

'ಕಾಸ್ಟಿಂಗ್ ಕೌಚ್' ಎಂಬ ಪದ ಅತೀ ಹೆಚ್ಚಾಗಿ ಕೇಳಿಬಂದಿರುವುದು ಭಾರತೀಯ ಚಿತ್ರರಂಗದಲ್ಲಿಯೇ ಎಂದರೆ ಖಂಡಿತ ತಪ್ಪಾಗಲಾರದು. ಸಿನಿ ಇಂಡಸ್ಟ್ರಿಯಲ್ಲಿ ನಾನೊಬ್ಬಳು ದೊಡ್ಡ ಕಲಾವಿದೆ ಆಗಬೇಕು, ಉನ್ನತ ಮಟ್ಟದಲ್ಲಿ ಬೆಳೆಯಬೇಕು, ಪ್ರೇಕ್ಷಕರು ಗುರುತಿಸುವಂತ ಪ್ರತಿಭೆಯಾಗಿ ಹೊರಹೊಮ್ಮಬೇಕು ಎಂಬ ಅಪಾರ ಕನಸ ಹೊತ್ತು ಚಿತ್ರರಂಗಕ್ಕೆ ಕಾಲಿಡುವ ನಟಿ ಮಣಿಯರು ತಮ್ಮ ಊಹೆಗೂ ಮೀರಿದ ಘಟನೆಗಳನ್ನು ಅನುಭವಿಸಿದಾಗ ಅಥವಾ ಅದರ ಬಗ್ಗೆ ಕೇಳಿದಾಗ ಒಂದು ನಿಮಿಷ ನಿಂತಲ್ಲೇ ಕುಸಿದು ಹೋಗುತ್ತಾರೆ. ತಾವು ಕಂಡ ಕನಸುಗಳನ್ನು ನುಚ್ಚುನೂರು ಮಾಡಿಕೊಳ್ಳುತ್ತಾರೆ. ಇಂತಹ ವಿಚಾರಗಳು ಆಗಾಗ್ಗೆ ಬಣ್ಣದ ಲೋಕದಲ್ಲಿ ಕೇಳಿಬರುತ್ತಿರುತ್ತವೆ. ಸಿನಿರಂಗದಲ್ಲಿ ಅವಕಾಶ ಪಡೆಯಬೇಕು ಎಂದರೆ ಮಂಚ ಹತ್ತಲೇಬೇಕು, ಮುತ್ತು ಕೊಡಿಸಿಕೊಳ್ಳಲೇಬೇಕು ಎಂಬ ನಟಿಯರ ಆರೋಪಗಳು ನಿಜಕ್ಕೂ ಭಾರೀ ಅಚ್ಚರಿಗೆ ದೂಡುತ್ತದೆ.
ಅದರಲ್ಲೂ ಇತ್ತೀಚೆಗಷ್ಟೇ ಕೆ. ಹೇಮಾ ಸಮಿತಿ ವರದಿ ಬಿಡುಗಡೆಯಾದ ಬಳಿಕ ಅನೇಕ ಸ್ಟಾರ್ ನಟಿಯರು ತಮಗಾದ ಕಾಸ್ಟಿಂಗ್ ಕೌಚ್ ಅನುಭವಗಳ ಬಗ್ಗೆ ಮುಕ್ತವಾಗಿ ಕ್ಯಾಮರಾ ಮುಂದೆ ಮಾತನಾಡುತ್ತಿದ್ದಾರೆ. ಚಿತ್ರರಂಗದಲ್ಲಿ ಯಾರಿಂದ ತಾವು ಇಂತಹ ಕೆಟ್ಟ ಪರಿಸ್ಥಿತಿ ಎದುರಿಸಿದೆವು ಎಂಬುದನ್ನು ಎಳೆ ಎಳೆಯಾಗಿ ಬಿಚ್ಚಿಡುವ ಮೂಲಕ ಚಿತ್ರರಂಗದ ಕರಾಳ ಮುಖವನ್ನು ಬಟಾಬಯಲು ಮಾಡ್ತಿದ್ದಾರೆ. ಸದ್ಯ ಈ ಸಾಲಿಗೆ ಇದೀಗ ಮಲಯಾಳಂ ನಟಿ ಮಿನು ಮುನೀರ್ ಸೇರ್ಪಡೆಗೊಂಡಿದ್ದಾರೆ.
ಚಿತ್ರರಂಗದಲ್ಲಿ ಇಂತಹ ಘಟನೆಗಳು ನಮಗೂ ಆಗಿವೆ ಎಂಬ ಸರಣಿ ಆರೋಪಗಳ ಬೆನ್ನಲ್ಲೇ ಕೇರಳ ಚಲನಚಿತ್ರ ಅಕಾಡೆಮಿಯ ಅಧ್ಯಕ್ಷ ಸ್ಥಾನಕ್ಕೆ ಮಲಯಾಳಂ ನಿರ್ದೇಶಕ ರಂಜಿತ್ ರಾಜೀನಾಮೆ ಕೊಟ್ಟು ಹೊರನಡೆದರು. ರಂಜಿತ್ ವಿರುದ್ಧ ಬಂಗಾಳಿ ನಟಿ ಶ್ರೀಲೇಖಾ ಮಿತ್ರಾ ಮಾಡಿದ ಆರೋಪದ ಬೆನ್ನಲ್ಲೇ ಈ ಬೆಳವಣಿಗೆ ಮುನ್ನೆಲೆಗೆ ಬಂದಿತು. ಇವರ ಹಿಂದೆಯೇ ನಟಿ ರೇವತಿ ಸಂಪತ್ ಮಾಡಿದ ಕಾಸ್ಟಿಂಗ್ ಕೌಚ್ ಆರೋಪದಡಿ ನಟ ಸಿದ್ದಿಕ್ ಕೂಡ ರಾಜೀನಾಮೆ ಘೋಷಿಸಿದ್ದು, ಮಲಯಾಳಂ ಫಿಲಂ ಕಲಾವಿದರ ಸಂಘದ (ಅಮ್ಮ) ಪ್ರಧಾನ ಕಾರ್ಯದರ್ಶಿ ಸ್ಥಾನದಿಂದ ಕೆಳಗಿಳಿದಿದ್ದಾರೆ. ಸದ್ಯ ಇವರಿಬ್ಬರ ರಾಜೀನಾಮೆ ಇದೀಗ ಭಾರೀ ಅನುಮಾನಗಳಿಗೆ ಕಾರಣವಾಗಿದ್ದು, ಈಗ ಮಿನು ಅವರ ಆರೋಪವೂ ಇದಕ್ಕೆ ಪುಷ್ಟಿ ನೀಡಿದಂತಿದೆ.
ಇದನ್ನೂ ಓದಿ: ವಿಜಯವಾಣಿಯಿಂದ ಕೃಷ್ಣ ವೇಷಭೂಷಣ ಫೋಟೋ ಸ್ಪರ್ಧೆ
ರಂಜಿತ್ ಮತ್ತು ಸಿದ್ಧಿಕ್ ರಾಜೀನಾಮೆ ಬೆನ್ನಲ್ಲೇ ಸ್ಪೋಟಕ ಸತ್ಯ ಬಿಚ್ಚಿಟ್ಟ ನಟಿ ಮಿನು ಮುನೀರ್, "ನನಗೂ ಈ ಲೈಂಗಿಕ ಕಿರುಕುಳದ ಅನುಭವ ಆಗಿದೆ. ಮುಖೇಶ್, ಮಣಿಯನಪಿಳ್ಳ ರಾಜು, ಇಡವೆಲ ಬಾಬು ಮತ್ತು ಜಯಸೂರ್ಯ ಸೇರಿದಂತೆ ಒಟ್ಟು ನಾಲ್ವರಿಂದ ನಾನು ಲೈಂಗಿಕ ಕಿರುಕುಳ ಅನುಭವಿಸಿದ್ದೇನೆ. 2013ರಲ್ಲಿ ನಡೆದ ಚಿತ್ರವೊಂದರ ಚಿತ್ರೀಕರಣದಲ್ಲಿ ನಾನು ಶೌಚಾಯಲಯಕ್ಕೆ ಹೋಗಿ ಹೊರಗೆ ಬಂದ ತಕ್ಷಣ ಜಯಸೂರ್ಯ ನನ್ನನ್ನು ಬಿಗಿಯಾಗಿ ಅಪ್ಪಿಕೊಂಡು, ಕಿಸ್ ಮಾಡಿದ್ರು. ಅದೂ ನನ್ನ ಅನುಮತಿ ಇಲ್ಲದೆಯೇ" ಎಂದರು.
"ಇದರಿಂದ ನನಗೆ ಭಾರೀ ಆಘಾತವಾಯಿತು. ಆ ಘಟನೆಯಿಂದ ಹೊರಬಾರದ ನನಗೆ ನೀನು ನನ್ನ ಜತೆಯಿದ್ದರೆ, ಖಂಡಿತ ಹೆಚ್ಚೆಚ್ಚು ಅವಕಾಶ ಕೊಡಿಸುತ್ತೇನೆ ಎಂದು ದೊಡ್ಡ ಆಫರ್ ಮುಂದಿಟ್ಟರು. ಇಂತಹ ಕಹಿ ಘಟನೆಗಳನ್ನು ನಾನು ಅನುಭವಿಸಿದ್ದೇನೆ. ಅಂದು ಎಲ್ಲಿಯೂ ಹೇಳಿಕೊಳ್ಳಲಾಗದೆ ಕಣ್ಣೀರಿಟ್ಟಿದ್ದೇನೆ. ಮಲಯಾಳಂ ಚಿತ್ರರಂಗದಲ್ಲಿ ಈ ರೀತಿಯ ಸಾಕಷ್ಟು ಶೋಷಣೆಗಳು ನಡೆಯುತ್ತಿವೆ. ನಾನು ನಿಮ್ಮ ಮುಂದಿರುವ ಪ್ರತ್ಯಕ್ಷ ಸಾಕ್ಷಿ ಮತ್ತು ಬಲಿಪಶು" ಎಂದು ಬಹಿರಂಗವಾಗಿ ತಮಗಾದ ಅನುಭವವನ್ನು ನಟಿ ಸಂದರ್ಶನವೊಂದರಲ್ಲಿ ಹೇಳಿಕೊಂಡಿದ್ದಾರೆ,(ಏಜೆನ್ಸೀಸ್).