ಚಂದ್ರಯಾನ-3ರ ಯಶಸ್ಸಿನ ಹಿಂದಿತ್ತು ಮಸಾಲೆ ದೋಸೆ ಮತ್ತು ಕಾಫಿಯ ಮಹತ್ವದ ಪಾತ್ರ!

Chandrayaan 3 MD Coffee
Published on

ನವದೆಹಲಿ: ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ (ಇಸ್ರೋ) ಕೈಗೊಂಡಿದ್ದ ಮಹತ್ವಾಕಾಂಕ್ಷೆಯ ಯೋಜನೆ ಚಂದ್ರಯಾನ-3 ಸಾಫ್ಟ್​ ಲ್ಯಾಂಡಿಂಗ್​ ಮೂಲಕ ಯಶಸ್ವಿ ಆಗಿರುವುದು ಈಗ ಹಳೆಯ ವಿಚಾರ. ಏಕೆಂದರೆ ಇಂದು ಅದೇ ಇಸ್ರೋ ಸೂರ್ಯಯಾನ ಕೈಗೊಂಡಿದ್ದು, ಆದಿತ್ಯ ಎಲ್​-1 ಬಾಹ್ಯಾಕಾಶ ನೌಕೆಯನ್ನೂ ಯಶಸ್ವಿಯಾಗಿ ಉಡಾವಣೆ ಮಾಡಿದೆ.

ಅದಾಗ್ಯೂ ಇಸ್ರೋದ ಚಂದ್ರಯಾನ-3ರ ಯಶಸ್ಸಿನ ವಿಚಾರ ಈಗ ಮುನ್ನೆಲೆಗೆ ಬರುವುದಕ್ಕೂ ಮುಖ್ಯವಾದ ಕಾರಣವೊಂದಿದೆ. ಏಕೆಂದರೆ ಚಂದ್ರಯಾನ-3ರ ಯಶಸ್ಸಿನ ಹಿಂದೆ ಎರಡು ಸಂಗತಿಗಳು ಪ್ರಮುಖ ಪಾತ್ರ ವಹಿಸಿವೆಯಂತೆ. ಇಂಥದ್ದೊಂದು ವಿಚಾರವನ್ನು ಇಸ್ರೋ ವಿಜ್ಞಾನಿಯೊಬ್ಬರೇ ಬಹಿರಂಗ ಪಡಿಸಿದ್ದಾರೆ.

ಇಸ್ರೋದ ಚಂದ್ರಯಾನ-3 ಮಿಷನ್​ ಸೈಂಟಿಸ್ಟ್​ ವೆಂಕಟೇಶ್ವರ ಶರ್ಮಾ ಅವರು ಮಾಧ್ಯಮವೊಂದರಲ್ಲಿ ಸುದ್ದಿಗಾರರಿಗೆ ಪ್ರತಿಕ್ರಿಯಿಸುತ್ತ ಈ ಸಂಗತಿಯನ್ನು ತಿಳಿಸಿದ್ದಾರೆ. ಈ ಯಶಸ್ಸಿನಲ್ಲಿ ತಂಡದ ದೃಢತೆಗೆ ಕಾರಣವಾದ ಅಂಶಗಳನ್ನು ತಿಳಿಸಿ ಎಂದಾಗ ಅವರು ಈ ವಿಚಾರವನ್ನು ತಿಳಿಸಿದ್ದಾರೆ.

ನಮ್ಮ ತಂಡಕ್ಕೆ ಪ್ರತಿದಿನ ಸಂಜೆ ಐದು ಗಂಟೆಗೆ ಒಂದು ಮಸಾಲೆ ದೋಸೆ ಮತ್ತು ಒಂದು ಕಾಫಿ ಕೊಡುವ ಮೂಲಕ ನಾವು ಇದನ್ನು ಸಾಧಿಸಿದ್ದೆವು. ಇದು ತುಂಬಾ ಸಣ್ಣ ಸಂಗತಿಯಾದರೂ ಇಡೀ ತಂಡ ಇನ್ನಷ್ಟು ಕೆಲಸ ಮಾಡುವಂತೆ ಹುರಿದುಂಬಿಸುವಲ್ಲಿ ಮಹತ್ವದ ಪಾತ್ರ ವಹಿಸಿತ್ತು. ಇವೆರಡರಿಂದ ಖುಷಿಯಾದ ಎಲ್ಲರೂ ಸಂತೋಷದಿಂದ ಇನ್ನಷ್ಟು ಹೊತ್ತು ತೊಡಗಿಸಿಕೊಂಡಿದ್ದರು. ಸವಾಲಿನ ಸಮಯದಲ್ಲಿ ಇವೆರಡೂ ಸಹಾಯಕ್ಕೆ ಬಂದವು ಎಂದು ಅವರು ಹೇಳಿಕೊಂಡಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net