

90-Hour Work: ಅಂದು ದೇಶದ ವರ್ಕ್ ಕಲ್ಚರ್ ಬದಲಾಗಬೇಕು, ಯುವಜನತೆ ವಾರಕ್ಕೆ 70 ಗಂಟೆಗಳ ಕಾಲ ಕೆಲಸ ಮಾಡಬೇಕು ಎಂದಿದ್ದ ಇನ್ಫೊಸಿಸ್ನ ನಾರಾಯಣಮೂರ್ತಿ ಹೇಳಿಕೆ ಭಾರತದಲ್ಲಿ ಭಾರಿ ಸಂಚಲನ ಹಾಗೂ ವಿವಾದ ಸೃಷ್ಟಿಸಿತು. ಇದಲ್ಲದೆ ಇದಕ್ಕೆ ಪರ-ವಿರೋಧ ಅಭಿಪ್ರಾಯಗಳ ಸುರಿಮಳೆಯೂ ಹರಿದುಬಂದಿತ್ತು. ಇಂದಿಗೂ ಈ ವಿಷಯಕ್ಕೆ ಸಂಬಂಧಿಸಿದಂತೆ ವಾದ-ವಿವಾದಗಳು ಅಲ್ಲಲ್ಲಿ ನಡೆಯುತ್ತಿವೆ. ಇದು ಮಾಸುವ ಮುನ್ನವೇ ಎಲ್ ಅಂಡ್ ಟಿ ಅಧ್ಯಕ್ಷ ( L&T Chief) ಎಸ್.ಎನ್. ಸುಬ್ರಹ್ಮಣ್ಯನ್ ನೀಡಿದ 90 ಗಂಟೆಗಳ ಕೆಲಸ ಸದ್ಯ ಉದ್ಯೋಗಿಗಳನ್ನು ಮತ್ತಷ್ಟು ಕೆರಳಿಸಿದೆ.
"ನೀವು ಎಷ್ಟು ಹೊತ್ತು ನಿಮ್ಮ ಹೆಂಡತಿಯ ಮುಖ ನೋಡಲು ಸಾಧ್ಯ? ಉದ್ಯೋಗಿಗಳು ಮನೆಯಲ್ಲಿ ಕಡಿಮೆ ಸಮಯ ಕಳೆಯಬೇಕು ಮತ್ತು ಕೆಲಸಕ್ಕೆ ಹೆಚ್ಚು ಆದ್ಯತೆ ನೀಡಬೇಕು. ಭಾನುವಾರಗಳನ್ನು ಕೆಲಸದ ದಿನಗಳೆಂದು ಕಡ್ಡಾಯಗೊಳಿಸಲು ಸಾಧ್ಯವಿಲ್ಲ. ಆದ್ರೆ, ಉದ್ಯೋಗಿಗಳು ಭಾನುವಾರವೂ ಕರ್ತವ್ಯಕ್ಕೆ ಹಾಜರಾದರೆ ನನಗೆ ಅದಕ್ಕಿಂತ ಸಂತೋಷ ಮತ್ತೊಂದಿಲ್ಲ” ಎಂದು ಸುಬ್ರಹ್ಮಣ್ಯನ್ ಹೇಳಿಕೆ ನೀಡಿದ್ದರು. ಇದಕ್ಕೆ ದೇಶವ್ಯಾಪಿ ಅಸಮಾಧಾನ ಭುಗಿಲೆದ್ದಿದೆ. ಉದ್ಯೋಗಿಗಳು ಮಾತ್ರವಲ್ಲದೇ, ಇತರೆ ದೊಡ್ಡ ದೊಡ್ಡ ಸಂಸ್ಥೆಗಳ ಸಿಇಓ, ಅಧ್ಯಕ್ಷರು ಇದಕ್ಕೆ ಪ್ರತಿಕ್ರಿಯಿಸಿದ್ದಾರೆ.
90 ಗಂಟೆ ಕೆಲಸ ವಿಚಾರಕ್ಕೆ ಪ್ರತಿಕ್ರಿಯಿಸಿದ ಸೀರಮ್ ಇನ್‌ಸ್ಟಿಟ್ಯೂಟ್ ಆಫ್ ಇಂಡಿಯಾದ ಸಿಇಒ ಆದರ್ ಪೂನವಾಲ್ಲಾ, "ವರ್ಕ್ ಲೈಫ್ ಬ್ಯಾಲೆನ್ಸ್ ಬಹಳ ಮುಖ್ಯ. ನನ್ನ ಹೆಂಡತಿ ನಾನು ಸುಂದರ ಎಂದು ಭಾವಿಸಿದ್ದಾಳೆ. ಭಾನುವಾರದಂದು ನನ್ನನ್ನು ದಿಟ್ಟಿಸಿ ನೋಡುವುದನ್ನು ಇಷ್ಟಪಡುತ್ತಾಳೆ" ಎಂದು ಸುಬ್ರಹ್ಮಣ್ಯನ್ ಅವರ 'ಎಷ್ಟು ಹೊತ್ತು ಅಂತ ಹೆಂಡತಿ ಮುಖವನ್ನೇ ನೋಡಲು ಸಾಧ್ಯ' ಹೇಳಿಕೆಯನ್ನು ಟೀಕಿಸಿದ್ದಾರೆ. ಮಹೀಂದ್ರಾ ಗ್ರೂಪ್ ಅಧ್ಯಕ್ಷರಾದ ಆನಂದ್ ಮಹೀಂದ್ರಾ ಅವರ ಟೀಕೆಯ ಬೆನ್ನಲ್ಲೇ ತಮ್ಮ ಅನಿಸಿಕೆಯನ್ನು ಆದರ್ ಜಾಲತಾಣದಲ್ಲಿ ವ್ಯಕ್ತಪಡಿಸಿದ್ದಾರೆ,(ಏಜೆನ್ಸೀಸ್).