ಬ್ಯಾಕ್ ಟು ಬ್ಯಾಕ್ ಫ್ಲಾಪ್‌! ಕಳೆದ 3 ವರ್ಷಗಳಲ್ಲಿ ಒಂದೇ ಒಂದು ಹಿಟ್ ಚಿತ್ರವಿಲ್ಲ; ಆದ್ರೂ ಸಂಭಾವನೆ ಮಾತ್ರ....

Untitled design - 2024-02-16T122928.731
Published on

ಬೆಂಗಳೂರು: ಇಂದು ಭಾರತೀಯ ಚಿತ್ರರಂಗದಲ್ಲಿ ಸೂಪರ್ ಡೂಪರ್ ಹಿಟ್ ಸಿನಿಮಾಗಳನ್ನು ಕೊಡುವ ನಾಯಕಿಯರು ಮುಂಚೂಣಿಯಲ್ಲಿದ್ದಾರೆ. ಅಭಿನಯಿಸಿದ ಮೊದಲ ಸಿನಿಮಾಗಳು ಹಿನಾಯ ಸೋಲನ್ನು ಕಂಡರು, ಮುಂಬರುವ ಚಿತ್ರಗಳಲ್ಲಿ ಪುಟಿದೇಳುವ ಮೂಲಕ ಭರ್ಜರಿ ಕಮ್​ಬ್ಯಾಕ್ ಮಾಡುತ್ತಾರೆ. ಆದರೆ, ಈ ಸ್ಟಾರ್​ ನಟಿ ದೊಡ್ಡ ನಟರೊಂದಿಗೆ ಅಭಿನಯಿಸಿದ ಐದು ಸಿನಿಮಾಗಳು ಕೂಡ ಬ್ಯಾಕ್ ಟು ಬ್ಯಾಕ್ ಫ್ಲಾಪ್ ಕಂಡಿತು. ಸೋಲಿನ ಅಲೆಯಲ್ಲಿ ತೇಲಿದರೂ ಕೂಡ ಕೆಲವು ಫಿಲಂಗಳ ಮುಖೇನ ಮತ್ತೆ ಸಕ್ಸಸ್​ ನೋಡಿದ್ದೇ ಆದರೂ ನಿರ್ದೇಶಕರು, ನಿರ್ಮಾಪಕರು ಒಪ್ಪದ ಸಂಭಾವನೆ ಕೇಳಿದ ಕಾರಣವೋ...ಏನೋ ಚಿತ್ರಗಳ ಆಫರ್​ ಅವರಿಂದ ಕಾಣೆಯಾಗಿದೆ.

ಕಲಾವಿದರ ಸ್ಟಾರ್‌ಡಮ್ ಅನ್ನು ಬಾಕ್ಸ್ ಆಫೀಸ್ ಕಲೆಕ್ಷನ್‌ಗಳಿಂದಲೇ ಹೆಚ್ಚು ಅಳೆಯಲಾಗುತ್ತದೆ. ಒಂದು ಬಾರಿ ಗಲ್ಲಾಪೆಟ್ಟಿಗೆಯಲ್ಲಿ ನಿರೀಕ್ಷಿಸಿದ ದಾಖಲೆಯನ್ನು ಬರೆದರೆ ಮುಗಿಯಿತು, ಆ ನಟಿ ಅಥವಾ ನಟನ ಮೇಲೆ ನಿರ್ಮಾಪಕರಿಗೆ ಭಾರೀ ಭರವಸೆ ಮೂಡುತ್ತದೆ. ಇಂದು ಹೆಚ್ಚು ಪ್ರಚಲಿತದಲ್ಲಿರುವ ಪ್ಯಾನ್ ಇಂಡಿಯಾ ಎಂಬ ಪದವು ಸಾಕಷ್ಟು ಜನಪ್ರಿಯತೆಯನ್ನು ಗಳಿಸಿದೆ. 'ಬಾಹುಬಲಿ', 'ಕೆಜಿಎಫ್', 'ಸಲಾರ್' ಇಂತಹ ಅನೇಕ ಸಿನಿಮಾಗಳು ಈ ಸಾಲಿಗೆ ಸೇರುತ್ತದೆ.

ತೆಲುಗಿನಲ್ಲಿ ಮಿಂಚಿದ ನಟಿ ಬಾಲಿವುಡ್​ನಲ್ಲಿ ಮಾತ್ರ ಒಂದರ ಹಿಂದೆ ಒಂದು ಸೋಲನ್ನು ಅನುಭವಿಸಿದರು. ಹೆಚ್ಚಾಗಿ ಪ್ಯಾನ್ ಇಂಡಿಯಾ ಸಿನಿಮಾಗಳಲ್ಲಿ ನಾಯಕಿಯಾಗಿ ಕಾಣಿಸಿಕೊಂಡ ಇವರು, ಸ್ಟಾರ್​ ನಟರೊಂದಿಗೆ ಕೆಲಸ ಮಾಡಿದರು ಸಹ ಕಳೆದ ವರ್ಷಗಳಲ್ಲಿ ಅಭಿನಯದ ಚಿತ್ರಗಳೆಲ್ಲವೂ ದೊಡ್ಡ ಫ್ಲಾಪ್‌ಗಳಾಗಿವೆ. ಅಸಲಿಗೆ ನಾವು ಮಾತನಾಡುತ್ತಿರುವ ನಟಿ ಬೇರಾರೂ ಅಲ್ಲ ಟಾಲಿವುಡ್​ ಬ್ಯೂಟಿ ಪೂಜಾ ಹೆಗ್ಡೆ.

2012ರಲ್ಲಿ ತಮಿಳು ಚಲನಚಿತ್ರ 'ಮುಗಮೂಡಿ'ಯೊಂದಿಗೆ ತನ್ನ ವೃತ್ತಿಜೀವನವನ್ನು ಪ್ರಾರಂಭಿಸಿದ ಪೂಜಾ, ಈ ಚಿತ್ರ ವಾಣಿಜ್ಯ ಮಟ್ಟದಲ್ಲಿ ಹಿಟ್ ಆಗಿತ್ತು. ತದನಂತರ, ತೆಲುಗು ಚಲನಚಿತ್ರಗಳಲ್ಲಿ ಕೆಲಸ ಮಾಡಲು ಪ್ರಾರಂಭಿಸಿದ ಪೂಜಾ, 'ಓಕಾ ಲೈಲಾ ಕೋಸಂ' (2014) ಮತ್ತು 'ಮುಕುಂದ' (2014) ಚಿತ್ರಗಳಲ್ಲಿ ಯಶಸ್ಸನ್ನು ಗಳಿಸಿದರು. ತಮಿಳು ಮತ್ತು ತೆಲುಗಿನಲ್ಲಿ ತಮ್ಮದೇ ಛಾಪು ಮೂಡಿಸಿದ ಬಳಿಕ ಪೂಜಾ ಬಾಲಿವುಡ್‌ನತ್ತ ಮುಖಮಾಡಿದರು. ಪೂಜಾ ಅಶುತೋಷ್ ಗೋವಾರಿಕರ್ ಅವರ 'ಮೊಹೆಂಜೊದಾರೊ' ಚಿತ್ರದಲ್ಲಿ ಹೃತಿಕ್ ರೋಷನ್ ಜತೆಗೆ ಕಾಣಿಸಿಕೊಂಡರು. ಈ ಚಿತ್ರ 2016ರಲ್ಲಿ ರಿಲೀಸ್ ಆದರೂ ಬಾಕ್ಸ್ ಆಫೀಸ್​ನಲ್ಲಿ ಸೋಲನ್ನು ಕಂಡಿತು.

ಅಕ್ಷಯ್ ಕುಮಾರ್ ಜತೆ ಅಭಿನಯದ ಹಾಸ್ಯ ಚಿತ್ರ 'ಹೌಸ್‌ಫುಲ್ 4' (2019) ಸೂಪರ್ ಹಿಟ್ ಆಗಿತ್ತು. ಆದರೆ, ಹೌಸ್‌ಫುಲ್ 4 ಹೊರತುಪಡಿಸಿ, ಬಾಲಿವುಡ್‌ನಲ್ಲಿ ಪೂಜಾ ಯಾವುದೇ ಸೋಲೋ ಹಿಟ್‌ಗಳನ್ನು ನೋಡಲಿಲ್ಲ. ಆಕೆಯ ಮುಂದಿನ ಎರಡು ಹಿಂದಿ ಚಿತ್ರಗಳು ರಣವೀರ್ ಸಿಂಗ್ ಅಭಿನಯದ 'ಸರ್ಕಸ್' ಮತ್ತು ಸಲ್ಮಾನ್ ಖಾನ್ ಅಭಿನಯದ 'ಕಿಸಿ ಕಾ ಭಾಯ್ ಕಿಸಿ ಕಿ ಜಾನ್'. ಈ ಎರಡೂ ಸಿನಿಮಾಗಳೂ ಕೂಡ ಗಲ್ಲಾಪೆಟ್ಟಿಗೆಯಲ್ಲಿ ಸೋಲು ಅನುಭವಿಸಿತು.

ಇನ್ನು ಟಾಲಿವುಡ್​ ರೆಬೆಲ್ ಸ್ಟಾರ್​ ಪ್ರಭಾಸ್ ಜತೆಗೆ 'ರಾಧೆ ಶ್ಯಾಮ್' ಸಿನಿಮಾದಲ್ಲಿ ಕಾಣಿಸಿಕೊಂಡರು. ಈ ಸಿನಿಮಾ ಬಾಕ್ಸ್ ಆಫೀಸ್​ನಲ್ಲಿ ಹೀನಾಯ ಸೋಲನ್ನು ಅನುಭವಿಸಿತು. ಪ್ಯಾನ್-ಇಂಡಿಯಾ ಚಲನಚಿತ್ರವಾದರೂ ಕೂಡ 170 ಕೋಟಿ ರೂಪಾಯಿಗಳ ನಷ್ಟಕ್ಕೆ ತುತ್ತಾಯಿತು.

ರಾಮ್ ಚರಣ್, ಚಿರಂಜೀವಿ ಅವರ 'ಆಚಾರ್ಯ', ದಳಪತಿ ವಿಜಯ್ ಅವರ 'ಬೀಸ್ಟ್' ಕೂಡ ಕಳಪೆ ಪ್ರದರ್ಶನ ಕಂಡಿತು. ಕಳೆದ ಮೂರು ವರ್ಷಗಳಿಂದ ಪೂಜಾ ಯಾವುದೇ ಹಿಟ್ ಸಿನಿಮಾ ಕೊಟ್ಟಿಲ್ಲ. ಇದೆಲ್ಲದರ ಮಧ್ಯೆ ನಟಿಗೆ ಅವಕಾಶಗಳು ಕೂಡ ಕಡಿಮೆಯಾಗಿದ್ದು, ಇದಕ್ಕೆ ಕಾರಣ ಅವರು ಕೇಳುತ್ತಿರುವ ಭಾರೀ ಮೊತ್ತದ ಸಂಭಾವನೆ ಎಂದು ಸಿನಿ ವರದಿಗಳು ತಿಳಿಸಿವೆ.

ಒಂದು ಸಿನಿಮಾಗೆ ಪೂಜಾ ಕೇಳುತ್ತಿರುವ ಸಂಭಾವನೆ 3-4 ಕೋಟಿ ರೂ. ಎಂದು ಹೇಳಲಾಗಿದ್ದು, ಭಾರೀ ಮೊತ್ತದ ಪೇಮೆಂಟ್​ಗೆ ನಿರ್ದೇಶಕರು ಹಾಗೂ ನಿರ್ಮಾಪಕರು ಒಪ್ಪುತ್ತಿಲ್ಲ. ಈ ಕಾರಣಗಳಿಂದ ಸ್ಟಾರ್​ ನಟರ ಸಿನಿಮಾದಿಂದ ಪೂಜಾ ಅವರನ್ನು ಕೈಬಿಡಲಾಗುತ್ತಿದೆ ಎಂದು ಸಿನಿ ಮೂಲಗಳು ಮಾಹಿತಿ ನೀಡಿವೆ,(ಏಜೆನ್ಸೀಸ್).

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net