ಮತ್ತೆ ಹಾರಲಿದೆ ಗಣಿ ಧೂಳು: ನನೆಗುದಿಗೆ ಬಿದ್ದಿದ್ದ ಪ್ರಕರಣಗಳ ತನಿಖೆ ಕಾರ್ಯಾವಧಿ ವಿಸ್ತರಣೆ; ತನಿಖಾ ಪ್ರಗತಿ ಪರಾಮರ್ಶೆಗೆ ಸಿಎಂ ತೀರ್ಮಾನ

Mines
Published on

ಬೆಂಗಳೂರು: ದೇಶದಲ್ಲೇ ಸಂಚಲನ ಮೂಡಿಸಿದ್ದ ರಾಜ್ಯದ ಗಣಿ ಅಕ್ರಮ ಮತ್ತೆ ಸದ್ದು ಮಾಡುವುದು ದಿಟವಾಗಿದ್ದು, ಸರ್ಕಾರ ಈ ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿದೆ.

2011-13ರ ಅವಧಿಯಲ್ಲಿ ಭಾರಿ ಚರ್ಚೆಯಲ್ಲಿದ್ದ ಗಣಿ ಅಕ್ರಮದ ತನಿಖೆಗೆ ಸಿದ್ದರಾಮಯ್ಯ ಸರ್ಕಾರದ ಮೊದಲ ಅವಧಿಯಲ್ಲಿ ಎಸ್​ಐಟಿ ರಚನೆಯಾಗಿತ್ತು. ಆದರೆ, ತನಿಖೆ ಮಂದಗತಿಯಲ್ಲಿ ಸಾಗಿ ಪ್ರಕ್ರಿಯೆಗೆ ಗರ ಬಡಿದಿತ್ತು. ಇದೀಗ ಪುನಃ ತನಿಖಾ ಕಡತದ ಧೂಳು ಕೊಡವಲು ಸಿದ್ದರಾಮಯ್ಯ ಆಸಕ್ತಿ ತಾಳಿದ್ದಾರೆ. ವಿಶೇಷ ತನಿಖಾ ತಂಡದ ಅವಧಿಯನ್ನು ವಿಸ್ತರಿಸುವ ಪ್ರಸ್ತಾವನೆ ಸಂಪುಟ ಸಭೆ ಮುಂದೆ ಬಂದ ಸಂದರ್ಭದಲ್ಲಿ ದೀರ್ಘ ಚರ್ಚೆ ನಡೆದಿದೆ.

ಇನ್ನು ಮುಂದೆ ತಾವೇ ತನಿಖೆಯ ಪ್ರಗತಿಯ ಬಗ್ಗೆ ಪರಾಮರ್ಶೆ ನಡೆಸುವು ದಾಗಿಯೂ ಹೇಳಿದ್ದು, ರ್ತಾಕ ಅಂತ್ಯಕ್ಕೆ ಕೊಂಡೊಯ್ಯಲು ನಿರ್ಧರಿಸಿದ್ದಾರೆ. ಸದ್ಯ 2024ರ ಜೂ. 30ರವರೆಗೆ ತನಿಖಾ ತಂಡದ ಅವಧಿ ವಿಸ್ತರಿಸಲಾಗಿದೆ. ಈ ತೀರ್ವನವನ್ನು ಪ್ರತಿಪಕ್ಷಗಳ ಪ್ರಮುಖ ನಾಯಕರನ್ನು ಹಣಿಯಲು ಕೈಗೊಂಡ ನಿರ್ಧಾರ ಎಂಬ ವಿಶ್ಲೇಷಣೆ ರಾಜಕೀಯ ವಲಯದಲ್ಲಿ ಕೇಳಿಬಂದಿದೆ. ಈ ಹಿಂದೆ ಎಸ್​ಐಟಿ ಹಲವು ರಾಜಕಾರಣಿಗಳನ್ನು ವಿಚಾರಣೆಗೊಳಪಡಿಸಿತ್ತು. ಅಲ್ಲದೇ ಭಾರಿ ವಿವಾದವನ್ನೂ ಸೃಷ್ಟಿಸಿತ್ತು. ಈಗ ಸರ್ಕಾರ ಹಳೆ ಪ್ರಕರಣಗಳನ್ನು ಮತ್ತೆ ಕೆದಕಲು ಮುಂದಾಗಿದೆ.

ಸಂಪುಟ ಸಭೆ ಬಳಿಕ ಮಾಧ್ಯಮಗಳಿಗೆ ಮಾಹಿತಿ ನೀಡಿದ ಕಾನೂನು ಮತ್ತು ಸಂಸದೀಯ ಸಚಿವ ಎಚ್.ಕೆ. ಪಾಟೀಲ್, ಮುಂದಿನ 8 ತಿಂಗಳಲ್ಲಿ ಎಷ್ಟು ಸಾಧ್ಯವೋ ಅಷ್ಟು ತನಿಖಾ ಪ್ರಗತಿ ಸಾಧಿಸುವುದು ಇದರ ಉದ್ದೇಶ. ಮಾಜಿ ಸಿಎಂ ಎಚ್.ಡಿ. ಕುಮಾರಸ್ವಾಮಿಯವರಿಗೆ ಸಂಬಂಧಪಟ್ಟ ಪ್ರಕರಣ ವಿಚಾರಣೆಗೆ ಬಾಕಿ ಇದ್ದರೆ ಅದನ್ನೂ ನಾವು ಪರಿಶೀಲಿಸುತ್ತೇವೆ ಎಂದು ಹೇಳಿದರು.

ವಿಶೇಷ ತನಿಖಾ ತಂಡದ ಕಾರ್ಯಾವಧಿಯನ್ನು ಎರಡು ವರ್ಷ ವಿಸ್ತರಿಸಬೇಕೆಂದು ಪೊಲೀಸ್ ಮಹಾ ನಿರೀಕ್ಷಕರು (ವಿಶೇಷ ತನಿಖಾ ತಂಡ) ಕೋರಿದ್ದರು. ಸರ್ಕಾರದ ನೀಡಿದ ಮಾಹಿತಿ ಪ್ರಕಾರ, 10 ಕ್ರಿಮಿನಲ್ ಪ್ರಕರಣಗಳ ತನಿಖೆ ಬಾಕಿಯಾಗಿದೆ. ನವ ಮಂಗಳೂರು, ಕಾರವಾರ, ಮರ್ಮಗೋವಾ, ಪಣಜಿ, ಚೆನ್ನೈ ಬಂದರುಗಳಿಗೆ ಸಂಬಂಧಪಟ್ಟ 172 ಪ್ರಕರಣಗಳ ಪ್ರಾಥಮಿಕ ತನಿಖೆಯೇ ಆಗಿಲ್ಲ. ಸರ್ಕಾರ ರಚಿಸಿರುವ ಅದಿರು ಮೌಲ್ಯಮಾಪನ ವರದಿಗಳು ಬಾಕಿ ಇದ್ದು, ಈ ಪ್ರಕರಣದಲ್ಲಿ ಪೂರಕ ದೋಷಾರೋಪ ಪಟ್ಟಿ ಸಲ್ಲಿಸಬೇಕಾಗಿದೆ. ಇದಿಷ್ಟೇ ಅಲ್ಲದೇ, ನ್ಯಾಯಾಲಯಗಳಲ್ಲಿ ವಿಚಾರಣೆಗೆ ಬಾಕಿ ಇರುವ 59 ಪ್ರಕರಣಗಳ ಶೀಘ್ರ ವಿಲೇವಾರಿಯಾಗಬೇಕಿದೆ. ಅಂದು 50 ಸಾವಿರ ಮೆಟ್ರಿಕ್ ಟನ್​ಗೆ ಮೇಲ್ಪಟ್ಟ ಅಕ್ರಮ ನಡೆದ ಪ್ರಕರಣಗಳನ್ನು ಗುರುತಿಸಿ ಸಿಬಿಐಗೆ ಒಪ್ಪಿಸಲಾಗಿತ್ತು. ಅವುಗಳಲ್ಲಿ ಕೆಲ ಪ್ರಕರಣಗಳ ತನಿಖೆ ಅಸಾಧ್ಯ ಎಂದು ಸಿಬಿಐ ವಾಪಸ್ ಕಳಿಸಿತ್ತು.

ಗೋದಾಮು ‘ಹೆಗ್ಗಣ’ ಬಲಿಹಾಕಲು ರಿಯಲ್​ಟೈಮ್ ಮೇಲ್ವಿಚಾರಣೆ

ಆಹಾರ ಇಲಾಖೆಯ ಅಧೀನದಲ್ಲಿನ ಗೋದಾಮುಗಳಲ್ಲಿ ‘ಹೆಗ್ಗಣ’ ಕಾಟ ತಪ್ಪಿಸಲು ಸರ್ಕಾರ ‘ರಿಯಲ್ ಟೈಮ್ ಮ್ಯಾನೇಜ್​ವೆುಂಟ್’ ವ್ಯವಸ್ಥೆ ಜಾರಿಗೆ ತರುತ್ತಿದೆ. ಆಹಾರ ಮತ್ತು ನಾಗರಿಕ ಸರಬರಾಜು ಹಾಗೂ ಗ್ರಾಹಕ ವ್ಯವಹಾರಗಳ ಇಲಾಖೆಯ ಎಲ್ಲ ಸಗಟು ಗೋದಾಮಗಳಿಗೆ ಒಟ್ಟು 12.24 ಕೋಟಿ ರೂ. ಅಂದಾಜು ವೆಚ್ಚದಲ್ಲಿ ಸಿಸಿ ಕ್ಯಾಮರಾ ಅಳವಡಿಸಲಾಗುತ್ತದೆ. ಸಗಟು ಗೋದಾಮುಗಳಲ್ಲಿ ಆಹಾರ ಧಾನ್ಯಗಳನ್ನು ಸಂರಕ್ಷಿಸಲು ಸಿಸಿ ಕ್ಯಾಮರಾ ಅಳವಡಿಸಿ ತಾಲೂಕು, ಜಿಲ್ಲೆ ಹಾಗೂ ರಾಜ್ಯಮಟ್ಟದ ಮೇಲ್ವಿಚಾರಣೆ ನಡೆಸಲು ಉದ್ದೇಶಿಸಲಾಗಿದೆ. ಒಟ್ಟಾರೆ 306 ಸಗಟು ಗೋದಾಮುಗಳಿದ್ದು, 2.2 ಲಕ್ಷ ಮೆಟ್ರಿಕ್ ಟನ್ ಆಹಾರ ಧಾನ್ಯ ಸಂಗ್ರಹಿಸಿ ವಿತರಿಸಲಾಗುತ್ತಿದೆ.

17 ಪಟ್ಟಣಗಳಲ್ಲಿ ಒಳಚರಂಡಿ ವ್ಯವಸ್ಥೆಗೆ 750 ಕೋಟಿ ರೂ.

ರಾಷ್ಟ್ರೀಯ ಹಸಿರು ನ್ಯಾಯ ಮಂಡಳಿಯ ಪರಿಸರ ಪರಿಹಾರ ನಿಧಿಯಡಿಯಲ್ಲಿ ಎನ್​ಜಿಟಿ ಅನುಸರಣೆಯನ್ನು ತ್ವರಿತವಾಗಿ ಕೈಗೊಳ್ಳಲು 2ನೇ ಹಂತದಲ್ಲಿ 17 ಆದ್ಯತೆಯ ನಗರ ಸ್ಥಳೀಯ ಸಂಸ್ಥೆಗಳಲ್ಲಿ ಒಳಚರಂಡಿ ವ್ಯವಸ್ಥೆ ನಿರ್ಮಾಣ ಹಾಗೂ ಉನ್ನತೀಕರಣ ಕಾಮಗಾರಿಯನ್ನು 750 ಕೋಟಿ ರೂ. ವೆಚ್ಚದಲ್ಲಿ ಕೈಗೆತ್ತಿಕೊಳ್ಳಲು ಸಂಪುಟ ಸಭೆ ಒಪ್ಪಿಗೆ ನೀಡಿದೆ. ಒಂದು ಲಕ್ಷಕ್ಕೂ ಹೆಚ್ಚು ಜನ ಸಂಖ್ಯೆ ಹೊಂದಿರುವ ನಗರಗಳಲ್ಲಿ ಕೊಳಚೆ ನೀರಿನ ಉತ್ಪಾದನೆ ಮತ್ತು ಅದರ ಸಂಸ್ಕರಣೆ ನಡುವಿನ ಅಂತರ ತಗ್ಗಿಸಲು ಕಾಮಗಾರಿಗಳನ್ನು ಕೆಯುಐಡಿಎಫ್​ಸಿ ಮೂಲಕ ಅನುಷ್ಠಾನಕ್ಕೆ ಅನುಮೋದನೆ ನೀಡಲಾಗಿದೆ.

ನಾಲ್ಕು ಸಾವಿರ ದ್ವಿಚಕ್ರ ವಾಹನ ಖರೀದಿ

ಅಂಗವಿಕಲರಿಗೆ ನಾಲ್ಕು ಸಾವಿರ ಯಂತ್ರಚಾಲಿತ ದ್ವಿಚಕ್ರ ವಾಹನ ಖರೀದಿಸಿ ವಿತರಿಸಲು ಸಂಪುಟ ಒಪ್ಪಿಗೆ ನೀಡಿದೆ. ಇದಕ್ಕಾಗಿ ಅಂದಾಜು 36 ಕೋಟಿ ರೂ. ವೆಚ್ಚ ಮಾಡಲಾಗುತ್ತಿದೆ. ಕುಟುಂಬ ವಾರ್ಷಿಕ ವರಮಾನ 2 ಲಕ್ಷ ರೂ.ಗಿಂತ ಕಡಿಮೆ ಇರುವ 20ರಿಂದ 60 ವರ್ಷ ವಯೋಮಾನದ ತೀವ್ರತರದ ಅಂಗವಿಕಲರಿಗೆ ಅನುಕೂಲವಾಗಲು ಈ ವಾಹನ ನೀಡಲಾಗುತ್ತಿದೆ.

ಈವರೆಗೆ ಆಗದ ತನಿಖೆ ಮುಂದಿನ 8 ತಿಂಗಳಲ್ಲಿ ಆಗದು ಎಂಬ ಅರಿವಿದೆ. ಆದರೆ, ಐದು ವರ್ಷದಲ್ಲಿ ಆಡಳಿತಾತ್ಮಕ ಇಚ್ಛಾಶಕ್ತಿ ಇಲ್ಲದ್ದು ತನಿಖೆ ತಡವಾಗಲು ಕಾರಣ. ಇನ್ನು ಮುಂದೆ ಮುಖ್ಯಮಂತ್ರಿಯವರೇ ಪರಾಮರ್ಶೆ ಮಾಡಲಿದ್ದಾರೆ. ಈ ವಿಚಾರದಲ್ಲಿ ಧನಾತ್ಮಕವಾಗಿದ್ದೇವೆ. | ಎಚ್.ಕೆ. ಪಾಟೀಲ್, ಕಾನೂನು ಸಚಿವ

ಮತ್ತೆ 118 ಕಡೆ ಇಂದಿರಾ ಕ್ಯಾಂಟೀನ್

ಬಿಬಿಎಂಪಿ ಹೊರತು ಉಳಿದ ಪಾಲಿಕೆ ಹಾಗೂ ನಗರ ಸ್ಥಳೀಯ ಸಂಸ್ಥೆಗಳ ವ್ಯಾಪ್ತಿಯಲ್ಲಿ 188 ಇಂದಿರಾ ಕ್ಯಾಂಟೀನ್​ಗಳನ್ನು ಹೊಸದಾಗಿ ಆರಂಭಿಸಲಾಗುತ್ತಿದೆ. ಮೊದಲನೇ ಹಂತದಲ್ಲಿ ನಿರ್ವಿುಸಲಾದ ಪ್ರೀ-ಕಾಸ್ಟ್ ವಿಧಾನದ ಮಾದರಿಯಲ್ಲೇ ಅಡುಗೆ ಕೋಣೆಸಹಿತ ಹಾಗೂ ಅಡುಗೆ ಕೋಣೆರಹಿತ ಘಟಕ ತೆರೆಯಲು ಉದ್ದೇಶಿಸಿದ್ದು, ಎಕ್ಸೆಲ್ ಪ್ರೀಕಾಸ್ಟ್ ಸೆಲ್ಯೂಷನ್ ಸಂಸ್ಥೆಗೆ 4(ಜಿ) ವಿನಾಯಿತಿ ನೀಡಿ ಟೆಂಡರ್ ವಹಿಸಲಾಗುತ್ತಿದೆ. 165 ಅಡುಗೆ ಕೋಣೆಸಹಿತ ಘಟಕಕ್ಕೆ ತಲಾ 87 ಲಕ್ಷ ರೂ.ನಂತೆ, 23 ಅಡುಗೆ ಕೋಣೆರಹಿತ ಘಟಕಕ್ಕೆ ತಲಾ 48 ಲಕ್ಷ ರೂ. ವೆಚ್ಚದಲ್ಲಿ ಸ್ಥಾಪಿಸಲಾಗುತ್ತದೆ.

ಮೂಡದ ಒಮ್ಮತ: ನಾಗರಿಕ ಸೇವಾ ನಿಯಮ 16‘ಎ’ಗೆ ತಿದ್ದುಪಡಿ ಮಾಡಲು ಸರ್ಕಾರ ಬಯಸಿದೆ. ಆದರೆ, ಸಂಪುಟ ಸಭೆಯಲ್ಲಿ ಈ ಬಗ್ಗೆ ಒಮ್ಮತ ಮೂಡಿಲ್ಲ. ಗ್ರೂಪ್ ‘ಸಿ’ ಮತ್ತು ‘ಡಿ’ ನೌಕರರು ಬೇರೆ ಜಿಲ್ಲೆಗೆ ವರ್ಗಾವಣೆಗೊಂಡ ಸಂದರ್ಭದಲ್ಲಿ ಜ್ಯೇಷ್ಠತೆಯಲ್ಲಿ ಕೊನೆಯಲ್ಲಿ ಇಡಲಾಗುತ್ತಿತ್ತು. ಆದರೆ, ವರ್ಗಾವಣೆ ಬಳಿಕ ವೈಯಕ್ತಿಕ ಜ್ಯೇಷ್ಠತೆ ಉಳಿಸಲು ನಿಯಮಗಳಿಗೆ ತಿದ್ದುಪಡಿ ಮಾಡುವ ಪ್ರಸ್ತಾವನೆ ಇತ್ತು. ಇದರ ಬಗ್ಗೆ ಸಂಪುಟ ಸಭೆಯಲ್ಲಿ ಚರ್ಚೆಯಾಯಿತು. ಆದರೆ ಕಂದಾಯ, ಪೊಲೀಸ್ ಇಲಾಖೆ ಸೇರಿ ಕೆಲ ಇಲಾಖೆಗಳಲ್ಲಿ ಸಮಸ್ಯೆಯಾಗಲಿದೆ ಎಂದು ಅಭಿಪ್ರಾಯ ಬಂದ ಹಿನ್ನೆಲೆಯಲ್ಲಿ ಈ ವಿಚಾರ ಮುಂದೂಡಿಕೆಯಾಗಿದೆ.

ಮುಖ್ಯಾಂಶಗಳು

  • ಕನಿಷ್ಠ ಬೆಂಬಲ ಬೆಲೆ ಯೋಜನೆಯಡಿ ರೈತರಿಂದ 4 ಲಕ್ಷ ಮೆಟ್ರಿಕ್ ಟನ್ ರಾಗಿ ಸಂಗ್ರಹಿಸಲು ಅಗತ್ಯ ಇರುವ 80 ಲಕ್ಷ ಗೋಣಿ ಚೀಲವನ್ನು 76 ಕೋಟಿ ರೂ. ವೆಚ್ಚದಲ್ಲಿ ಖರೀದಿ
  • ಮೈಸೂರು ನಗರಾಭಿವೃದ್ಧಿ ಪ್ರಾಧಿಕಾರದಿಂದ 44 ಕೋಟಿ ಮೊತ್ತವನ್ನು ನಂಜನಗೂಡು ಶ್ರೀರಂಗಪಟ್ಟಣ ತಾಲೂಕಿನ ವಿವಿಧ ಗ್ರಾಮ ಗಳಲ್ಲಿ ಅಭಿವೃದ್ಧಿ ಕಾಮಗಾರಿ, ತ್ಯಾಜ್ಯ ನೀರು ಸಂಸ್ಕರಣಾ ಘಟಕದ ಭೂ ಸ್ವಾಧೀನಕ್ಕೆ ಬಳಕೆ
  • ಗದಗ-ಬೆಟಗೇರಿ ನಗರಸಭೆಗೆ ಅಮೃತ -2.0 ಯೋಜನೆಯಡಿ ಕುಡಿಯುವ ನೀರು ಸರಬರಾಜು ಯೋಜನೆ ಅನುಷ್ಠಾನಕ್ಕೆ 34 ಕೋಟಿ ರೂ.
  • ಗದಗ- ಬೆಟಗೇರಿ ವ್ಯಾಪಾರ, ಸಂಸ್ಕೃತಿ ಮತ್ತು ವಸ್ತು ಪ್ರದರ್ಶನ ಪ್ರಾಧಿಕಾರ ವಿಧೇಯಕ -2023ವನ್ನು ಅಧಿವೇಶನದಲ್ಲಿ ಮಂಡಿಸಲು ಅನುಮೋದನೆ.
  • ಶಾಸಕರಾಗಿದ್ದ ವೇಳೆ ಬಿಡಿಎನಿಂದ ಪಡೆದುಕೊಂಡಿದ್ದ ಜಿ ಕೆಟಗರಿ ನಿವೇಶನವನ್ನು ಮಾರಾಟ ಮಾಡಲು ಮಾಜಿ ಶಾಸಕ ಶ್ರೀಕಾಂತ ಕುಲಕರ್ಣಿಯವರಿಗೆ ಅವಕಾಶ
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net