ ಯೋಜನೆಯನ್ನು ಸಮರ್ಥನೆ ಮಾಡಿಕೊಳ್ಳಬಹುದಿತ್ತು. ಆದರೆ ಏಕೆ ಹಾಗೆ ಮಾಡಲಿಲ್ಲ? | ಎಂ. ಮಲ್ಲಿಕಾರ್ಜುನ ಖರ್ಗೆ ಕಾಂಗ್ರೆಸ್ ನಾಯಕ

ಸುಪ್ರೀಂ ಕೋರ್ಟ್​ಗೆ ಅರ್ಜಿ: ಅಗ್ನಿಪಥ ಯೋಜನೆ ವಿರುದ್ಧ ಸುಪ್ರೀಂ ಕೋರ್ಟ್​ಗೆ ಸೋಮವಾರ ಅರ್ಜಿ ಸಲ್ಲಿಸಲಾಗಿದ್ದು, ಸಶಸ್ತ್ರ ಪಡೆಗಳ ಶತಮಾನದಷ್ಟು ಹಳೆಯ ನೇಮಕಾತಿ ಯೋಜನೆಯನ್ನು ಅದು ನಾಶಮಾಡುತ್ತದೆ ಎಂದು ಆರೋಪಿಸಲಾಗಿದೆ. ಸಂಸತ್ತಿನ ಅನುಮೋದನೆ ಇಲ್ಲದೆಯೇ ಇದನ್ನು ರೂಪಿಸಲಾಗಿದ್ದು ಸಾಂವಿಧಾನಿಕ ನಿಯಮಗಳಿಗೆ ವಿರುದ್ಧವಾಗಿದೆ ಎಂದೂ ಅರ್ಜಿದಾರರಾದ ವಕೀಲ ಎಂ.ಎಲ್. ಶರ್ಮಾ ವಾದಿಸಿದ್ದಾರೆ. ಜೂನ್ 14ರಿಂದು ಪ್ರಕಟಿಸಲಾದ ಅಗ್ನಿಪಥ ಯೋಜನೆಯು ಕಾನೂನುಬಾಹಿರ ಹಾಗೂ ಅಸಾಂವಿಧಾನಿಕವಾದ ಕಾರಣ ಅದನ್ನು ರದ್ದು ಪಡಿಸುವಂತೆ ಅವರು ಕೋರಿದ್ದಾರೆ.

20 ಜಿಲ್ಲೆಗಳಲ್ಲಿ ಇಂಟರ್​ನೆಟ್ ಸ್ಥಗಿತ: ಅಗ್ನಿಪಥ ವಿರೋಧಿ ಚಳವಳಿ ತೀವ್ರವಾಗಿರುವ ಬಿಹಾರದಲ್ಲಿ ಸೋಮವಾರ ಇನ್ನೂ 12 ಜಿಲ್ಲೆಗಳಲ್ಲಿ ಇಂಟರ್​ನೆಟ್ ಸೇವೆಯನ್ನು ಸ್ಥಗಿತಗೊಳಿಸಲಾಗಿದೆ. ಇದರೊಂದಿಗೆ ಸೇವೆ ಸ್ಥಗಿತಗೊಂಡ ಜಿಲ್ಲೆಗಳ ಸಂಖ್ಯೆ 20ಕ್ಕೇರಿದೆ.

ಸಹಾಯ್ ಹೇಳಿಕೆಗೆ ಖಂಡನೆ: ಅಗ್ನಿಪಥ ಯೋಜನೆ ವಿಷಯದಲ್ಲಿ ಪ್ರಧಾನಿ ಮೋದಿ ಹಿಟ್ಲರ್​ನಂತೆ ಹಟಹಿಡಿದು ಮುಂದುವರಿದರೆ ಅವರು ಹಿಟ್ಲರ್​ನಂತೆಯೇ ಸಾಯುತ್ತಾರೆ ಎಂದು ಹಿರಿಯ ಕಾಂಗ್ರೆಸ್ ನಾಯಕ ಸುಬೋಧ್ ಕಾಂತ್ ಸಹಾಯ್ ಹೇಳಿರುವುದು ವಿವಾದಕ್ಕೆ ಆಸ್ಪದ ನೀಡಿದೆ. ಪ್ರಧಾನಿ ವಿರುದ್ಧ ಅಸಾಂಸದಿಕ ಭಾಷೆ ಬಳಸಿರುವುದಕ್ಕೆ ಬಿಜೆಪಿ ತೀವ್ರ ಆಕ್ರೋಶ ವ್ಯಕ್ತಪಡಿಸಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net