

90-Hour Work: ಅಂದು ದೇಶದ ವರ್ಕ್ ಕಲ್ಚರ್ ಬದಲಾಗಬೇಕು, ಯುವಜನತೆ ವಾರಕ್ಕೆ 70 ಗಂಟೆಗಳ ಕಾಲ ಕೆಲಸ ಮಾಡಬೇಕು ಎಂದು ಇನ್ಫೊಸಿಸ್ನ ನಾರಾಯಣಮೂರ್ತಿ ಅವರು ನೀಡಿದ್ದ ಹೇಳಿಕೆ ಭಾರತದಲ್ಲಿ ಭಾರಿ ಸಂಚಲನ ಮೂಡಿಸಿತ್ತು. ಇದಲ್ಲದೆ ಇದಕ್ಕೆ ಪರ-ವಿರೋಧ ಅಭಿಪ್ರಾಯಗಳ ಸುರಿಮಳೆಯೇ ಹರಿದುಬಂದಿತ್ತು. ಇಂದಿಗೂ ಈ ವಿಷಯಕ್ಕೆ ಸಂಬಂಧಿಸಿದಂತೆ ವಾದ-ವಿವಾದಗಳು ನಡೆಯುತ್ತಿದ್ದು, ಇದರ ಮಧ್ಯೆಯೇ ಮತ್ತೊಬ್ಬರ ಹೇಳಿಕೆ ಸದ್ಯ ಜಾಲತಾಣಗಳಲ್ಲಿ ಅನೇಕ ಉದ್ಯೋಗಿಗಳ ಕೆಂಗಣಿಗೆ ಗುರಿಯಾಗಿದೆ.
ಕೆಲಸ-ಜೀವನ ಸಮತೋಲನದ ಕುರಿತ ಚರ್ಚೆಯಲ್ಲಿ ಭಾಗವಹಿಸಿ ಮಾತನಾಡಿದ ಎಲ್ ಅಂಡ್ ಟಿ ಅಧ್ಯಕ್ಷ ಎಸ್.ಎನ್. ಸುಬ್ರಹ್ಮಣ್ಯನ್, ನಾರಾಯಣಮೂರ್ತಿ ಅವರ ಹೇಳಿಕೆಗಿಂತ ಒಂದೆರೆಡು ಹೆಜ್ಜೆ ಮುಂದೋಗಿ, ನೌಕರರು ವಾರಕ್ಕೆ 90 ಗಂಟೆಗಳ ಕಾಲ ಕೆಲಸ ಮಾಡಬೇಕೆಂದು ಒತ್ತಾಯಿಸಿದ್ದಾರೆ. ವಾರ ಪೂರ ಕೆಲಸದಲ್ಲಿ ತಮ್ಮನ್ನು ತಾವು ತೊಡಗಿಸಿಕೊಳ್ಳುವ ಮೂಲಕ ಉನ್ನತ ಹುದ್ದೆಗೆ ಶ್ರಮಿಸಬೇಕು. ಇಲ್ಲಿ ಭಾನುವಾರಗಳನ್ನು ಲೆಕ್ಕಕ್ಕೆ ತೆಗೆದುಕೊಳ್ಳದೆ ಕೆಲಸ ಮಾಡುವುದು ಒಳಿತು ಎಂದು ಪ್ರತಿಪಾದಿಸಿರುವುದು ಸದ್ಯ ಹೊಸ ವಿವಾದಕ್ಕೆ ಕಾರಣವಾಗಿದೆ.
ಎಲ್ ಅಂಡ್ ಟಿ ಸಂಸ್ಥೆಯ ಆರು ದಿನಗಳ ಕೆಲಸದ ವಾರದ ನೀತಿಗೆ ಸಂಬಂಧಿಸಿದಂತೆ ನೌಕರರೊಂದಿಗಿನ ಸಂವಾದದ ಸಂದರ್ಭದಲ್ಲಿ ಎಸ್.ಎನ್. ಸುಬ್ರಹ್ಮಣ್ಯನ್ ಅವರಿಂದ ಹೊರಬಂದ ಮಾತುಗಳಿವು. "ನೀವು ಎಷ್ಟು ಹೊತ್ತು ನಿಮ್ಮ ಹೆಂಡತಿ ಜತೆಗೆ ಇರಲು ಸಾಧ್ಯ? ಉದ್ಯೋಗಿಗಳು ಮನೆಯಲ್ಲಿ ಕಡಿಮೆ ಸಮಯ ಕಳೆಯಬೇಕು ಮತ್ತು ಕೆಲಸಕ್ಕೆ ಹೆಚ್ಚು ಆದ್ಯತೆ ನೀಡಬೇಕು ಎಂದರು. ನೌಕರರು ಶನಿವಾರದಂದು ಕೆಲಸ ಮಾಡಬೇಕಾಗಿರುವುದು ಏಕೆ ಎಂದು ಉಲ್ಲೇಖಿಸಿದ ಸುಬ್ರಹ್ಮಣ್ಯನ್, ಭಾನುವಾರಗಳನ್ನು ಕೆಲಸದ ದಿನಗಳೆಂದು ಕಡ್ಡಾಯಗೊಳಿಸಲು ಸಾಧ್ಯವಿಲ್ಲ. ಆದ್ರೆ, ನೀವೆಲ್ಲರೂ ಭಾನುವಾರವೂ ಕರ್ತವ್ಯಕ್ಕೆ ಹಾಜರಾದರೆ ನನಗೆ ಅದಕ್ಕಿಂತ ಸಂತೋಷ ಮತ್ತೊಂದಿಲ್ಲ" ಎಂದಿದ್ದಾರೆ.
ಭಾನುವಾರ ನೀವು ಬನ್ನಿ, ಕೆಲಸ ಮಾಡಿ ಎಂದು ನಾನೇಳಲು ಕಷ್ಟಸಾಧ್ಯ. ಆದರೆ, ನೀವೆಲ್ಲರೂ ಭಾನುವಾರ ಬಂದರೆ ಖಂಡಿತ ಖುಷಿ ಪಡ್ತೀನಿ. ಏಕೆಂದರೆ, ನಾನು ಭಾನುವಾರವೂ ಸಹ ಕರ್ತವ್ಯದಲ್ಲಿರುತ್ತೇನೆ ಎಂದು ಹೇಳಿದ್ದಾರೆ. ಈಗಾಗಲೇ ಮೂರ್ತಿ ಅವರ 70 ಗಂಟೆಗಳ ಹೇಳಿಕೆಗೆ ದೇಶಾದ್ಯಂತ ಉದ್ಯೋಗಿಗಳು ಕಿಡಿಕಾರಿದ್ದಾರೆ. ಈಗ ಸುಬ್ರಹ್ಮಣ್ಯನ್ ಕೊಟ್ಟಿರುವ ಹೇಳಿಕೆಯು ಕೆಲಸ-ಜೀವನ ಸಮತೋಲನ ಕುರಿತಾದ ಚರ್ಚೆಗೆ ಇಂಧನ ತುಂಬಿಸಿದೆ. ಅಂದು ಇನ್ಫೋಸಿಸ್ ಸಂಸ್ಥಾಪಕರ ನುಡಿ ಉದ್ಯೋಗಿಗಳಲ್ಲಿ ಭಾರೀ ಕಿಡಿ ಹಚ್ಚಿತ್ತು. ಈಗ ಸುಬ್ರಹ್ಮಣ್ಯನ್ ಹೇಳಿಕೆಗಳು ಅದನ್ನು ಇನ್ನೊಂದು ಹಂತಕ್ಕೆ ಕೊಂಡೊಯ್ದಿದೆ ಎಂಬುದರಲ್ಲಿ ಸಂಶಯವಿಲ್ಲ,(ಏಜೆನ್ಸೀಸ್).