ಅದಾನಿ ಕಂಪನಿಯ ತ್ರೈಮಾಸಿಕ ಲಾಭ 71% ಹೆಚ್ಚಳ: ಷೇರು ಬೆಲೆ ತೀವ್ರ ಏರಿಕೆಯಾಗಲಿದೆ ಎನ್ನುತ್ತಾರೆ ತಜ್ಞರು

adani-12
Published on

ಮುಂಬೈ: ಗೌತಮ್ ಅದಾನಿ ಸಮೂಹದ ಕಂಪನಿಯಾದ ಅದಾನಿ ಟೋಟಲ್ ಗ್ಯಾಸ್ ಲಿಮಿಟೆಡ್​ನ (Adani Total Gas Ltd.) 2024ರ ಮಾರ್ಚ್ ತ್ರೈಮಾಸಿಕ ಫಲಿತಾಂಶ ಬಿಡುಗಡೆಯಾಗಿದೆ. ಈ ತ್ರೈಮಾಸಿಕದಲ್ಲಿ ಕಂಪನಿಯ ನಿವ್ವಳ ಲಾಭವು 71.6% ರಷ್ಟು ಹೆಚ್ಚಾಗಿದೆ.

ಮಾರ್ಚ್ 2023ರ ತ್ರೈಮಾಸಿಕದಲ್ಲಿನ ರೂ 97.9 ಕೋಟಿಗೆ ಹೋಲಿಸಿದರೆ ಮಾರ್ಚ್ 2024 ತ್ರೈಮಾಸಿಕದಲ್ಲಿ ಲಾಭವು ರೂ 168 ಕೋಟಿಗೆ ಹೆಚ್ಚಿದೆ. ಇದೇ ಸಮಯದಲ್ಲಿ, ಆದಾಯವು 4.7% ರಷ್ಟು ಏರಿಕೆಯಾಗಿ 1167 ಕೋಟಿ ರೂ.ಗೆ ತಲುಪಿದೆ. ಇದು ಮಾರ್ಚ್ 2023 ತ್ರೈಮಾಸಿಕದಲ್ಲಿನ 1114.8 ಕೋಟಿ ರೂ. ಇತ್ತು.

ಹಣಕಾಸು ವರ್ಷ 2022-23 ರ ನಾಲ್ಕನೇ ತ್ರೈಮಾಸಿಕದಲ್ಲಿ 0.89 ರಷ್ಟಿದ್ದ ಕಂಪನಿಯ ಪ್ರತಿ ಷೇರಿನ ಗಳಿಕೆಯು FY 2023-24 ರ ನಾಲ್ಕನೇ ತ್ರೈಮಾಸಿಕದಲ್ಲಿ 1.53 ರೂ.ಗೆ ಏರಿದೆ.

ಅದಾನಿ ಟೋಟಲ್ ಗ್ಯಾಸ್‌ನ ನಿರ್ದೇಶಕರ ಮಂಡಳಿಯು ರೂ 1 ರ ಲಾಭಾಂಶವನ್ನು ಶಿಫಾರಸು ಮಾಡಲು ನಿರ್ಧರಿಸಿದೆ. ಲಾಭಾಂಶಕ್ಕಾಗಿ ಸದಸ್ಯರ ಅರ್ಹತೆಯನ್ನು ನಿರ್ಧರಿಸಲು ಕಂಪನಿಯು ದಾಖಲೆ ದಿನಾಂಕವನ್ನು ಪ್ರಕಟಿಸಿದೆ. ಷೇರು ವಿನಿಮಯ ಕೇಂದ್ರಕ್ಕೆ ನೀಡಿದ ಮಾಹಿತಿಯಲ್ಲಿ ಕಂಪನಿಯು ಲಾಭಾಂಶದ ದಾಖಲೆ ದಿನಾಂಕವನ್ನು ಜೂನ್ 14, 2024 ಎಂದು ತಿಳಿಸಿದೆ.

ಮಂಗಳವಾರ ಷೇರು ಮಾರುಕಟ್ಟೆ ಮುಕ್ತಾಯದ ನಂತರ ಅದಾನಿ ಟೋಟಲ್ ಗ್ಯಾಸ್‌ನ ತ್ರೈಮಾಸಿಕ ಫಲಿತಾಂಶಗಳನ್ನು ಬಿಡುಗಡೆ ಮಾಡಲಾಗಿದೆ. ಈ ಕಂಪನಿಯ ಷೇರುಗಳ ಬೆಲೆ ಹಿಂದಿನ ಮುಕ್ತಾಯದ ಮಟ್ಟವಾದ ರೂ 919.10 ರಿಂದ 1.09% ಏರಿಕೆಯಾಗಿ ರೂ 929.10 ಕ್ಕೆ ತಲುಪಿದೆ. ವಹಿವಾಟಿನ ವೇಳೆ ಈ ಷೇರಿನ ಬೆಲೆ 947.65 ರೂ.ಗೆ ತಲುಪಿತ್ತು. ಕಂಪನಿಯ ಮಾರುಕಟ್ಟೆ ಮೌಲ್ಯ 1.02 ಲಕ್ಷ ಕೋಟಿ ರೂ.ಗೆ ಏರಿಕೆಯಾಗಿದೆ.

ಅದಾನಿ ಟೋಟಲ್ ಗ್ಯಾಸ್ ಷೇರುಗಳು ಈ ವರ್ಷ ಒತ್ತಡದಲ್ಲಿ ಕಾಣಿಸಿಕೊಂಡಿವೆ. ಆದರೂ, ಈ ಸ್ಟಾಕ್ ಆರು ತಿಂಗಳ ಅವಧಿಯಲ್ಲಿ ಧನಾತ್ಮಕ ಆದಾಯವನ್ನು ನೀಡಿದೆ.

ಈ ಷೇರಿನ 52 ವಾರಗಳ ಗರಿಷ್ಠ ಬೆಲೆ ರೂ 1,259.90 ಆಗಿದೆ, ಇದು ಡಿಸೆಂಬರ್ 2023 ರಲ್ಲಿತ್ತು. ಷೇರಿನ ಬೆಲೆಯು ಅಕ್ಟೋಬರ್ 26, 2023 ರಂದು ರೂ 521.95 ರ ಕನಿಷ್ಠ ಮಟ್ಟಕ್ಕೆ ತಲುಪಿತ್ತು.

ವೆಂಚುರಾ ಸೆಕ್ಯುರಿಟೀಸ್ ಬ್ರೋಕರೇಜ್​ ಸಂಸ್ಥೆಯು ಅದಾನಿ ಟೋಟಲ್ ಗ್ಯಾಸ್ ಬೆಳವಣಿಗೆಯ ಮೇಲೆ ಧನಾತ್ಮಕವಾಗಿದೆ ಎಂದು ಟಿಪ್ಪಣಿಯಲ್ಲಿ ಹೇಳಿದೆ. 1340 ರೂ.ಗಳ ಗುರಿ ಬೆಲೆಯನ್ನು ನಿಗದಿಪಡಿಸಿ ಈ ಬ್ರೋಕರೇಜ್ ಸಂಸ್ಥೆಯು 'ಖರೀದಿ' ರೇಟಿಂಗ್ ನೀಡಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net