

ಕೊಡಗು: ಕೌಟುಂಬಿಕ ಕಲಹಗಳು ಸಾಮಾನ್ಯವಾಗಿ ಮಹಿಳೆಯ ಸಾವಲ್ಲಿ ಕೊನೆಯಾಗುವುದು ಸಹಜ. ಆದರೆ ಇಲ್ಲೊಂದು ಕಡೆ ಪತ್ನಿಯ ಆಕ್ರೋಶಕ್ಕೆ ಪತಿಯೇ ಬಲಿಯಾಗಿದ್ದಾನೆ. ಕೊಡಗಿನಲ್ಲಿ ಇಂಥದ್ದೊಂದು ಪ್ರಕರಣ ನಡೆದಿದೆ.
ಕೊಡಗು ಜಿಲ್ಲೆಯ ವಿರಾಜಪೇಟೆ ತಾಲೂಕಿನ ಬೊಳ್ಳುಮಾಡು ಗ್ರಾಮದಲ್ಲಿ ಈ ಘಟನೆ ನಡೆದಿದೆ. ಪತಿ ಸುಂದರ (36) ಹತ್ಯೆಗೀಡಾದ ವ್ಯಕ್ತಿ. ಪತ್ನಿ ಶೋಭಾ ಕೊಲೆ ಆರೋಪಿ. ಇವರು ಇಲ್ಲಿನ ಕಾಫಿತೋಟದ ಲೈಮ್ ಮನೆಯಲ್ಲಿ ವಾಸವಾಗಿದ್ದರು.
ಪತಿ-ಪತ್ನಿ ನಡುವಿನ ಜಗಳ ವಿಕೋಪಕ್ಕೆ ತೆರಳಿದ್ದು, ಆಕ್ರೋಶಗೊಂಡ ಪತ್ನಿ ಕತ್ತಿಯಿಂದ ಪತಿಯನ್ನೇ ಹತ್ಯೆ ಮಾಡಿದ್ದಾಳೆ. ವಿರಾಜಪೇಟೆ ಗ್ರಾಮಾಂತರ ಠಾಣೆ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದು, ಕೊಲೆ ಆರೋಪಿ ಶೋಭಾಳನ್ನು ಬಂಧಿಸಿದ್ದಾರೆ.