

ಹುಬ್ಬಳ್ಳಿ: ಚುನಾವಣೆ ಹತ್ತಿರ ಇದೆ ಎನ್ನುವಾಗ ರಾಜಕಾರಣಿಗಳ ಟೆಂಪರ್ ರನ್ ಇತ್ಯಾದಿಗಳು ನಡೆಯುವುದು ಸಾಮಾನ್ಯವಾಗಿದ್ದು, ಇಂದು ವಿಧಾನಸಭೆ ವಿಪಕ್ಷ ನಾಯಕ ಸಿದ್ದರಾಮಯ್ಯ ಮಾಸ್ಕ್ ಧರಿಸಿಕೊಂಡು ದೇವಸ್ಥಾನವೊಂದಕ್ಕೆ ಭೇಟಿ ನೀಡಿ, ದೇವರ ದರ್ಶನ ಪಡೆದರು.
ಧಾರವಾಡ ಜಿಲ್ಲೆಯ ಕುಂದಗೋಳ ತಾಲೂಕಿನ ಸಂಶಿ ಗ್ರಾಮದಲ್ಲಿ ಆಯೋಜಿಸಿದ್ದ ಕನಕ ಜಯಂತಿ ಕಾರ್ಯಕ್ರಮಕ್ಕೆ ಆಗಮಿಸಿದ್ದ ಸಿದ್ದರಾಮಯ್ಯ, ಕಾರ್ಯಕ್ರಮಕ್ಕೂ ಮುನ್ನ ಸಂಶಿ ಗ್ರಾಮದ ಕರಿಸಿದ್ದೇಶ್ವರ ದೇವಸ್ಥಾನಕ್ಕೆ ಭೇಟಿ ನೀಡಿದರು.
ಕೋವಿಡ್ ಮುಂಜಾಗ್ರತಾ ಕ್ರಮವಾಗಿ ಮಾಸ್ಕ್ ಧರಿಸಿಯೇ ಪೂಜೆಯಲ್ಲಿ ಪಾಲ್ಗೊಂಡ ಅವರು, ಬಳಿಕ ದೇವಸ್ಥಾನದ ಅರ್ಚಕರ ಮನೆಯಲ್ಲಿ ಉಪಾಹಾರ ಸೇವಿಸಿದರು. ದೇವಸ್ಥಾನ ಜೀರ್ಣೋದ್ಧಾರದ ಹಿನ್ನೆಲೆಯಲ್ಲಿ ನಡೆದಿದ್ದ ಈ ಪೂಜೆಯಲ್ಲಿ ಅವರು ಪಾಲ್ಗೊಂಡು ಹೊರಬರುವಾಗ, ಮುಂದಿನ ಸಿಎಂ ಸಿದ್ದರಾಮಯ್ಯ ಎಂದು ಅಭಿಮಾನಿಗಳು ಘೋಷಣೆ ಕೂಗಿದರು.