

ಬೆಂಗಳೂರು: ಯಾವುದೇ ಬಸ್ನಲ್ಲೂ ಚಿಲ್ಲರೆ ಸಮಸ್ಯೆ ಮಾತ್ರ ತಪ್ಪಿದ್ದಲ್ಲ. ಚಿಲ್ಲರೆ ಕೊಡಿ ಎಂಬ ಕಂಡಕ್ಟರ್ ಬೇಡಿಕೆಯನ್ನು ಪ್ರಯಾಣಿಕರಲ್ಲಿ ಕೆಲವರಾದರೂ ಎದುರಿಸಬೇಕಾಗುತ್ತದೆ. ಹಲವು ವರ್ಷಗಳಿಂದ ಕಾಡುತ್ತಲೇ ಇರುವ ಈ ಸಮಸ್ಯೆಗೆ ಇದೀಗ ಕಂಡಕ್ಟರ್ ಕೊರಳಲ್ಲೇ ಪರಿಹಾರ ಕಲ್ಪಿಸಲಾಗಿದೆ.
ವಾಯವ್ಯ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆಯ ಆಯ್ದ ಕೆಲವು ಬಸ್ಗಳಲ್ಲಿ ಚಿಲ್ಲರೆ ಸಮಸ್ಯೆಗೆ ಈ ಪರಿಹಾರ ಒದಗಿಸಲಾಗಿದೆ. ಅಂದರೆ ಆ ಬಸ್ನ ಕಂಡಕ್ಟರ್ಗೆ ಖಾತೆಯ ಕ್ಯೂರ್ ಕೋಡ್ ಕೊಟ್ಟು ಅದನ್ನು ಕೊರಳಿಗೆ ನೇತು ಹಾಕಿಕೊಂಡಿರಲು ಇಲಾಖೆ ಸೂಚಿಸಿದೆ. ಚಿಲ್ಲರೆ ಇರದ ಪ್ರಯಾಣಿಕರು ಈ ಕ್ಯೂರ್ ಕೋಡ್ ಸ್ಕ್ಯಾನ್ ಮಾಡಿ ಪಾವತಿಸಿ ಟಿಕೆಟ್ ಖರೀದಿಸಬಹುದು. ಈ ವ್ಯವಸ್ಥೆಯನ್ನು ಪ್ರಾಯೋಗಿಕವಾಗಿ ಜಾರಿಗೆ ತರಲಾಗಿದ್ದು, ಜನರಿಂದ ಉತ್ತಮ ಪ್ರತಿಕ್ರಿಯೆ ಲಭಿಸಿದರೆ ಇದು ಎಲ್ಲೆಡೆ ಜಾರಿಗೆ ಬರುವ ಸಾಧ್ಯತೆ ಇದೆ.
ಅಂದಹಾಗೆ, ಸಾರಿಗೆ ಸಂಸ್ಥೆ ಇಂಥದ್ದೊಂದು ವ್ಯವಸ್ಥೆ ಮಾಡಿದ್ದರೂ ಇದು ತಡವೇ ಎನ್ನಬಹುದು. ಏಕೆಂದರೆ ಚಿಲ್ಲರೆ ಸಮಸ್ಯೆಯಿಂದ ಬೇಸತ್ತ ಪ್ರಯಾಣಿಕರು ಕ್ಯೂರ್ ಕೋಡ್ ಸಿಸ್ಟಂ ತನ್ನಿ ಎಂದು ಎರಡು ವರ್ಷಗಳ ಹಿಂದಿನಿಂದಲೇ ಬೇಡಿಕೆ ಇಡುತ್ತ ಬಂದಿದ್ದರು. ಬಿಎಂಟಿಸಿ ಬಸ್ನಲ್ಲಿ ಚಿಲ್ಲರೆ ಸಮಸ್ಯೆ ತಪ್ಪಿಸಲು ಏಕೆ ಕ್ಯೂರ್ ಕೋಡ್ ವ್ಯವಸ್ಥೆ ಕಲ್ಪಿಸಬಾರದು ಎಂದು ಪ್ರಯಾಣಿಕರೊಬ್ಬರು 2021ರಲ್ಲೇ ಕೇಳಿದ್ದರು. ಕಡೆಗೂ ಅದು ವಾಯವ್ಯ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆ ಮೂಲಕ ಜಾರಿಗೆ ಬಂದಿದೆ.