20ರ ಹೀರೋಗೆ, 29ರ ನಾಯಕಿ!; ‘ಕ್ರಿಸ್ಟಿ’ ಚಿತ್ರದಲ್ಲಿ ಥಾಮಸ್​ಗೆ ಜೋಡಿಯಾದ ಮಾಳವಿಕಾ

Hero
Published on

ಕನ್ನಡದ ‘ನಾನು ಮತ್ತು ವರಲಕ್ಷ್ಮಿ’ ಚಿತ್ರದಲ್ಲಿ ನಟಿಸಿರುವ ಮಲಯಾಳಿ ನಟಿ ಮಾಳವಿಕಾ ಮೋಹನನ್, ಐದು ವರ್ಷಗಳ ಬಳಿಕ ಮತ್ತೆ ಮಾಲಿವುಡ್​ಗೆ ಮರಳಿದ್ದಾರೆ. ಅಲ್ವಿನ್ ಹೆನ್ರಿ ನಿರ್ದೇಶಿಸುತ್ತಿರುವ ಚೊಚ್ಚಲ ಚಿತ್ರ ‘ಕ್ರಿಸ್ಟಿ’ಯಲ್ಲಿ ಮ್ಯಾಥ್ಯೂ ಥಾಮಸ್​ಗೆ ನಾಯಕಿಯಾಗಿದ್ದಾರೆ. 50, 60 ವರ್ಷದ ನಾಯಕರಿಗೆ ಜೋಡಿಯಾಗಿ 20, 30 ವರ್ಷದ ನಾಯಕಿಯರು ನಟಿಸುವುದು ಚಿತ್ರರಂಗದಲ್ಲಿ ಸಾಮಾನ್ಯ. ಅದರ ನಡುವೆ ಅಪರೂಪಕ್ಕೊಮ್ಮೆ ಚಿಕ್ಕ ವಯಸ್ಸಿನ ನಟರಿಗೆ ನಾಯಕಿಯಾಗಿ ದೊಡ್ಡ ವಯಸ್ಸಿನ ನಟಿಯರು ಕಾಣಿಸಿಕೊಳ್ಳುತ್ತಾರೆ. ಈಗ ‘ಕ್ರಿಸ್ಟಿ’ ಚಿತ್ರ ಅದೇ ಸಾಲಿಗೆ ಸೇರುತ್ತದೆ. ಅದಕ್ಕೆ ಕಾರಣ, ನಾಯಕ ಮ್ಯಾಥ್ಯೂ ಥಾಮಸ್​ಗಿನ್ನೂ 20 ವರ್ಷವಾಗಿದ್ದರೆ, ಮಾಳವಿಕಾಗೆ 29 ವರ್ಷ ವಯಸ್ಸು.

2013ರಲ್ಲಿ ‘ಪಟ್ಟಂ ಪೋಲೆ’ ಎಂಬ ಮಲಯಾಳಂ ಚಿತ್ರದ ಮೂಲಕ ಚಿತ್ರರಂಗಕ್ಕೆ ಪದಾರ್ಪಣೆ ಮಾಡಿದ ಮಾಳವಿಕಾ, 2017ರಲ್ಲಿ ‘ದಿ ಗ್ರೇಟ್ ಫಾದರ್’ ಬಳಿಕ ಮತ್ತೆ ಮಾಲಿವುಡ್​ನಲ್ಲಿ ಕಾಣಿಸಿಕೊಂಡಿರಲಿಲ್ಲ. ಕಾಲಿವುಡ್​ನಲ್ಲಿ ಬಿಜಿಯಾಗಿದ್ದ ಅವರು ‘ಪೆಟ್ಟಾ’, ‘ಮಾಸ್ಟರ್’, ‘ಮಾರನ್’ ಚಿತ್ರಗಳಲ್ಲಿ ನಟಿಸಿದ್ದರು. ಈಗ ಮತ್ತೆ ‘ಕ್ರಿಸ್ಟಿ’ ಮೂಲಕ ಮಲಯಾಳಂಗೆ ವಾಪಸ್ಸಾಗಿದ್ದಾರೆ. ಥಾಮಸ್, ಮಾಳವಿಕಾ ಜತೆ ಚಿತ್ರದಲ್ಲಿ ಜಾಯ್ ಮ್ಯಾಥ್ಯೂ, ವಿನೀತ್ ವಿಶ್ವಂ, ವೀಣಾ ನಾಯರ್, ರಾಜೇಶ್ ಮಾಧವನ್ ಪ್ರಮುಖ ತಾರಾಗಣದಲ್ಲಿದ್ದಾರೆ. ಸದ್ಯ ಬಾಲಿವುಡ್​ಗೂ ಎಂಟ್ರಿ ಕೊಟ್ಟಿರುವ ಮಾಳವಿಕಾ ‘ಯುದ್ರಾ’ ಎಂಬ ಹಿಂದಿ ಚಿತ್ರದಲ್ಲೂ ನಟಿಸುತ್ತಿದ್ದಾರೆ. - ಏಜೆನ್ಸೀಸ್

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net