ರಾಜ್ಯಾದ್ಯಂತ ಅಡೆನೊ ವೈರಸ್​ ಭೀತಿ: ವ್ಯಾಪಕವಾಗುತ್ತಿದೆ ಸಾಂಕ್ರಾಮಿಕ ರೋಗ; ಹವಾಮಾನ ವೈಪರೀತ್ಯ ಕಾರಣ

Adeno virus
Published on

| ಪಂಕಜ ಕೆ.ಎಂ. ಬೆಂಗಳೂರು

ಹವಾಮಾನ ವೈಪರೀತ್ಯದಿಂದಾಗಿ (ತೀವ್ರ ಬಿಸಿಲು, ಕೆಲವೊಮ್ಮೆ ಮೋಡಕವಿದ ವಾತಾವರಣ, ಆಗಾಗ್ಗೆ ಸುರಿವ ಮಳೆ) ರಾಜ್ಯದಲ್ಲಿ ಸಾಂಕ್ರಾಮಿಕ ರೋಗಗಳ ಭೀತಿ ಆವರಿಸಿದ್ದು, ಪ್ರಮುಖವಾಗಿ "ಅಡೆನೊ ವೈರಸ್​' ಹೆಚ್ಚಿನ ಸಂಖ್ಯೆಯಲ್ಲಿ ಮಕ್ಕಳು ಬಾಧಿಸುತ್ತಿದೆ.

ರಾಜ್ಯದ ನಾನಾ ಆಸ್ಪತ್ರೆಗಳಲ್ಲಿ "ಅಡೆನೊ ವೈರಸ್​'ನಿಂದ ಚಿಕಿತ್ಸೆ ಪಡೆಯುತ್ತಿರುವವರಲ್ಲಿ ಮಕ್ಕಳ ಸಂಖ್ಯೆ ಹೆಚ್ಚಿದೆ. ಬೆಂಗಳೂರಿನ ಇಂದಿರಾಗಾಂಧಿ ಮಕ್ಕಳ ಆಸ್ಪತ್ರೆ ಒಂದರಲ್ಲೇ ನಾನಾ ಸಮಸ್ಯೆಯಿಂದ ಚಿಕಿತ್ಸೆ ದಾಖಲಾಗಿರುವ ಮಕ್ಕಳಲ್ಲಿ ಶೇ.20 ಮಕ್ಕಳು ಅಡೆನೋ ವೈರಸ್​ ಸೋಂಕಿಗೆ ಒಳಗಾದವರಿದ್ದಾರೆ.

ಇದು ಸೌಮ್ಯದಿಂದ ತೀವ್ರತರವಾದ ಹಂತ ತಲುಪುವ ಒಬ್ಬರಿಂದ ಒಬ್ಬರಿಗೆ ಹರಡುವ ರೋಗ. ರೋಗನಿರೋಧಕ ಶಕ್ತಿ ಕಡಿಮೆ ಇರುವವರು,ಅಸ್ತಮಾ ಸೇರಿ ಉಸಿರಾಟದ ಸಮಸ್ಯೆ ಇರುವವರು ಹಾಗೂ ಹೃದಯ ಸಂಬಂಧಿ ಕಾಯಿಲೆ ಹೊಂದಿರುವವರು ಅಡೆನೊ ವೈರಸ್​ ಸೋಂಕಿಗೆ ಒಳಗಾದಲ್ಲಿ ಅಂತಹರಲ್ಲಿ ಕಾಯಿಲೆ ಹೆಚ್ಚು ಗಂಭೀರವಾಗಬಹುದು.

ಸೋಂಕು ಹೇಗೆ ಹರಡುತ್ತದೆ?: ಇದು ಹೆಚ್ಚು ಮಕ್ಕಳಲ್ಲಿ ಕಂಡುಬರಲಿದ್ದು, ಡೇ ಕೇರ್​ ಸೆಂಟರ್​ಗಳು, ಶಾಲೆಗಳಲ್ಲಿ ಮಕ್ಕಳು ಗುಂಪಾಗಿ ಸೇರುವ ಕಡೆ ಈ ವೈರಸ್​ ಸಾಮಾನ್ಯವಾಗಿ ಹರಡಲಿದೆ. ಅಂದರೆ ಸೋಂಕಿತ ವ್ಯಕ್ತಿ ಕೆಮ್ಮಿದಾಗ ಅಥವಾ ಸೀನಿದಾಗ ವೈರಸ್​ ಹನಿಗಳು ಗಾಳಿಯಲ್ಲಿ ಹಾರಿ ಇತರರಿಗೆ ಹರಡುತ್ತವೆ. ಇಲ್ಲವೆ ಆ ಹನಿ ಯಾವುದೇ ವಸ್ತುವಿನ ಮೇಲೆ ಬಿದ್ದಿದ್ದು, ಅದನ್ನು ಮುಟ್ಟಿದವರು ಅದೇ ಕೈಗಳಿಂದ ಮುಖ, ಕಣ್ಣು, ಮೂಗು, ಬಾಯಿ ಮುಟ್ಟಿಕೊಂಡಾಗ ವೈರಸ್​ ಸಲುಭವಾಗಿ ಹರಡುತ್ತದೆ.

ಆರೈಕೆ ಹೇಗೆ?: ಅಡೆನೋ ವೈರಸ್​ ಸೋಂಕಿಗೆ ಒಳಗಾದವರಲ್ಲಿ ಜ್ವರದ ಜತೆಗೆ ವಾಂತಿ ಮತ್ತು ಅತಿಸಾರ ಕಾಣಿಸಿಕೊಳ್ಳುವುದರಿಂದ ದೇಹ ರ್ನಿಜಲೀಕರಣಗೊಳ್ಳಲಿದೆ. ಹಾಗಾಗಿ ಸಾಕಷ್ಟು ದ್ರವಾಹಾರ (ನೀರು, ಹಣ್ನಿನ ರಸ) ನೀಡಬೇಕು. ಶೀತ ಕಾಣಿಸಿಕೊಳ್ಳುವುದರಿಂದ ವೈದ್ಯರ ಸಲಹೆಯಂತೆ ಮೂಗಿಗೆ ಸಲೈನ್​ ಸೆ ಹನಿಗಳನ್ನು ಹಾಕಿ. ಇದರಿಂದ ಉಸಿರಾಟ ಸುಗಮವಾಗಲಿದೆ. ವೈಯಕ್ತಿಕ ಸ್ವಚ್ಛತೆಗೆ ಆದ್ಯತೆ ನೀಡಬೇಕು. ಬಿಸಿ ಹಾಗೂ ತಾಜಾ ಆಹಾರ ನೀಡಬೇಕು. ವೈದ್ಯರ ಸಲಹೆ ಇಲ್ಲದೆ ಯಾವುದೇ ಔಷಧ ನೀಡಬಾರದು.

ಅಡೆನೊ ವೈರಸ್​ನೊಂದಿಗೆ ಇನ್​ಫ್ಲುಯೆಂಜಾ, ರೆಸ್ಪಿರೇಟರಿ ಸೆನ್ಸಿಟಿಯಲ್​ ವೈರಸ್​, ಡೆಂ ಪ್ರಕರಣಗಳೂ ವರದಿಯಾಗುತ್ತಿವೆ. ಗಂಭೀರ ಸ್ಥಿತಿಯಲ್ಲಿರುವ ಮಕ್ಕಳನ್ನು ದಾಖಲಿಸಿಕೊಂಡು ಚಿಕಿತ್ಸೆ ನೀಡಲಾಗುತ್ತಿದೆ. | ಡಾ. ನಿಜಗುಣ ಮಕ್ಕಳ ತಜ್ಞರು, ಇಂದಿರಾಗಾಂಧಿ ಮಕ್ಕಳ ಆಸ್ಪತ್ರೆ, ಬೆಂಗಳೂರು ಅಡೆನೊ ವೈರಸ್​ ಸೇರಿ ವರದಿಯಾಗುತ್ತಿರುವ ಸಾಂಕ್ರಾಮಿಕ ರೋಗಗಳಿಗೆ ನಿಖರ ಚಿಕಿತ್ಸೆ ಇಲ್ಲ. ಹಾಗಾಗಿ ರೋಗ ಲಕ್ಷಣ ಆಧರಿಸಿ ಚಿಕಿತ್ಸೆ ನೀಡಲಾಗುತ್ತಿದೆ. ದೊಡ್ಡವರಿಗಿಂತ ಮಕ್ಕಳು ಹೆಚ್ಚು ಸೋಂಕಿಗೆ ಒಳಗಾಗುತ್ತಿದ್ದಾರೆ. | ಡಾ. ಲಕ್ಷ್ಮೀಪತಿ, ಮಕ್ಕಳ ತಜ್ಞರು, ಕೆ.ಸಿ.ಜನರಲ್​ ಆಸ್ಪತ್ರೆ, ಬೆಂಗಳೂರು

ಎಚ್ಚರಿಕೆ ಕ್ರಮಗಳು

ಡೆಂಘಿ ಪ್ರಕರಣಗಳು ಹೆಚ್ಚಳ: ಬೆಂಗಳೂರು ಸೇರಿ ರಾಜ್ಯಾದ್ಯಂತ ಡೆಂಘಿ ಪ್ರಕರಣಗಳು ಹೆಚ್ಚಾಗುತ್ತಿವೆ. ಕಳೆದೊಂದು ತಿಂಗಳಲ್ಲಿ ರಾಜ್ಯದಲ್ಲಿ 1,870 ಡೆಂಘಿ ಪ್ರಕರಣಗಳು ವರದಿಯಾಗಿದ್ದು, ಇದರೊಂದಿಗೆ ಒಟ್ಟು ಪ್ರಕರಣಗಳ ಸಂಖ್ಯೆ 6,679ಕ್ಕೆ ಏರಿಕೆಯಾಗಿದೆ.

  • ಅಡೆನೊ ವೈರಸ್​ ನಿಯಂತ್ರಣಕ್ಕೂ ಕೋವಿಡ್​ ನಿಯಮ ಪಾಲಿಸಬೇಕು
  • ಸೋಂಕಿತರಿಂದ ರಕ್ಷಿಸಿಕೊಳ್ಳಲು ಮಾಸ್ಕ್​ ಧರಿಸಬೇಕು
  • ಕೈಗಳನ್ನು ಆಗಾಗ್ಗೆ ಸಾಬೂನು ಇಲ್ಲವೆ ಸ್ಯಾನಿಟೈಸರ್​ನಿಂದ ಸ್ವಚ್ಚಗೊಳಿಸಬೇಕು
  • ಸೀನು/ಕೆಮ್ಮುವಾಗ ಮುಖವನ್ನು ಕರವಸ್ತ್ರದಿಂದ ಮುಚ್ಚಿಕೊಳ್ಳಬೇಕು
  • ಸೋಂಕಿತರು ಸಂಪೂರ್ಣ ಗುಣಹೊಂದುವವರೆಗೂ ಮನೆಯಲ್ಲಿರಬೇಕು
  • ಸೋಂಕು ಲಕ್ಷಣ ಕಂಡುಬಂದ ಕೂಡಲೇ ವೈದ್ಯರಲ್ಲಿ ಚಿಕಿತ್ಸೆ ಪಡೆಯಬೇಕು
  • ಶುದ್ಧೀಕರಿಸಿ ಕಾಯಿಸಿ ಆರಿಸಿದ ನೀರು, ತಾಜಾ ಆಹಾರ ಸೇವಿಸಬೇಕು

ರೋಗ ಲಕ್ಷಣಗಳು: ಅಡೆನೊ ವೈರಸ್​ ಕಣ್ಣುಗಳು, ಶ್ವಾಸಕೋಶ, ಕರುಳು, ಮೂತ್ರನಾಳ ಮತ್ತು ನರಮಂಡಲದ ಒಳಪದವರನ್ನು ಸೋಂಕಿಗೆ ಒಳಪಡಿಸುವ ಸಾಮಾನ್ಯ ವೈರಸ್​ನ ಗುಂಪು. ಸಾಮಾನ್ಯ ಶೀತ ಅಥವಾ ಜ್ವರ ಆರಂಭಿಕ ಲಕ್ಷಣವಾಗಿದ್ದು, ಗಂಟಲು ಕೆರತ ಮತ್ತು ನೋವು, ಬ್ರಾಂಕೈಟಿಸ್​ (ಶ್ವಾಸಕೋಶದಲ್ಲಿನ ಶ್ವಾಸನಾಳದ ಉರಿಯೂತ), ನ್ಯುಮೋನಿಯಾ (ಶ್ವಾಸಕೋಶದ ಸೋಂಕು), ಗುಲಾಬಿ ಕಣ್ಣು (ಕಾಂಜಂಕ್ವಿವಿಟಿಸ್​) ತೀವ್ರವಾದ ಗ್ಯಾಸ್ಟ್ರೊ ಎಂಟರೈಟಿಸ್​ (ಅತಿಸಾರ, ವಾಂತಿ, ವಾಕರಿಕೆ ಮತ್ತು ಹೊಟ್ಟೆ ನೋವು) ಅಡೆನೊ ವೈರಸ್​ನ ಸಾಮಾನ್ಯ ಲಕ್ಷಣವಾಗಿದೆ. ಈ ಸೋಂಕಿತರಲ್ಲಿ ಒಣಕೆಮ್ಮು ಹೆಚ್ಚಿದ್ದು, ಔಷಧ ಸೇವಿಸಿದರೂ ದೀರ್ಕಾಲ ಕೆಮ್ಮು ಕಡಿಮೆ ಆಗದೆ ಗಂಟಲಿನಲ್ಲಿ ಹುಣ್ಣಿ(ಅಲ್ಸರ್​)ಗೆ ಕಾರಣವಾಗುತ್ತದೆ. ಕೆಲವೊಮ್ಮೆ ಗಂಭೀರ ಹಂತದಲ್ಲಿ ಮಿದುಳು ಮತ್ತು ಬೆನ್ನುಹುರಿ ಮೇಲೆ ಪರಿಣಾಮ ಬೀರಲಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net